ಬೆಂಗಳೂರು: ಬಿಬಿಎಂಪಿಯ 2020-21ನೇ ಸಾಲಿನ ಆಯವ್ಯಯ ಸೋಮವಾರ ಮದ್ಯಾಹ್ನ 12 ಗಂಟೆಗೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್. ಶ್ರೀನಿವಾಸ್ ವಿಡಿಯೋ ಕಾನ್ಪರೆನ್ಸ್ ಮೂಲಕ ಮಂಡಿಸಲಿದ್ದಾರೆ.
ರಾಜ್ಯದಲ್ಲಿ ಲಾಕ್ಡೌನ್ ಜಾರಿಯಲ್ಲಿರುವ ಕಾರಣ ಸರ್ಕಾರ ವಿಪತ್ತು ನಿರ್ವಹಣೆ ಕಾಯ್ದೆಯಡಿ ವಿಡಿಯೋ ಕಾನ್ಪರೆನ್ಸ್ನ ಮೂಲಕ ಬಜೆಟ್ ಮಂಡನೆಗೆ ಅವಕಾಶ ನೀಡಿದೆ. ಆದರೆ, ಕೆಎಂಸಿ ಕಾಯ್ದೆ ಅನ್ವಯ ಮೂರನೇ ಒಂದರಷ್ಟು (1/3)ಕೋರಂ ಕೊರತೆಯಾಗದಂತೆ ಬಜೆಟ್ ಮಂಡನೆ ಮಾಡಬೇಕಾಗಿದೆ. ಹೀಗಾಗಿ ಮೇಯರ್ ಅಧ್ಯಕ್ಷತೆಯಲ್ಲಿ ಬಜೆಟ್ ಸಭೆ ನಡೆಸಲಾಗುತ್ತಿದ್ದು, ಉಳಿದ ಸದಸ್ಯರು ವಲಯವಾರು ನಿಗದಿ ಪಡಿಸಿದ ಸ್ಥಳದಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ಭಾಗವಹಿಸುವ ಹಾಗೂ ಅಭಿಪ್ರಾಯ ವ್ಯಕ್ತಪಡಿಸುವುದಕ್ಕೂ ಅವಕಾಶ ಮಾಡಿಕೊಡಲಾಗಿದೆ.
ಬಜೆಟ್ನಲ್ಲಿ ಭಾಗವಹಿಸುವವರು: ಉಪಮೇಯರ್ ರಾಮಮೋಹನರಾಜು, ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್, ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್, ಜೆಡಿಎಸ್ ಪಕ್ಷದ ನಾಯಕಿ ನೇತ್ರಾ ನಾರಾಯಣ್, ಪಾಲಿಕೆ ಆಯುಕ್ತ ಬಿ.ಎಚ್. ಅನಿಲ್ಕುಮಾರ್, ಹಣಕಾಸು ವಿಭಾಗದ ವಿಶೇಷ ಆಯುಕ್ತ ಡಾ.ಎಂ. ಲೋಕೇಶ್, ಜಂಟಿ ಆಯುಕ್ತ ಎಸ್. ವೆಂಕಟೇಶ್, ಕೌನ್ಸಿಲ್ ಕಾರ್ಯದರ್ಶಿ ಸೇರಿ ಇತರೆ ವಿಶೇಷ ಆಯುಕ್ತರು ಭಾಗವಹಿಸಲಿದ್ದಾರೆ. ಪಾಲಿಕೆ 11 ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಮಾಧ್ಯಮ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಲಿದ್ದಾರೆ.
