ತೆಲಸಂಗ ಗ್ರಾಮದ ಜೇವರ್ಗಿ-ಸಂಕೇಶ್ವರ ರಾಷ್ಟ್ರೀಯ ಹೆದ್ದಾರಿಯ ತೆಲಸಂಗ ಕ್ರಾಸ್ ಬಳಿ ರಸ್ತೆಗೆ ಹಂಪ್ ಅಳವಡಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಬಸ್ ತಡೆದು ಪ್ರತಿಭಟಿಸಿದರು. ವಿವೇಕಾನಂದ ಹಳಿಂಗಳಿ, ಕಲ್ಲಪ್ಪ ಕನ್ನೂರ ಇತರರು ಇದ್ದರು. 
ಜಿಲ್ಲೆ

ರಸ್ತೆಗೆ ಹಂಪ್ ನಿರ್ಮಿಸುವಂತೆ ಪ್ರತಿಭಟನೆ

ಪ್ರಶಾಂತ ಹೂಗಾರ

ತೆಲಸಂಗ: ಗ್ರಾಮದ ತೆಲಸಂಗ ಕ್ರಾಸ್‌ನಲ್ಲಿ ಮಾಧವಾನಂದ ನಗರದ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳು ರಸ್ತೆ ದಾಟಲು ಪರದಾಡುವಂತಾಗಿದ್ದು, ರಸ್ತೆಗೆ ಹಂಪ್ ಅಳವಡಿಸುವಂತೆ ಒತ್ತಾಯಿಸಿ ಪಾಲಕರು ಬಸ್ ತಡೆದು ಮಂಗಳವಾರ ಪ್ರತಿಭಟಿಸಿದರು.

ಹೊರವಲಯದ ಜೇವರ್ಗಿ-ಸಂಕೇಶ್ವರ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಿ ಕೈಗೊಂಡ ಕಾಮಗಾರಿ ಅವೈಜ್ಞಾನಿಕವಾಗಿದ್ದು, ವಾಹನಗಳ ವೇಗಕ್ಕೆ ಕಡಿವಾಣ ಇಲ್ಲ. ಇದರಿಂದ ರಸ್ತೆ ಪಕ್ಕದಲ್ಲಿರುವ ಸರ್ಕಾರಿ ಪ್ರಾಥಮಿಕ ಹಿರಿಯ ಶಾಲೆಯ ಮಕ್ಕಳು ಜೀವ ಕೈಯಲ್ಲಿ ಹಿಡಿದು ರಸ್ತೆ ದಾಟುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದರು.

ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಯಾವುದೆ ಮುಂಜಾಗ್ರತೆ ಕ್ರಮ ಕೈಗೊಂಡಿಲ್ಲ. ಈ ರಸ್ತೆಗಳಲ್ಲಿ ವಾಹನಗಳ ಸಂಚಾರ ವೇಗಕ್ಕೂ ಕಡಿವಾಣ ಹಾಕಿಲ್ಲ. ರಸ್ತೆಗೆ ಹಂಪ್ ಮತ್ತು ಶಾಲೆಗಳಿವೆ ನಿಧಾನವಾಗಿ ವಾಹನ ಚಾಲನೆ ಮಾಡಿ, ಅಥವಾ ಶಾಲಾ ವಲಯ ಎಂಬ ಸೂಚನಾಫಲಕ ಅಳವಡಿಸಿ ಎಂದು ಒತ್ತಾಯಿಸಿದರು.

ಪಿಡಿಒ ಬೀರಪ್ಪ ಕಡಗಂಚಿ ಪ್ರತಿಕ್ರಿಯಿಸಿ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸಮಸ್ಯೆ ಹರಿಹಾರಕ್ಕೆ ಸಂಬಂಧಿಸಿದ ಅಧಿಕಾರಗಳಿಗೆ ಪತ್ರ ಬರೆಯಲಾಗುವುದು ಎಂದರು. ವಿವೇಕಾನಂದ ಹಳಿಂಗಳಿ, ಕಲ್ಲಪ್ಪ ಕನ್ನೂರ, ಗ್ರಾಪಂ ಸದಸ್ಯ ರಾಮು ನಿಡೋಣಿ, ಸಿ.ಸಿ.ಪಾಟೀಲ, ಅಪ್ಪು ಬಿಜ್ಜರಗಿ, ಧರೆಪ್ಪ ಮಾಳಿ ಇತರರಿದ್ದರು.