ಜಿಲ್ಲೆ

ತಂಬಾಕು ನಿಷೇಧ ಸೂಚನಾಫಲಕ ಕಡ್ಡಾಯ

ಶಿವರಾಜ.ಎಂ

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಶಾಲಾ-ಕಾಲೇಜು ಸೇರಿ ಜಿಲ್ಲೆಯ ಎಲ್ಲ ಸಾರ್ವಜನಿಕ ಪ್ರದೇಶಗಳಲ್ಲಿ ತಂಬಾಕು ನಿಷೇಧ ಕುರಿತ ಸೂಚನಾ ಫಲಕ ಕಡ್ಡಾಯವಾಗಿ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿ ಎ.ಬಿ.ಬಸವರಾಜು ವಿವಿಧ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ದೇವನಹಳ್ಳಿಯ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಪ್ರಗತಿ ಪರಿಶಿಲನಾ ಸಭೆ ಮತ್ತು ಜಿಲ್ಲಾ ಕಣ್ಗಾವಲು ಸಮಿತಿ ಮತ್ತು ಜಿಲ್ಲಾ ಕಾರ್ಯಕಾರಿ ಸಮಿತಿಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚು ಜಾಗೃತಿ ಮೂಡಿಸುವುದು ಹಾಗೂ ಮಕ್ಕಳ ಆರೋಗ್ಯ ಮತ್ತು ಉಜ್ವಲ ಭವಿಷ್ಯವನ್ನು ಕಾಪಾಡುವ ನಿಟ್ಟಿನಲ್ಲಿ ತಂಬಾಕು ನಿಯಂತ್ರಣ ಮತ್ತು ಜಾಗೃತಿ ಮುಖ್ಯವಾಗಿರುತ್ತದೆ ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ನಿಯಮಪಾಲನೆಗೆ ಒತ್ತು ನೀಡಬೇಕು. ಎಲ್ಲಿಯಾದರೂ ತಂಬಾಕು ನಿಯಮಗಳನ್ನು ಉಲ್ಲಂಸಿರುವುದು ಕಂಡುಬಂದರೆ ಕೂಡಲೇ ಕಾನೂನು ಕ್ರಮ ಜರುಗಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕಠಿಣ ಕ್ರಮಕ್ಕೆ ಸೂಚನೆ: ಜಿಲ್ಲೆಯಲ್ಲಿರುವ ಎಲ್ಲ ಶಾಲಾ, ಕಾಲೇಜು ಹಾಗೂ ವಿಶ್ವವಿದ್ಯಾಲಯಗಳನ್ನು ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆಗಳೆಂದು ಘೋಷಿಸಲು ಹಾಗೂ ಇಅ ಖಛ್ಚಿ 6ಚಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಎಲ್ಲ ಶೈಕ್ಷಣಿಕ ಸಂಸ್ಥೆಗಳ ಸುತ್ತ 100 ಗಜ ಅಂತರದಲ್ಲಿ ತಂಬಾಕು ವ್ಯಾಪಾರ ಮಾಡುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಡಿಸಿ ಸೂಚಿಸಿದರು. ಎಲ್ಲ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳ ವ್ಯಾಪ್ತಿಯಲ್ಲಿ ಅಂಗಡಿ ಮಾಲೀಕರು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಲು ಪ್ರತ್ಯೇಕವಾದ ಪರವಾನಗಿ ಪಡೆಯಬೇಕು. ಎಲ್ಲ ಪರವಾನಗಿ ಹೊಂದಿರುವ ತಂಬಾಕು ಮಾರಾಟ ಅಂಗಡಿ ಮುಂಗಟ್ಟುಗಳು ತಂಬಾಕು ನಿಷೇಧ ಸೂಚನಾ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಿರಬೇಕು. ಇದನ್ನು ಅಧಿಕಾರಿಗಳು ಗಮನಿಸಬೇಕು ಎಲ್ಲಿಯಾದರೂ ನಿಷೇಧ ಸೂಚನಾ ಲಕ ಅಳವಡಿಸದಿರುವುದು ಕಂಡು ಬಂದರೆ ಕೂಡಲೇ ನೋಟಿಸ್ ನೀಡಿ ಮುಂದಿನ ಕ್ರಮಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

ವ್ಯಾಪಾರಿಗಳು ಪಾಲಿಸುತ್ತಿಲ್ಲ: 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ತಂಬಾಕು ಮಾರಾಟ ಮಾಡುವಂತಿಲ್ಲ. ಬೀಡಿ, ಸಿಗರೇಟು ಗುಟ್ಕಾವನ್ನು ಮಕ್ಕಳಿಗೆ ಮಾರಾಟ ಮಾಡಬಾರದೆಂಬ ನಿಯಮಗಳಿದ್ದರೂ ವ್ಯಾಪಾರಿಗಳು ಪಾಲಿಸುತ್ತಿಲ್ಲ ಎಂದು ಸಿಡಿಮಿಡಿ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು ನಿಷೇಧಿತ ಸ್ಥಳಗಳಲ್ಲಿ ತಂಬಾಕು ಮಾರಾಟ ಮತ್ತು ಸೇವನೆ ಹಾಗೂ ತಂಬಾಕು ಮಾರಾಟ ಪರವಾನಗಿ ಇಲ್ಲದೇ ಮಾರಾಟ ಮಾಡಿದವರಿಗೆ ದಂಡ ವಿಧಿಸಲಾಗಿತ್ತದೆ ಜತೆಗೆ ಶಿಕ್ಷೆಗೆ ಗುರಿಯಾಗಬಹುದು ಎಂದು ಎಚ್ಚರಿಕೆ ನೀಡಿದರು.

96 ದಾಳಿಗಳು, 41920 ದಂಡ ವಸೂಲಿ

ಜಿಲ್ಲಾ ತಂಬಾಕು ನಿಯಂತ್ರಣ ಘಟಕದಿಂದ ಕೋಟ್ಪಾ-2003 ಕಾಯ್ದೆ ಅನ್ವಯ ಏಪ್ರಿಲ್ 2025 ರಿಂದ ಆಗಸ್ಟ್‌ವರೆಗೆ ಜಿಲ್ಲೆಯಾದ್ಯಂತ ವಿವಿಧ ಅಂಗಡಿ ಮುಂಗಟ್ಟುಗಳ ಮೇಲೆ 96 ದಾಳಿ ನಡೆಸಿದ್ದು, ನಿಯಮಗಳ ಉಲ್ಲಂಘನೆ ಮಾಡಿದವರ ವಿರುದ್ಧ ಸೆಕ್ಷನ್ 4 ರ ಅಡಿಯಲ್ಲಿ 334 ಪ್ರಕರಣಗಳನ್ನು ದಾಖಲಿಸಿ 41920 ರೂಪಾಯಿ ದಂಡ ಸಂಗ್ರಹಿಸಲಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಹೇಮಾವತಿ ಸಭೆಗೆ ಮಾಹಿತಿ ನೀಡಿದರು.