ಮೈಸೂರು: ಅನ್ನಪೂರ್ಣ ಕಣ್ಣಿನ ಆಸ್ಪತ್ರೆ, ಸಮೃದ್ಧಿ ಟ್ರಸ್ಟ್ ಮತ್ತು ವೈಟ್ ಸ್ವಾನ್ ಅಸೆಥೆಟಿಕ್ಸ್ ಸಂಸ್ಥೆಗಳ ಸಹಯೋಗದಲ್ಲಿ ವಿಜಯನಗರದ ಶ್ರೀಯೋಗ ನರಸಿಂಹಸ್ವಾಮಿ ದೇವಸ್ಥಾನದ ಆವರಣದಲ್ಲಿ ಶನಿವಾರ ಆರೋಗ್ಯ ತಪಾಸಣೆ ಉಚಿತ ಶಿಬಿರ ಆಯೋಜಿಸಲಾಗಿತ್ತು.
ದೇವಸ್ಥಾನದ ಆಡಳಿತಾಧಿಕಾರಿ ಎನ್.ಶ್ರೀನಿವಾಸನ್ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಇಂದು ಎಷ್ಟೇ ಹಣ, ಸಂಪತ್ತು ಇದ್ದರೂ ಆರೋಗ್ಯವೇ ಮಹಾ ಸಂಪತ್ತಾಗಿದೆ. ಆರೋಗ್ಯ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಇಂದಿನ ವೈದ್ಯರು ದೇವರ ರೂಪದಲ್ಲಿ ಜನರ ಸೇವೆ ಮಾಡುತ್ತಿದ್ದಾರೆ. ಈ ಶಿಬಿರವು ಸಾರ್ವಜನಿಕರಲ್ಲಿ ಆರೋಗ್ಯದ ಮಹತ್ವವನ್ನು ಮನವರಿಕೆ ಮಾಡಿಕೊಡುತ್ತದೆ ಎಂದು ಹೇಳಿದರು.
ಸಮೃದ್ಧಿ ಟ್ರಸ್ಟ್ ಅಧ್ಯಕ್ಷೆ ಸಹನಾ, ವೈಟ್ ಸ್ವಾನ್ ಅಸೆಥೆಟಿಕ್ಸ್‌ನ ದಂತ ವೈದ್ಯೆ ಡಾ.ನಿಷಿಕಗೌಡ, ಅನ್ನಪೂರ್ಣ ಕಣ್ಣಿನ ಆಸ್ಪತ್ರೆಯ ವೈದ್ಯರ ತಂಡ ಸೇರಿದಂತೆ ಇನ್ನಿತರರಿದ್ದರು.
ಕಣ್ಣು ಹಾಗೂ ದಂತ ತಪಾಸಣೆ ಮಾಡಲಾಯಿತಲ್ಲದೇ ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ ಮೂಡಿಸಲಾಯಿತು. ಶಿಬಿರದಲ್ಲಿ 300ಕ್ಕೂ ಹೆಚ್ಚು ನಾಗರಿಕರು ಭಾಗವಹಿಸಿ ತಪಾಸಣೆ ಮಾಡಿಸಿಕೊಂಡರು.