ಜಿಲ್ಲೆ

ಜಲಸಂರಕ್ಷಣೆಗೆ ಹೆಚ್ಚಿನ ಆದ್ಯತೆ: ಸಂಸದ ಭಗೀರಥ ಚೌದರಿ ಹೇಳಿಕೆ

ಚಿಕ್ಕಬಳ್ಳಾಪುರ: ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಪೂರಕವಾದ ಯೋಜನೆಗಳನ್ನು ದೇಶದ ಅಗತ್ಯ ಭಾಗಗಳಲ್ಲಿ ಅಳವಡಿಸಿಕೊಳ್ಳುವುದರ ಅಗತ್ಯವಿದೆ ಎಂದು ಕೇಂದ್ರ ಜಲಶಕ್ತಿ ಸಲಹಾ ಸಮಿತಿ ಅಧ್ಯಯನ ತಂಡವು ಅಭಿಪ್ರಾಯ ವ್ಯಕ್ತಪಡಿಸಿತು.


ಜಿಲ್ಲೆಯಲ್ಲಿ ತ್ಯಾಜ್ಯ ಸಂಸ್ಕರಿಸಿದ ನೀರು ಪೂರೈಕೆಯ ಎಚ್​.ಎನ್​.ವ್ಯಾಲಿ ಯೋಜನೆಯ ಅನುಷ್ಠಾನದ ವೈಖರಿಯನ್ನು ಐವರು ಸಂಸದರನ್ನು ಒಳಗೊಂಡ ತಂಡವು ಶುಕ್ರವಾರ ಪರಿಶೀಲಿಸಿತು.


ಸಂಸದ ಭಗೀರಥ ಚೌದರಿ ಮಾತನಾಡಿ, ಹಿಂದೆ ಈ ಭಾಗದಲ್ಲಿ 1200 ಅಡಿ ಆಳಕ್ಕೆ ಕೊಳವೆಬಾವಿ ಕೊರೆದರೂ ಸಮರ್ಪಕವಾಗಿ ನೀರು ಸಿಗುತ್ತಿರಲಿಲ್ಲ, ಲಭ್ಯತೆಯ ನೀರಿನಲ್ಲಿಫ್ಲೋರೈಡ್​, ನೈಟ್ರೇಟ್​ ಸೇರಿ ಅಪಾಯಕಾರಿ ರಾಸಾಯನಿಕ ಅಂಶಗಳು ಮಿಶ್ರಣವಾಗಿದ್ದವು. ಇದೀಗ ಕೆರೆಗಳಿಗೆ ಎಚ್​.ಎನ್​. ವ್ಯಾಲಿ ನೀರು ಹರಿಯುತ್ತಿರುವುದರಿಂದ ಅಂತರ್ಜಲ ಮಟ್ಟ ಏರಿಕೆ ಕಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದರು.


ಕೇಂದ್ರ ಸರ್ಕಾರವು ಎಲ್ಲೆಡೆ ಶುದ್ಧ ನೀರು ಸಿಗಬೇಕೆಂಬ ಉದ್ದೇಶದಿಂದ ಜಲಶಕ್ತಿ ಯೋಜನೆ ಆರಂಭಿಸಿದೆ. ನದಿಗಳ ಜೋಡಣೆಯಂಥ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದು, ಜಲಸಂರಕ್ಷಣೆ ಮತ್ತು ಜಲಶಕ್ತಿಗೆ ಪೂರಕವಾದ ಕೆಲಸಗಳಿಗೆ ಒತ್ತು ನೀಡಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಕೇಂದ್ರ ತಂಡದ ಸದಸ್ಯರಾದ ಮುಕೇಶ್​ ರಜಪೂತ್​, ಸಕಲ್ದೀಪ್​ ರಾಜ್ಬರ್​, ಖಗೆನ್​ ಮುರುಮ್​, ಸಂಸದ ಬಿ.ಎನ್​.ಬಚ್ಚೇಗೌಡ, ರಾಜ್ಯ ಮಾವು ಮತ್ತು ಮಾರುಕಟ್ಟೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ವಿ.ನಾಗರಾಜು, ಡಿಸಿ ಆರ್​.ಲತಾ, ಜಿಪಂ ಸಿಇಒ ಪಿ.ಶಿವಶಂಕರ್​, ಅಟಲ್​ ಭೂಜಲ ಯೋಜನೆಯ ನೋಡಲ್​ ಅಧಿಕಾರಿ ಹರೀಶ್​ ಮತ್ತಿತರರು ಇದ್ದರು.


