ಆಲೂರು : ಅವರಾತ್ರಿ ಅಮಾವಾಸ್ಯೆಯ ಪ್ರಯುಕ್ತ ಜ.29 ರಂದು ಶ್ರೀಮಠದಲ್ಲಿ ಮಾಸಿಕ 51ನೇ ಜ್ಞಾನ ವೈಭವಂ ಹಾಗೂ ಐದರ ಐಸಿರಿ ವಧರ್ಂತ್ಯುತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಜುವಳ್ಳಿ ಶ್ರೀಮದ್ ರಂಭಾಪುರಿ ವೀರಸಿಂಹಾಸನ ಶಾಖಾ ಮಠದ ಪೀಠಾಧ್ಯಕ್ಷ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಯೋಧ ನಮನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪ್ರತಿ ಪೂಜೆಯಲ್ಲೂ 5 ಜನ ಯೋಧರನ್ನು ಗುರುತಿಸಿದ್ದು, ಸಾಧಕ ರತ್ನ ಪ್ರಶಸ್ತಿ ನೀಡಲಾಗುವುದು. ಮಠವು ಮುಂಬರುವ ದಿನಗಳಲ್ಲಿ ಶ್ರೀಗಳ ದರ್ಶನ, ಕಟ್ಟಡ ನಿರ್ಮಾಣ, ರೇಣುಕಾವಾಣಿ ಮಾಸಪತ್ರಿಕೆ ಬಿಡುಗಡೆ, ಸಾಧಕರಿಗೆ ಪ್ರಶಸ್ತಿ, ಪಂಚಪೀಠಾಧ್ಯಕ್ಷರನ್ನು ಬರಮಾಡಿಕೊಳ್ಳುವುದು, ಸ್ಮರಣ ಸಂಚಿಕೆ ಬಿಡುಗಡೆ, ವನದುರ್ಗ ಅಮ್ಮ ದೇವಾಲಯ ನಿರ್ಮಾಣದ ಯೋಜನೆ ಹೊಂದಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಠದಲ್ಲಿ ಪ್ರತಿ ವರ್ಷದಂತೆ ಈ ವರ್ಷದ ಡಿಸೆಂಬರ್ ತಿಂಗಳಿನಲ್ಲಿ 5 ದಿನಗಳ ಕಾಲ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಪೂರ್ವಭಾವಿ ಸಿದ್ಧತೆ ನಡೆಸಿದ್ದು, ಪಂಚಪೀಠದ 5 ಮಹಾಸ್ವಾಮೀಜಿಗಳನ್ನು ಒಂದೇ ವೇದಿಕೆಯಲ್ಲಿ ತರುವ ಪ್ರಯತ್ನ ನಡೆಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ಧಾರ್ಮಿಕ ಕಾರ್ಯದಿಂದ ಹಿಂದೆ ಉಳಿಯುತ್ತಿರುವುದರಿಂದ ವಿದ್ಯಾರ್ಥಿ ಜೀವನದಲ್ಲಿಯೇ ಧಾರ್ಮಿಕ ಪ್ರಜ್ಞೆ ಹಾಗೂ ಜಾಗೃತಿ ಮೂಡಿಸುವ ಸದುದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದರು.
ಮಠದಿಂದ ಈಗಾಗಲೇ ಮನೆಮನೆಗೆ ರೇಣುಕ, ಮನ ಮನಕೆ ರೇಣುಕ ಎಂಬ ವಿಶೇಷ ಕಾರ್ಯಕ್ರಮ, ಮಹಿಳೆಯರಿಗೆ ಬಾಗಿನ ನೀಡುವ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದೆ. ಮುಂದಿನ ದಿನಗಳಲ್ಲಿ ವಿದ್ವಾಂಸರಿಂದ ವಿಶೇಷ ವಿಚಾರಧಾರೆ ಹಾಗೂ ಆಶೀರ್ವಚನ ಕಾರ್ಯಕ್ರಮ, ಸಮಾಜದಲ್ಲಿ ವಿಶೇಷ ಸೇವೆ ಸಲ್ಲಿಸುತ್ತಿರುವ ಯೋಧರು, ರೈತರು, ಕಲಾವಿದರು, ಪತ್ರಿಕೊಧ್ಯಮಿಗಳು, ಶಿಕ್ಷಕರು, ವೈದ್ಯರ ಸೇವೆ ಗುರುತಿಸಿ ಪುರಸ್ಕರಿಸಲು ಮುಂದಾಗಿದೆ ಎಂದರು.
ಸಮಾಜದ ಅಭಿವೃದ್ಧಿಗೆ ಮಠ-ಮಾನ್ಯಗಳು ಶ್ರಮಿಸುತ್ತಿದ್ದು, ಉಳ್ಳವರು ಉದಾರ ಮನಸ್ಸಿನಿಂದ ಮಠಗಳಿಗೆ ಧಾನ-ಧರ್ಮ ಮಾಡಿ ಸಮಾಜದ ಏಳಿಗೆಗೆ ಸಹಕರಿಸಬೇಕು. ಲಿಂಗೈಕ್ಯರಾಗಿರುವ ಶ್ರೀಗಳ ಸ್ಮರಣಾರ್ಥವಾಗಿ ಮಠದ ಆವರಣದಲ್ಲಿ ನೂತನ ದೇವಾಲಯ ನಿರ್ಮಾಣ ಮಾಡಿ ಲೋಕಾರ್ಪಣೆ ಮಾಡುವ ಗುರಿ ಹೊಂದಲಾಗಿದೆ. ಮಠದ ಕಡೆಯಿಂದ ಕ್ಷಯರೋಗದಿಂದ ಬಳಲುತ್ತಿರುವ ಒಬ್ಬ ವ್ಯಕ್ತಿಗೆ 1 ವರ್ಷಕ್ಕೆ ಬೇಕಾಗುವ ಪೌಷ್ಟಿಕ ಆಹಾರದ ಕಿಟ್ ನೀಡಲಾಗಿದೆ. ತಾಲೂಕಿನ ಇಬ್ಬರು ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ವರ್ಷಕ್ಕೆ 25 ಸಾವಿರ ರೂ. ಸಹಾಯಧನ ನೀಡಲಾಗುತ್ತಿದೆ. ಲಿಂಗೈಕ್ಯ ಶ್ರೀಗಳ ಸ್ಮರಣಾರ್ಥ ಎಸ್‌ಎಸ್‌ಎಲ್‌ಸಿ, ಪಿಯುಸಿ ಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರೊತ್ಸಾಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಶ್ರೀಮಠದ ಆಡಳಿತಾಧಿಕಾರಿ ಎಸ್.ಎಸ್. ಶಿವಮೂರ್ತಿ ಸಿದ್ದಾಪುರ, ಪುರೋಹಿತರಾದ ದೇವರಾಜ್ ಶಾಸ್ತ್ರಿ, ಯಶ್ವಂತ್ ಕಾರ್ಜುವಳ್ಳಿ ಉಪಸ್ಥಿತರಿದ್ದರು.