ವಲಯ ಕಚೇರಿಗಳಲ್ಲಿ ವೀಡಿಯೋ ಕಾನ್ಪರೆನ್ಸ್: ಕೇಂದ್ರ ಕಚೇರಿ ಬಜೆಟ್ ಸಭೆ ಬಿಟ್ಟು ಉಳಿದ ಸದಸ್ಯರು ಹಾಗೂ ಇತರೆ ಜನಪ್ರತಿನಿಧಿಗಳು ವಲಯವಾರು ಗುರುತಿಸಿದ ಸ್ಥಳಗಳಲ್ಲಿ ವೀಡಿಯೋ ಕಾನ್ಪರೆನ್ಸ್ ಮೂಲಕ ಬಜೆಟ್ನಲ್ಲಿ ಭಾಗವಹಿಲಿದ್ದಾರೆ. ಕೇಂದ್ರ ಕಚೇರಿ ಹಾಗೂ ಎಲ್ಲ 8 ವಲಯಗಳ ಕಚೇರಿಗಳಲ್ಲಿ ಈಗಾಗಲೇ ಬಜೆಟ್ ವಿಡಿಯೋ ಕಾನ್ಪರೆನ್ಸ್ಗೆ ಬೇಕಾದ ಅಗತ್ಯ ಸಿದ್ಧತೆಗಳನ್ನು ಮಾಡಲಾಗಿದೆ. ಸಾಮಾಜಿಕ ಅಂತರದಲ್ಲಿ ಆಸನಗಳ ವ್ಯವಸ್ಥೆ, ಎಲ್ಲರೂ ಕಾಣುವಂತೆ ಕ್ಯಾಮೆರಾ, ಮಾತನಾಡಲು ಮೈಕ್ಗಳು, ದೊಡ್ಡದಾದ ಟಿವಿ ಪರದೆ ಅಳವಡಿಸಲಾಗಿದೆ.
ಸೋಂಕು ಲಕ್ಷಣಗಳಿದ್ದರೆ ವಾಪಸ್: ಎಲ್ಲ ವಲಯಗಳಲ್ಲಿ ನಿಗದಿ ಪಡಿಸಲಾದ ವೀಡಿಯೋ ಕಾನ್ಪರೆನ್ಸ್ ಸಭೆಯಲ್ಲಿ ಭಾಗವಹಿಸಲು ಆಗಮಿಸುವವರನ್ನು ಕಡ್ಡಾಯವಾಗಿ ತಪಾಸಣೆ ಮಾಡಲಾಗುತ್ತದೆ. ಜ್ವರ, ಕೆಮ್ಮು, ಉಸಿರಾಟ ತೊಂದರೆ ಇದ್ದರೆ ಅವರನ್ನು ವಾಪಸ್ ಕಳಿಸಲಾಗುತ್ತದೆ. ಔಷಧ ಸಿಂಪಡಣೆ, ಎಸಿ ನಿರೋಧಕ ವ್ಯವಸ್ಥೆ, ಮಾಸ್ಕ್ ಬಳಸುವಿಕೆ ಹಾಗೂ ಸ್ಯಾನಿಟೈಸರ್ ಬಳಕೆ ಕಡ್ಡಾಯವಾಗಿರುತ್ತದೆ.
ಪತ್ರಿಕಾ ವಿತರಕರಿಗೆ ವಿಮೆ? ಬಿಬಿಎಂಪಿ ಪತ್ರಕರ್ತರಿಗೆ 2 ಲಕ್ಷ ರೂ. ವಿಮೆ ಹಾಗೂ 5 ಲಕ್ಷ ರೂ. ಅಪಘಾತವಿಮೆ, ಹಾಲು ಹಾಕುವ ಹಾಗೂ ದಿನಪತ್ರಿಕೆ ಹಂಚುವವರಿಗೆ ತಲಾ 2 ಲಕ್ಷ ರೂ. ಅಪಘಾತವಿಮೆ ಸೌಲಭ್ಯ ಸಿಗುವ ಸಾಧ್ಯತೆಯಿದೆ. ದಿನಪತ್ರಿಕೆ, ವಾರಪತ್ರಿಕೆ ಹಾಗೂ ಮಾಸಿಕ ಪತ್ರಿಕೆಗಳ ಮಾರಾಟಕ್ಕೆ ವಾರ್ಡ್ವಾರು ಮಳಿಗೆ ಸ್ಥಾಪನೆ, ದೀನ್ ದಯಾಳ್ ಉಪಾಧ್ಯಾಯ ಹೆಸರಿನಲ್ಲಿ ಮಕ್ಕಳ ಆಸ್ಪತ್ರೆ ಸ್ಥಾಪನೆಗೂ ಅನುದಾನ ಸಿಗುವ ಸಾಧ್ಯತೆಯಿದೆ. ಒಟ್ಟು 10,500 ಕೋಟಿ ರೂ, ನಿಂದ 11 ಸಾವಿರ ಕೋಟಿ ರೂ. ಮೊತ್ತದ ಆಯವ್ಯಯ ಮಂಡನೆಯಾಗುವ ಸಾಧ್ಯತೆಗಳಿವೆ.
