ಬಾಗೇಪಲ್ಲಿ ಪಟ್ಟಣಕ್ಕೆ ಹೊಂದಿಕೊಂಡಿರುವ ಸತ್ಯಸಾಯಿ ನಗರದ ನಿವಾಸಿಗಳು ಕುಡಿಯುವ ನೀರು, ರಸ್ತೆ, ಚರಂಡಿ ನಿರ್ಮಾಣಕ್ಕೆ ಆಗ್ರಹಿಸಿ ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. 
ಜಿಲ್ಲೆ

ಕುಡಿಯುವ ನೀರು, ರಸ್ತೆ, ಚರಂಡಿ ವ್ಯವಸ್ಥೆ ಕಲ್ಪಿಸಲು ಪಟ್ಟು

ಬಾಗೇಪಲ್ಲಿ ಪಟ್ಟಣಕ್ಕೆ ಹೊಂದಿಕೊಂಡಿರುವ ಸತ್ಯಸಾಯಿ ನಗರದ ನಿವಾಸಿಗಳು ಕುಡಿಯುವ ನೀರು, ರಸ್ತೆ, ಚರಂಡಿ ನಿರ್ಮಾಣಕ್ಕೆ ಆಗ್ರಹಿಸಿ ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.

ಎನ್.ವೆಂಕಟೇಶ್

ಸ್ವಚ್ಛತೆಗಾಗಿ ಸತ್ಯಸಾಯಿ ನಗರ ನಿವಾಸಿಗಳ ಆಗ್ರಹ ಖಾಲಿಕೊಡ ಪ್ರದರ್ಶಿಸಿ ಪ್ರತಿಭಟನೆ



ಬಾಗೇಪಲ್ಲಿ:
ಕುಡಿಯುವ ನೀರು, ರಸ್ತೆ, ಚರಂಡಿ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ಪಟ್ಟಣಕ್ಕೆ ಹೊಂದಿಕೊಂಡಿರುವ ಸತ್ಯಸಾಯಿ ನಗರ ನಿವಾಸಿಗಳು ಸೋಮವಾರ ಖಾಲಿ ಕೊಡಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
ಸತ್ಯಸಾಯಿ ನಗರದಲ್ಲಿ ಕುಡಿಯಲು ನೀರು ಇಲ್ಲ, ಇಲ್ಲಿ ಸ್ವಚ್ಛತೆಯೂ ಇಲ್ಲ, ಚರಂಡಿ ಮತ್ತು ರಸ್ತೆ ನಿರ್ಮಾಣ ಇಲ್ಲ. ಇಲ್ಲಿನ ನಿವಾಸಿಗಳು ಅತ್ಯಂತ ಹಿಂದುಳಿದ ಪ್ರದೇಶದ ಜನರಂತೆ ಬದುಕು ಸಾಗಿಸುವಂತಾಗಿದೆ. ಇಲ್ಲಿನ ನಿವಾಸಿಗಳ ಗೋಳು ಕೇಳಲು ಜನಪ್ರತಿನಿಧಿಗಳು, ಅಧಿಕಾರಿಗಳೇ ಇಲ್ಲದಂತಾಗಿದೆ. ಜಿಲ್ಲಾಡಳಿತ ತಕ್ಷಣವೇ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಬಾಗೇಪಲ್ಲಿ ಪಟ್ಟಣಕ್ಕೆ ಹೊಂದಿಕೊಂಡಿರುವ ಸತ್ಯಸಾಯಿ ನಗರದಲ್ಲಿ ಸರಿ ಸುಮಾರು 400 ಕುಟುಂಬಗಳು ವಾಸವಿದ್ದು, 1 ಸಾವಿರಕ್ಕೂ ಅಧಿಕ ಜನರು ವಾಸಿಸುತ್ತಿದ್ದಾರೆ. ಸತ್ಯಸಾಯಿ ನಗರ ಪಟ್ಟಣಕ್ಕೆ ಅಂಟಿಕೊಂಡಿದ್ದರೂ ಮನೆಗಳು ಮಾತ್ರ ಪರಗೋಡು ಗ್ರಾಪಂ ವ್ಯಾಪ್ತಿಗೆ ಸೇರುತ್ತವೆ. ಇಲ್ಲಿನ ನಿವಾಸಿಗಳ ಮತಗಳು ಮಾತ್ರ ಬಾಗೇಪಲ್ಲಿ ಪುರಸಭೆಯ ವಿವಿಧ ವಾರ್ಡ್‌ಗಳಿಗೆ ಸೇರಿರುತ್ತವೆ. ಮತಗಳು ಬಾಗೇಪಲ್ಲಿ ಪುರಸಭೆಗೆ, ಮನೆ ತೆರಿಗೆ ಪರಗೋಡು ಗ್ರಾಮ ಪಂಚಾಯಿತಿಗೆ ಪಾವತಿಸುತ್ತಿರುವ ಕಾರಣ ಇಲ್ಲಿನ ನಿವಾಸಿಗಳ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವವರು ಯಾರು ಎಂಬ ಪ್ರಶ್ನೆ ಮೂಡಿದೆ.
ಸತ್ಯಸಾಯಿ ನಗರದ ತೆರಿಗೆ ಸಂಗ್ರಹಿಸಿಕೊಳ್ಳುತ್ತಿರುವ ಪರಗೋಡು ಗ್ರಾಮ ಪಂಚಾಯಿತಿ ಸೌಲಭ್ಯ ಕಲ್ಪಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಕೆಟ್ಟು ನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕದ ದುರಸ್ತಿಗೆ ಮುಂದಾಗಿಲ್ಲ. ಸಾರ್ವಜನಿಕ ಕೊಳವೆ ಬಾವಿಯ ನೀರನ್ನೂ ಪೂರೈಸುತ್ತಿಲ್ಲ. ಕೊಳಚೆ ನೀರು ನಿಂತಲ್ಲೇ ನಿಂತು ದುರ್ನಾತ ಬೀರುತ್ತಿದೆ. ಇಷ್ಟಾದರೂ ಸ್ವಚ್ಚತೆ ಗೋಜಿಗೆ ಯಾರೂ ಮುಂದಾಗಿಲ್ಲ. 1 ಸಾವಿರ ಜನ ವಾಸವಿರುವ ಸತ್ಯಸಾಯಿ ನಗರ ಬಾಗೇಪಲ್ಲಿ ಪಟ್ಟಣ ವ್ಯಾಪ್ತಿಯಲ್ಲಿದ್ದರೂ ಮೂಲ ಸೌಕರ್ಯಗಳಿಂದ ವಂಚಿತರಾಗಿರುವ ಕಾರಣ ಇಲ್ಲಿನ ನಿವಾಸಿಗಳ ಜೀವನ ಶೈಲಿ ಅತ್ಯಂತ ದುಸ್ತರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಖಂಡರಾದ ಸೂರಿ, ದಸ್ತಗಿರಿ, ಚಾಂದ್ ಬಾಷ, ನರಸಿಂಹಪ್ಪ, ಈಶ್ವರಪ್ಪ, ಜಯಮ್ಮ, ಲಕ್ಷ್ಮಿ ದೇವಮ್ಮ, ಶಾಹೀನಾ, ಹಸೀನಾ ಇತರರು ಇದ್ದರು.


ಸತ್ಯಸಾಯಿ ನಗರಕ್ಕೆ ಎರಡು ತಿಂಗಳಿನಿಂದ ಕುಡಿಯುವ ನೀರು ಪೂರೈಸಿಲ್ಲ, ಪರಗೋಡು ಗ್ರಾಪಂ ಅಧಿಕಾರಿಗಳನ್ನು ಕುಡಿಯುವ ನೀರು ಕೊಡಿ ಎಂದು ಕೇಳಿಕೊಂಡರೆ ಮೋಟರ್ ಇಲ್ಲ, ಪೈಪ್ ಇಲ್ಲ ಎಂದು ಉಡಾಫೆ ಉತ್ತರ ಕೊಡುತ್ತಾರೆ, ಮತ ಹಾಕಿರುವ ಜನಪ್ರತಿನಿಧಿಗಳನ್ನು ಕೇಳಿದರೆ ಸತ್ಯಸಾಯಿ ನಗರ ಪುರಸಭೆ ವ್ಯಾಪ್ತಿಗೆ ಬರುವುದಿಲ್ಲ ಎನ್ನುತ್ತಾರೆ. ಮತ ಹಾಕಿಸಿಕೊಂಡಿರುವ ರಾಜಕೀಯ ಮುಖಂಡರು ಸಮಸ್ಯೆಗಳ ಬಗ್ಗೆ ಕ್ಯಾರೆ ಎನ್ನುತ್ತಿಲ್ಲ.
- ಭಾಗ್ಯಮ್ಮ, ಸತ್ಯಸಾಯಿ ನಗರ. ಬಾಗೇಪಲ್ಲಿ