ಶಿವರಾಜ.ಎಂ ಬೆಂಗಳೂರು ಗ್ರಾಮಾಂತರ
ನಿಯಮ ಬಾಹಿರವಾಗಿ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿರುವ ವಾಣಿಜ್ಯ ಮಳಿಗೆಗಳಿಗೆ ಕಡಿವಾಣ ಹಾಕುವ ಸಂಬಂಧ ಟ್ರೇಡ್ ಲೈಸೆನ್ಸ್ ಕಡ್ಡಾಯ ಮಾಡುವ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಇದಕ್ಕಾಗಿ ಜಿಲ್ಲೆಯಲ್ಲಿನ ನಗರಸಭೆ ಹಾಗೂ ಪುರಸಭೆಯಲ್ಲಿ ಕಮಿಟಿ ರಚನೆಯಾಗಿದ್ದು, ಶೀಘ್ರದಲ್ಲೆ ಜಿಲ್ಲೆಯಲ್ಲಿ ಅನುಷ್ಟಾನಗೊಳ್ಳಲಿದೆ.
ಈಗಾಗಲೇ ಜಿಲ್ಲಾ ತಂಬಾಕು ನಿಯಂತ್ರಣ ಘಟಕದಿಂದ ಜಿಲ್ಲಾಧಿಕಾರಿಗೆ ವರದಿ ಸಲ್ಲಿಕೆಯಾಗಿದ್ದು, ಜಿಲ್ಲಾಧಿಕಾರಿ ಕಡೆಯಿಂದ ಜಿಲ್ಲೆಯ ಎಲ್ಲ ನಗರಸಭೆ ಹಾಗೂ ಪುರಸಭೆಗಳಿಗೆ ಆದೇಶ ರವಾನೆಯಾಗಿದೆ ಎನ್ನಲಾಗಿದ್ದು, ಈ ಕಾಯ್ದೆ ಜಾರಿಗೆ ಪುರಸಭೆ ಹಾಗೂ ನಗರಸಭೆಗಳಲ್ಲಿ ಕಮಿಟಿ ಸಿದ್ದವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದಲ್ಲೇ ಮೊದಲ ಬಾರಿಗೆ ದಾವಣಗೆರೆ ಮಹಾನಗರ ಪಾಲಿಗೆ ವ್ಯಾಪ್ತಿಯಲ್ಲಿ ಈ ಆದೇಶ ಜಾರಿಯಾಗಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ನೀತಿ ಜಾರಿಗೊಳಿಸಲು ಜಿಲ್ಲಾಡಳಿತ ಉತ್ಸುಕವಾಗಿದ್ದು, ಶೀಘ್ರದಲ್ಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜಾರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಾವಣಗೆರೆ ನಗರ ವ್ಯಾಪ್ತಿಯಲ್ಲಿ ಈ ಮೊದಲು ತಂಬಾಕು ಉತ್ಪನ್ನ ಮಾರಾಟದ ಸಾವಿರಾರು ಮಳಿಗೆಗಳಿದ್ದು, ಈ ನೀತಿ ಜಾರಿಯಾದ ಬಳಿಕ ಶೇ.80 ಮಳಿಗೆಗಳಲ್ಲಿ ಉತ್ಪನ್ನ ಮಾರಾಟ ಬಂದ್ ಆಗಿದೆ ಎನ್ನಲಾಗಿದೆ.
ತಂಬಾಕು ಮಾರಾಟಕ್ಕೆ ಕಡಿವಾಣ: ವಾಣಿಜ್ಯ ಮಳಿಗೆಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಲೈಸೆನ್ಸ್ ಪಡೆಯಲು ಕೆಲವೊಂದು ಕಠಿಣ ನಿಯಮಗಳನ್ನು ಅಳವಡಿಸಿರುವುದರಿಂದ ಹೆಚ್ಚಿನ ಮಂದಿ ಲೈಸೆನ್ಸ್ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ ಅಲ್ಲದೆ ದೇವಸ್ಥಾನ, ಶಾಲೆ, ಕೋರ್ಟ್ ಆವರಣ, ಸರ್ಕಾರಿ ಕಚೇರಿಗಳ ಆವರಣ ಸೇರಿ ಹಲವು ಕಡೆಗಳಲ್ಲಿ ಎಲ್ಲೆಂದರಲ್ಲಿರುವ ಅಂಗಡಿಯವರು ಲೈಸೆನ್ಸ್ ಪಡೆಯುವುದು ಕಷ್ಟಸಾಧ್ಯವಾಗಿರುವುದರಿಂದ ತಂಬಾಕು ಉತ್ಪನ್ನ ಮಾರಾಟ ತಡೆಗೆ ಈ ನೀತಿ ಸಹಕಾರಿಯಾಗಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ. ಮುಖ್ಯವಾಗಿ ಶಾಲೆಗಳ 100 ಗಜದ ಅಂತರದಲ್ಲಿನ ಯಾವುದೇ ಮಳಿಗೆಗಳಲ್ಲಿ ತಂಬಾಕು ಉತ್ಪನ್ನ ಮಾರಾಟಕ್ಕೆ ಅವಕಾಶವಿಲ್ಲದಿರುವುದು ಇಂಥವರಿಗೆ ಲೈಸೆನ್ಸ್ ಸಿಗುವುದಿಲ್ಲ. ಲೈಸೆನ್ಸ್ ಪಡೆಯುವ ಸಂಬಂಧ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಯ ಕೆಲವು ನಿಯಮಗಳನ್ನು ಪಾಲಿಸಬೇಕು. ಹಾಗೆಯೇ ಕೇಳಿದ ಅಗತ್ಯ ದಾಖಲೆಗಳನ್ನು ವಾಣಿಜ್ಯ ಮಳಿಗೆ ಮಾಲೀಕರು ನೀಡಬೇಕು. ಅವರಿಂದ ಒಪ್ಪಿಗೆ ಪಡೆದ ಬಳಿಕ ಜಿಲ್ಲಾ ತಂಬಾಕು ನಿಯಂತ್ರಣದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ ಬಳಿಕ ಎಲ್ಲವೂ ಸರಿಯಾಗಿದ್ದಾರೆ ಮಾತ್ರ ಪರವಾನಗಿ ಅಧಿಕೃತವಾಗಲಿದೆ.
