ಜಿಲ್ಲೆ

ಕೃಷಿಕರ ಸಮಸ್ಯೆ ಪರಿಹಾರಕ್ಕೆ ಪಟ್ಟು

Davangere - Desk - Mahesh Babu E

ಪರಶುರಾಮಪುರ: ಕೇಂದ್ರ ಮತ್ತು ರಾಜ್ಯ ಸರ್ಕಾರ ಕೂಡಲೇ ಶೇಂಗಾ ಬೆಳೆನಷ್ಟ ಪರಿಹಾರ, ಬೆಳೆವಿಮೆ ಮಂಜೂರು ಮಾಡಬೇಕು. ವೇದಾವತಿ ನದಿಗೆ ವಿವಿ ಸಾಗರದಿಂದ ನೀರು ಹರಿಸಬೇಕು, ಚಿಲುಮೇರುದ್ರಸ್ವಾಮಿ ಮಠದ ಬಳಿ ಗೋಶಾಲೆ ತೆರೆಯಬೇಕು. ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಬೇಕು.

ಸಮೀಪದ ನಾಗಗೊಂಡನಹಳ್ಳಿ ಮುಖ್ಯವೃತ್ತದಲ್ಲಿ ರೈತಸಂಘ ನೇತೃತ್ವದಲ್ಲಿ ಸೋಮವಾರ ಆಯೋಜಿಸಿದ್ದ ಸಮಾನ ಮನಸ್ಕರ ರೈತರ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಒಂದೊಮ್ಮೆ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ತಾಲೂಕು, ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಲಾಯಿತು.

ರೈತ ಶಶಿಕುಮಾರ ಮಾತನಾಡಿ, ಚಳ್ಳಕೆರೆ ತಾಲೂಕು ಆಡಳಿತ ಕೂಡಲೇ ಜಾಜೂರು ಗ್ರಾಪಂಗೆ ಅಗತ್ಯ ಸಿಬ್ಬಂದಿ ನೇಮಿಸಿ ಜನರಿಗೆ ಸಕಾಲಕ್ಕೆ ಸರ್ಕಾರಿ ಸೌಕರ್ಯಗಳನ್ನು ಒದಗಿಸಿಕೊಡಬೇಕು. ರೈತರ ಕುಂದು ಕೊರತೆಗಳನ್ನು ಅರಿತು ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಸತತವಾಗಿ ಬರಗಾಲ, ಅಕಾಲಿಕ ಮಳೆಯಿಂದ ರೈತರು ತೀವ್ರ ನಷ್ಟ ಅನುಭವಿಸಿದ್ದಾರೆ. ಸರ್ಕಾರ ನೆರವಿಗೆ ಬರದಿದ್ದರೆ ಕೃಷಿಯಿಂದ ಹಿಮ್ಮುಖರಾಗುವ ದಿನ ದೂರವಿಲ್ಲ. ಇದಕ್ಕೆ ಸರ್ಕಾರವೇ ಹೊಣೆ ಆಗಬೇಕಾಗುತ್ತದೆ ಎಂದು ಹೇಳಿದರು.

ರೈತರಾದ ತಿಪ್ಪೇಸ್ವಾಮಿ, ಪಿ.ಎಚ್.ತಿಮ್ಮಣ್ಣ, ಹನುಮಂತರಾಯಪ್ಪ, ಗೋವಿಂದರಾಜು, ಓಬಳೇಶ, ಕರಿಯಣ್ಣ, ಬಂಡೇಶ, ಕ್ಯಾತಣ್ಣ, ನವೀನ್, ಅಂಗಡಿಗೌಡ, ಅಂಗಡಿ ಈರಣ್ಣ, ಸುರೇಶ ಇದ್ದರು.

ಕುಂದು-ಕೊರತೆ ಸಭೆ: ಕೃಷಿಕರು ಎದೆಗುಂದಬೇಕಾಗಿಲ್ಲ. ಸರ್ಕಾರ ರೈತರೊಂದಿಗೆ ಇರಲಿದೆ. ತಾಲೂಕಿನಲ್ಲಿ ಈಗಾಗಲೇ ಪಂಚಾಯಿತಿವಾರು ಕುಂದುಕೊರತೆ ಸಭೆ ಆಯೋಜಿಸಿ, ಸಮಸ್ಯೆ ಅರಿತು ಪರಿಹರಿಸುವ ಪ್ರಯತ್ನ ಮಾಡಲಾಗುತ್ತಿದೆ.-ಟಿ.ರಘುಮೂರ್ತಿ, ಶಾಸಕ, ಚಳ್ಳಕೆರೆ