ವೆಬ್ಸೈಟ್ ಮೂಲಕ ಜನರಿಗೆ ವೀಕ್ಷಣೆ: ಆಯವ್ಯಯ ಮಂಡನೆ ವಿಡಿಯೋ ಕಾನ್ಪರೆನ್ಸ್ಗೆ ಸರ್ಕಾರದ ಅಧಿಕೃತ ವೆಬ್ಸೈಟ್ ಏಚಿಡಿಟಿಚಿಣಚಿಞಚಿ ಣಚಿಣಜ ತಿಜಜ ಚಿಡಿಜಚಿ ಟಿಜಣತಿಠಡಿಞ ಸಂಪರ್ಕ ಬಳಸಲಾಗುತ್ತಿದೆ. ಬಜೆಟ್ ಮಂಡನೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಯಾವುದೇ ತಾಂತ್ರಿಕ ಸಮಸ್ಯೆಯಾಗದಂತೆ ಪರಿಶೀಲನೆಯನ್ನೂ ಮಾಡಲಾಗಿದೆ. ಹೀಗಾಗಿ, ಇನ್ನು ಬಿಬಿಎಂಪಿಯ ಅಧಿಕೃತ ವೆಬ್ಸೈಟ್ kಣಣಠಿ://ಛಛಟಠಿ.ರಠತ.ಟಿ ಮೂಲಕ ಸಾರ್ವಜನಿಕರೂ ಬಜೆಟ್ ನೋಡಬಹುದು ಎಂದು ಪಾಲಿಕೆ ಕೌನ್ಸಿಲ್ ಕಾರ್ಯದರ್ಶಿ ಜಿ.ಹೇಮಂತ್ ಶರಣ್ ತಿಳಿಸಿದ್ದಾರೆ.
ಸಭೆ ಮತ್ತು ವಿಡಿಯೋ ಕಾನ್ಪರೆನ್ಸ್ ನಡೆವ ಸ್ಥಳಗಳು
ಕೇಂದ್ರ ಕಚೇರಿ- ಕೆಂಪೇಗೌಡ ಪೌರ ಸಭಾಂಗಣ, ಎನ್.ಆರ್. ಚೌಕ, ಬೆಂಗಳೂರು
ಪೂರ್ವ ವಲಯ- ಕೆನೋಪಿ ಹೋಟೆಲ್, ಪಬ್ಲಿಕ್ ಯುಟಿಲಿಟಿ ಕಟ್ಟಡ. (ಮೇಯೋಹಾಲ್).
ಪಶ್ಚಿಮ ವಲಯ- ಐಪಿಪಿ ಕಚೇರಿ, ಮಲ್ಲೇಶ್ವರ.
ದಕ್ಷಿಣ ವಲಯ- ಅಶ್ವಥ್ ಕಲಾಭವನ, (ಅಡಿಟೋರಿಯಂ), ನರಸಿಂಹರಾಜ ಕಾಲನಿ.
ಬೊಮ್ಮನಹಳ್ಳಿ ವಲಯ- ಜಂಟಿ ಆಯುಕ್ತರ ಕಚೇರಿ ಸಭಾಂಗಣ, ಬೇಗೂರು.
ಯಲಹಂಕ- ಮಿನಿ ವಿಧಾನಸೌಧ ಕಟ್ಟಡ, 3ನೇ ಮಹಡಿ, ಸಭಾ ಕೊಠಡಿ, ಯಲಹಂಕ.
ಆರ್.ಆರ್. ನಗರ- ರಾಜರಾಜೇಶ್ವರಿ ನಗರ ವಲಯ ಕಚೇರಿ, ಸಭಾಂಗಣ ಕೊಠಡಿ.
ದಾಸರಹಳ್ಳಿ- ದಾಸರಹಳ್ಳಿ ವಲಯದ ಜಂಟಿ ಆಯುಕ್ತರ ಕಚೇರಿ, ಹೆಸರಘಟ್ಟ ಮುಖ್ಯರಸ್ತೆ.
ಮಹದೇವಪುರ ವಲಯ- ಶೆಹರಟನ್ ಗ್ರಾ್ಯಂಡ್ ಹೋಟೆಲ್, ಪ್ರಸ್ಟೇಜ್ ಶಾಂತಿನಿಕೇತನ, ಹೂಡಿ.