ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ 42ನೆ ಘಟಿಕೋತ್ಸವ ಜೂ. 15ರಂದು ನಡೆಯಲಿದ್ದು, ಉದ್ಯಮಿ ಡಾ.ರೊನಾಲ್ಡ್ ಕೂಲಾಸೋ, ತುಂಬೆ ಗ್ರೂಪ್ ಸ್ಥಾಪಕಾಧ್ಯಕ್ಷ ಡಾ.ತುಂಬೆ ಮೊಯ್ದೀನ್ ಹಾಗೂ ಎಂ.ಆರ್.ಜಿ ಗ್ರೂಪ್ ಸ್ಥಾಪಕಾಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿಯವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಲಾಗುವುದು ಎಂದು ಮಂಗಳೂರು ವಿವಿಯ ಉಪ ಕುಲಪತಿ ಡಾ.ಪಿ.ಎಲ್ ಧರ್ಮ ಹೇಳಿದರು.
ಮಂಗಳೂರಿನ ವಿವಿ ಕಾಲೇಜಿನಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಈ ಬಾರಿ ಗೌರವ ಡಾಕ್ಟರೇಟ್‌ಗಾಗಿ 12 ಪ್ರಸ್ತಾವನೆಗಳು ಬಂದಿದೆ. ವಿವಿಧ ಸಾಮಾಜಿಕ, ಶೈಕ್ಷಣಿಕ ಹಾಗೂ ಉದ್ಯಮ ಕ್ಷೇತ್ರದಲ್ಲಿ ವಿವಿಧ ರೀತಿಯಲ್ಲಿ ಸಾಧನೆ ಮಾಡಿರುವ, ಸೇವೆ ನೀಡಿರುವ ಗಣ್ಯ ವ್ಯಕ್ತಿಗಳಿಗೆ ಗೌರವ ಡಾಕ್ಟರೇಟ್‌ಗಾಗಿ ಬರುವ ಪ್ರಸ್ತಾವನೆಗಳನ್ನು ಸಿಂಡಿಕೇಟ್ ಸಭೆಯಲ್ಲಿ ದಾಖಲೆಯೊಂದಿಗೆ ಇರಿಸಿ ಸಿಂಡಿಕೇಟ್ ಸಭೆಯ ನಿರ್ಣಯದ ಪ್ರಕಾರ ಕುಲಾಧಿಪತಿಗಳಿಗೆ ರವಾನಿಸಲಾಗುತ್ತದೆ. ಮೂರು ಹೆಸರುಗಳನ್ನು ಆಯ್ಕೆ ಮಾಡಿ ಕುಲಾಧಿಪತಿಗಳು ಕಳುಹಿಸಿದ್ದಾರೆ ಎಂದರು.
ಜೂ.15ರಂದು ಮಧ್ಯಾಹ್ನ 12.15ಕ್ಕೆ ಮಂಗಳೂರು ವಿವಿ ಆವರಣದಲ್ಲಿರುವ ಮಂಗಳ ಸಭಾಂಗಣದಲ್ಲಿ ಘಟಿಕೋತ್ಸವ ನಡೆಯಲಿದೆ. ಹೊಸದಿಲ್ಲಿಯ ಅಭಿವೃದ್ಧಿಶೀಲ ರಾಷ್ಟ್ರಗಳ ಸಂಶೋಧನೆ ಮತ್ತು ಮಾಹಿತಿ ವ್ಯವಸ್ಥೆಯ ಮಹಾ ನಿರ್ದೇಶಕ ಪ್ರೊ.ಸಚಿನ್ ಚತುರ್ವೇದಿ ಮುಖ್ಯ ಅತಿಥಿಯಾಗಿ ಭಾಷಣ ಮಾಡುವರು. ಕರ್ನಾಟಕದ ರಾಜ್ಯಪಾಲರು ಹಾಗೂ ವಿಶ್ವವಿದ್ಯಾನಿಲಯದ ಕುಲಾಧಿಪತಿಯಾಗಿರುವ ಥಾವರ್ ಚಂದ್ ಗೆಹ್ಲೋಟ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಿರುವರು. ರಾಜ್ಯ ಉನ್ನತ ಶಿಕ್ಷಣ ಸಚಿವ ಹಾಗೂ ವಿವಿಯ ಸಹಕುಲಾಧಿಪತಿ ಡಾ.ಎಂ.ಸಿ.ಸುಧಾಕರ್ ಈ ಬಾರಿ ಸರ್ಕಾರದ ನಿಯಮದಂತೆ ಘಟಿಕೋತ್ಸವದಲ್ಲಿ ಐದು ನಿಮಿಷಗಳ ಕಾಲ ಮಾತನಾಡುವ ಅವಕಾಶವಿದೆ ಎಂದರು.
