ನಂದೇಶ್ವರ: ಕೇವಲ 17 ಜನರಿಂದ ಆರಂಭವಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಇಂದು ಲಕ್ಷಾಂತರ ಸ್ವಯಂ ಸೇವಕರನ್ನು ಹೊಂದಿದೆ ಎಂದು ಆರ್‌ಎಸ್‌ಎಸ್ ಉತ್ತರ ಕರ್ನಾಟಕ ಪ್ರಚಾರಕ ಸತೀಶ ಕುಮಾರ ಹೇಳಿದರು.
ಸಮೀಪದ ಸತ್ತಿ ಗ್ರಾಮದಲ್ಲಿ ವಿಜಯದಶಮಿ ಅಂಗವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಭಾನುವಾರ ಹಮ್ಮಿಕೊಂಡಿದ್ದ ಪಥಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2025ನೇ ವರ್ಷಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ನೂರು ವರ್ಷ ಪೂರೈಸುತ್ತಿದೆ ಎಂದರು.
ಡಾ.ರವಿಕಾಂತ ಪಾಟೀಲ ಮಾತನಾಡಿ, ಸತ್ತಿ ಗ್ರಾಮ ಚಾಲುಕ್ಯರ ಐತಿಹಾಸಿಕ ಸಂಸ್ಕೃತಿ ಹೊಂದಿದೆ. ಭಾರತದ ಸಂಸ್ಕೃತಿ ಅರಿತರೆ ಮಾತ್ರ ಯುವ ಪೀಳಿಗೆಗೆ ತಲುಪಿಸಲು ಸಾಧ್ಯ ಎಂದು ಹೇಳಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥ ಸಂಚಲನದಲ್ಲಿ 200ಕ್ಕೂ ಹೆಚ್ಚು ಗಣವೇಷದಾರಿಗಳು ಪಾಲ್ಗೊಂಡಿದ್ದರು. ದಾರಿ ಉದ್ದಕ್ಕೂ ರಂಗೋಲಿ ಹಾಗೂ ಹೂ ಹಾಕಿ ಸಿಂಗರಿಸಿಲಾಗಿತ್ತು. ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.ಆರ್‌ಎಸ್‌ಎಸ್ ಪ್ರಮುಖ ರಾಜೇಂದ್ರ ಕುಲಕರ್ಣಿ, ಚಿಕ್ಕೋಡಿ ಜಿಲ್ಲಾ ಕಾರ್ಯನಿರ್ವಾಹಕ ಮಹಾಂತೇಶ ಗುಡ್ಡಾಪುರ, ಮಾಜಿ ಶಾಸಕ ಮಹೇಶ ಕುಮಠಳ್ಳಿ ಇತರರಿದ್ದರು.
ತೆಲಸಂಗದಲ್ಲಿ ಪಥಸಂಚಲನ: ವಿಜಯದಶಮಿ ಉತ್ಸವ ನಿಮಿತ್ತ ಆರ್‌ಎಸ್‌ಎಸ್ ನಿಂದ ಪೂರ್ಣ ಗಣವೇಷದೊಂದಿಗೆ ಘೋಷಸಹಿತ ಪಥಸಂಚಲನ ಜರುಗಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಸ್ವಯಂ ಸೇವಕರನ್ನು ಜಯೋಷ ಹಾಕಿ ಸ್ವಾಗತಿಸಲಾಯಿತು. ರಸ್ತೆಗಳಲ್ಲಿ ರಂಗೋಲಿ ಬಿಡಿಸಿ, ಹೂ ಹಾಗೂ ಧ್ವಜಗಳಿಂದ ಅಲಂಕರಿಸಲಾಗಿತ್ತು. ಸ್ವಯಂ ಸೇವಕರ ಮೇಲೆ ಹೂ ಮಳೆಗೈದು ದೃಶ್ಯ ಕಂಡುಬಂತು. ಬಳಿಕ ಬಿವಿವಿ ಸಂಘದ ಮೈದಾನದಲ್ಲಿ ಪಥಸಂಚಲನ ಸಮಾವೇಶಗೊಂಡಿತು. ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.