ಜಿಲ್ಲೆ

ಮೈಸೂರಿನಲ್ಲಿ ತಂಬಾಕು ವಿರುದ್ಧ ಜನಜಾಗೃತಿ

ಸದೇಶ್ ಕಾರ್ಮಾಡ್

ಮೈಸೂರು: ತಂಬಾಕು ರಹಿತ ದಿನವೆಂಬುದು ಕೇವಲ ಒಂದು ದಿನಕ್ಕೆ ಸೀಮಿತವಾಗದೆ 365 ದಿನವೂ ತಂಬಾಕು ರಹಿತ ದಿನವಾಗಬೇಕು ಂದು ಜಿಲ್ಲಾಧಿಕಾರಿ ಡಾ.ಕೆ ವಿ ರಾಜೇಂದ್ರ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಜಿಲ್ಲಾ ಎನ್‌ಸಿಡಿ ಕೋಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮೈಸೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ, ಜೆಎಸ್‌ಎಸ್ ಶುಶ್ರೂಷ ಶಾಲೆ, ಬಿಜಿಎಸ್ ಅಪೋಲೋ ಶುಶ್ರೂಷ ಕಾಲೇಜು, ಶಾಂತವೇರಿ ಗೋಪಾಲಗೌಡ ಮೆಮೋರಿಯಲ್ ಶುಶ್ರೂಷ ಕಾಲೇಜು ಹಾಗೂ ಪೃಥ್ವಿ ಇನ್ಫ್ರಾಸ್ಟ್ರಕ್ಚರ್ ಸಂಯುಕ್ತಾಶ್ರಯದಲ್ಲಿ ನಗರದ ಅರಮನೆ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಾಲಾ, ಕಾಲೇಜುಗಳ ಸುತ್ತಲೂ ತಂಬಾಕು ಮುಕ್ತ ವಲಯ ಫಲಕಗಳನ್ನು ಅಳವಡಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆಯು ಕೋಟ್ಪಾ ಕಾಯ್ದೆಯ ಉಲ್ಲಂಘನೆಯಾಗಿದ್ದು, ತಂಬಾಕು ಸೇವನೆ ಮಾಡದೆ ಇರುವ ವ್ಯಕ್ತಿಯ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂದರು.

ಯುವಜನತೆ ತಂಬಾಕು ಚಟಕ್ಕೆ ಬಲಿಯಾಗದೆ ಉತ್ತಮ ಜೀವನ ಶೈಲಿ ಅಳವಡಿಸಿಕೊಳ್ಳಬೇಕು. ತಂಬಾಕು ಸೇವನೆಯು ಸ್ಲೋ ಪಾಯಿಸನ್. ತಂಬಾಕು ಸೇವನೆ ಚಟಕ್ಕೆ ಸಿಲುಕಿದವರು ಅದರಿಂದ ಹೊರಬಂದು ಉತ್ತಮ ಜೀವನ ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಜಿ. ದಿನೇಶ್ ಮಾತನಾಡಿ, ತಂಬಾಕು ಸೇವನೆಯಿಂದ ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಪ್ರತಿಯೊಬ್ಬರು ತಂಬಾಕು ಬಳಕೆಯಿಂದ ದೂರ ಇರಬೇಕು. ತಂಬಾಕು ಬೆಳೆಯುವ ರೈತರಿಗೆ ಪರ್ಯಾಯ ಬೆಳೆ ಬೆಳೆಯಲು ಉತ್ತೇಜನ ನೀಡಬೇಕು. ದೇಶದಲ್ಲಿ ಪ್ರತಿ ವರ್ಷ 4.5 ಟ್ರಿಲಿಯನ್ ಸಿಗರೇಟ್‌ನ ಬಳಸಿದ ತುಂಡುಗಳು ಪರಿಸರಕ್ಕೆ ಸೇರಿ ಪ್ರಕೃತಿಯನ್ನು ಕಲುಷಿತಗೊಳಿಸುತ್ತಿವೆ. ತಂಬಾಕು ಬೆಳೆಯುವುದರಿಂದ ವರ್ಷಕ್ಕೆ 200 ಹೆಕ್ಟರ್ ಅರಣ್ಯ ನಾಶಕ್ಕೆ ಕಾರಣವಾಗುತ್ತಿದೆ ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಚ್. ಪ್ರಸಾದ್ ಮಾತನಾಡಿ, ನಮಗೆ ತಂಬಾಕು ಬೇಡ ಆಹಾರ ಬೇಕು ಎಂಬ ಧ್ಯೇಯ ವಾಕ್ಯದೊ ಂದಿಗೆ 2023ರ ತಂಬಾಕು ರಹಿತ ದಿನವನ್ನು ಆಚರಿಸಲಾಗುತ್ತಿದೆ. ತಂಬಾಕಿನ ನಿರ್ಮೂಲನೆಗೆ ಎಲ್ಲರು ಪ್ರಯತ್ನಿಸಬೇಕು. ಆರೋಗ್ಯ ಅಮೂಲ್ಯವಾಗಿದ್ದು, ಅದನ್ನು ನಮ್ಮ ಕೈಯಾರೆ ಹಾಳು ಮಾಡಿಕೊಳ್ಳದೆ ಕಾಪಾಡಿಕೊಳ್ಳುವ ಹೊಣೆಗಾರಿಕೆ ನಮ್ಮದೇ ಆಗಿದೆ ಎಂದು ಹೇಳಿದರು.

ಪಿರಿಯಾಪಟ್ಟಣ ತಾಲೂಕಿನ ಹಾರನಹಳ್ಳಿ ಹೋಬಳಿಯ ಅಡಗೂರು ಗ್ರಾಮದಲ್ಲಿ ಈ ಹಿಂದೆ ಹೆಚ್ಚಾಗಿ ತಂಬಾಕು ಬೆಳೆಯಲಾಗುತಿತ್ತು. ಇದೀಗ ಆ ಗ್ರಾಮವು ತಂಬಾಕು ಮುಕ್ತ ಗ್ರಾಮವಾಗಿ ಹೊರಹೊಮ್ಮಿರುವುದು ಖುಷಿಯ ವಿಚಾರ ಎಂದು ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ. ಮಹದೇವ ಪ್ರಸಾದ್, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಸಿರಾಜ್ ಅಹಮದ್, ಜಿಲ್ಲಾ ತುಂಬಾಕು ನಿಯಂತ್ರಣದ ಸಲಹೆಗಾರ ಜಿ.ಶಿವಕುಮಾರ್, ರೈತರಾದ ವಸಂತ್, ಸುಪ್ರೀತ್ ಹಾಗೂ ಇತರರು ಇದ್ದರು.