ವಿವಿ ಆಡಳಿತ ವಿಭಾಗದ ಕುಲಸಚಿವ ರಾಜುಮೊಗವೀರ, ಹಣಕಾಸು ಅಧಿಕಾರಿ ಪ್ರೊ. ಸಂಗಪ್ಪ, ಪರೀಕ್ಷಾಂಗ ಕುಲಸಚಿವ ಡಾ. ದೇವೇಂದ್ರಪ್ಪ ಉಪಸ್ಥಿತರಿದ್ದರು.
-----------------------
155 ಮಂದಿ ಸಂಶೋಧನಾರ್ಥಿಗಳಿಗೆ ಪಿಎಚ್‌ಡಿ ಪದವಿ
ಘಟಿಕೋತ್ಸವದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ 155 ಸಂಶೋಧನಾರ್ಥಿಗಳಿಗೆ ಪಿ.ಎಚ್.ಡಿ. ಡಾಕ್ಟರೇಟ್ ಪದವಿ (ಕಲೆ -51, ವಿಜ್ಞಾನ -73, ವಾಣಿಜ್ಯ 26, ಶಿಕ್ಷಣ -05) ಇವರಲ್ಲಿ 60 ಮಹಿಳೆಯರು ಮತ್ತು 95 ಪುರುಷರು. ಈ ಬಾರಿ 18 ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಹಾಗೂ 4 ಅಂತಾರಾಷ್ಟ್ರೀಯ ಮಹಿಳಾ ವಿದ್ಯಾರ್ಥಿಗಳು ಪಿ.ಎಚ್.ಡಿ ಪದವಿ ಪಡೆಯಲಿರುವರು. 58 ಚಿನ್ನದ ಪದಕ ಮತ್ತು 57 ನಗದು ಬಹುಮಾನಗಳಿದ್ದು, ವಿವಿಧ ಕೋರ್ಸ್‌ಗಳ ಒಟ್ಟು 168ರ‌್ಯಾಂಕ್‌ಗಳಲ್ಲಿ ಪ್ರಥಮ ರ‌್ಯಾಂಕ್ ಪಡೆದ 72 ಮಂದಿಗೆ ರ‌್ಯಾಂಕ್ ಪ್ರಮಾಣ ಪತ್ರ ನೀಡಲಾಗುವುದು. ಇವರಲ್ಲಿ ಸ್ನಾತಕೋತ್ತರ ಪದವಿ 52 ಮತ್ತು 20 ಪದವೀಧರರು ಎಂದರು. ಮಂಗಳೂರು ವಿಶ್ವವಿದ್ಯಾನಿಲಯ 2022-23ನೆ ಸಾಲಿಗೆ ನಡೆಸಿದ ವಿವಿಧ ಪರೀಕ್ಷೆಗಳಲ್ಲಿ ಒಟ್ಟು 29465 ವಿದ್ಯಾರ್ಥಿಗಳು ಹಾಜರಾಗಿದ್ದು, 21319 (ಶೇ. 72.35) ಉತ್ತೀರ್ಣರಾಗಿದ್ದಾರೆ. ಇದರಲ್ಲಿ ಸ್ನಾತಕೋತ್ತರ ಪದವಿ ಪರೀಕ್ಷೆಗೆ 3277 ವಿದ್ಯಾರ್ಥಿಗಳು ಹಾಜರಾಗಿದ್ದು, 2094 (ಶೇ. 94.42) ಮಂದಿ ಉತ್ತೀರ್ಣರಾಗಿದ್ದಾರೆ ಎಂದು ಡಾ. ಧರ್ಮ ಮಾಹಿತಿ ನೀಡಿದರು.