---
ತಂಬಾಕು ನಿಯಂತ್ರಿಸಲು ರೂಪುಗೊಂಡಿರುವ ಸ್ಟಾಪ್ ಟ್ಯೊಬ್ಯಾಕೋ ಆ್ಯಪನ್ನು ಅಧಿಕಾರಿಗಳು ಸೇರಿ ಸಾರ್ವಜನಿಕರು ಸಹ ಬಳಸಬಹುದಾಗಿದೆ. ಕಾನೂನು ಬಾಹಿರವಾಗಿ ತಂಬಾಕು ಮಾರಾಟ ಮಾಡುತ್ತಿರುವ ಪ್ರದೇಶದ ಕುರಿತು ಈ ಆ್ಯಪ್ ಮೂಲಕ ಸಾರ್ವಜನಿಕರು ಮಾಹಿತಿ ನೀಡಬಹುದಾಗಿದೆ. ಮಾಹಿತಿ ನೀಡಿದ ಸಾರ್ವಜನಿಕರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು. ತಂಬಾಕು ಬಳಕೆಯನ್ನು ನಿಯಂತ್ರಿಸಲು ಸಾರ್ವಜನಿಕರು ಸಹ ಸಹಕಾರ ನೀಡಬೇಕು.
ಡಾ.ಎನ್.ಶಿವಶಂಕರ್, ಜಿಲ್ಲಾಧಿಕಾರಿ
ತಂಬಾಕು ಉತ್ಪನ್ನ ಮಾರಾಟಕ್ಕೆ ಸಂಬಂಧಿಸಿದಂತೆ ಟ್ರೇಡ್ ಲೈಸೆನ್ಸ್ ಕಡ್ಡಾಯಗೊಳಿಸುವ ಸಂಬಂಧ ಈಗಾಗಲೇ ಜಿಲ್ಲಾಧಿಕಾರಿಗೆ ವರದಿ ನೀಡಲಾಗಿದೆ, ಇದಕ್ಕೆ ಸಂಬಂಧಪಟ್ಟಂತೆ ಜಿಲ್ಲೆಯ ನಾಲ್ಕೂ ತಾಲೂಕುಗಳ ನಗರಸಭೆ ಹಾಗೂ ಪುರಸಭೆಗಳಲ್ಲಿ ಕಮಿಟಿ ರಚನೆಯಾಗಿದ್ದು, ಕಾಯ್ದೆ ಅನುಷ್ಟಾನಕ್ಕೆ ಸಿದ್ದತೆ ನಡೆದಿದೆ. ಈ ಪರವಾನಗಿ ವ್ಯವಸ್ಥೆಯಿಂದ ಅಕ್ರಮ ವ್ಯಾಪಾರಕ್ಕೆ ಕಡಿವಾಣ ಬೀಳುತ್ತದೆ. ಮುಖ್ಯವಾಗಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ತಂಬಾಕು ಉತ್ಪನ್ನಗಳು ಸುಲಭವಾಗಿ ಸಿಗುವುದಿಲ್ಲ.
ಡಾ.ವಿದ್ಯಾರಾಣಿ. ಜಿಲ್ಲಾ ಸಲಹೆಗಾರ್ತಿ, ತಂಬಾಕು ನಿಯಂತ್ರಣ ಘಟಕ
ಧೂಮಪಾನ ಸಾಮಾನ್ಯವಾಗಿ ಹೃದಯ ಮತ್ತು ಶ್ವಾಸಕೋಶದ ಮೇಲೆ ಪರಿಣಾಮ ಬೀರುವ ರೋಗಗಳಿಗೆ ಕಾರಣವಾಗುತ್ತದೆ, ಆರೋಗ್ಯ ಸಮಸ್ಯೆಗಳ ಮೊದಲ ಚಿಹ್ನೆಗಳಾಗಿ ಕೈಕಾಲುಗಳಲ್ಲಿ ಮರಗಟ್ಟುವಿಕೆ ಕಂಡುಬರುತ್ತವೆ, ಧೂಮಪಾನ ಹೃದಯಾಘಾತ , ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ, ಬೀಡಿ, ಸಿಗರೇಟು ಸೇರಿ ತಂಬಾಕನ್ನು ಬೇರೆ ಬೇರೆ ರೂಪಗಳಲ್ಲಿ ಸೇವಿಸುವುದು ಆರೋಗ್ಯಕ್ಕೆ ಹಾನಿಕರ.
ಮಹೇಶ್, ಆರೋಗ್ಯ ನಿರೀಕ್ಷಣಾಧಿಕಾರಿ