ಎಲ್ಲೆಲ್ಲಿ ತಂಡ ಭೇಟಿ: ಸಂಸತ್ತಿನ ಜಲಶಕ್ತಿ ಸಲಹಾ ಸಮಿತಿಯ ಅಧ್ಯಯನ ತಂಡವು ತಾಲೂಕಿನ ಮುದ್ದೇನಹಳ್ಳಿ ಸಮೀಪದ ಎಚ್​. ಎನ್​. ವ್ಯಾಲಿ ನೀರು ಹಂಚಿಕೆಯಾಗುವ ಸ್ಥಳಕ್ಕೆ ಭೇಟಿ ನೀಡಿ, ಹಿಂದಿನ ಪರಿಸ್ಥಿತಿ, ನೀರಿನ ಸಂಗ್ರಹ, ಅಂತರ್ಜಲ ಮಟ್ಟ ವೃದ್ಧಿಯ ಬಗ್ಗೆ ಅಧಿಕಾರಿಗಳೊಂದಿಗೆ ಮಾಹಿತಿ ಪಡೆಯಿತು. ಬಳಿಕ ಕಂದವಾರ ಕೆರೆ, ಪಟ್ರೇನಹಳ್ಳಿ ಸಮೀಪದ ಅಮಾನಿ ಗೋಪಾಲಕೃಷ್ಣ ಕೆರೆಯನ್ನು ವೀಸಿತು. ಸಂಸ್ಕರಿಸಿದ ಎಚ್​.ಎನ್​.ವ್ಯಾಲಿ ಯೋಜನೆಯಿಂದ ಕೆರೆಗಳಿಗೆ ನೀರು ಪೂರೈಕೆ, ಅಂತರ್ಜಲ ಅಭಿವೃದ್ಧಿ, ಕೃಷಿಗೆ ಹಾಗೂ ಹೈನೋದ್ಯಮಕ್ಕೆ ಆಗುತ್ತಿರುವ ಅನುಕೂಲಗಳ ಮಾಹಿತಿ ಪಡೆಯಿತು.


ಅಪಸ್ವರದ ನಡುವೆ ಮೆಚ್ಚುಗೆ: ಜಿಲ್ಲೆಯಲ್ಲಿ ವಿವಿಧ ಸಂಟನೆಗಳು ಎಚ್​.ಎನ್​.ವ್ಯಾಲಿಯ ನೀರಿನಲ್ಲಿ ಮಾರಣಾಂತಿಕ ರಾಸಾಯನಿಕಗಳು, ನೀರಿನ ಬದಲಾವಣೆ, ನಿರಂತರವಾಗಿ ಮೀನುಗಳ ಸಾವು, ಅಂತರ್ಜಲ ಮಟ್ಟ ಕಲುಷಿತದ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿವೆ. ಈಗಾಗಲೇ ನೀರಾವರಿ ಹೋರಾಟ ಸಮಿತಿಯು ತ್ಯಾಜ್ಯ ಸಂಸ್ಕರಿಸಿದ ನೀರಿನ ಯೋಜನೆಯಲ್ಲಿ ಮೂರನೇ ಹಂತದ ಶುದ್ಧೀಕರಣ ಮತ್ತು ಶುದ್ಧವಾದ ನೀರು ಪೂರೈಸಲು ಸರ್ಕಾರಕ್ಕೆ ಸೂಚಿಸಬೇಕು ಎಂದು ನ್ಯಾಯಾಲಯದ ಮೆಟ್ಟಿಲೇರಿದೆ. ಇದರ ನಡುವೆ ಆಡಳಿತ ಪಕ್ಷದ ನಾಯಕರು ಮತ್ತು ಅಧಿಕಾರಿಗಳ ಯೋಜನೆಯ ಗುಣಗಾನಕ್ಕೆ ಸಂಸದರು ತಲೆದೂಗಿ ಮೆಚ್ಚುಗೆ ವ್ಯಕ್ತಪಡಿಸಿದರು.

ಜನರೊಂದಿಗೆ ಸಂವಾದ: ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಕೆ.ವಿ.ನಾಗರಾಜು ಮತ್ತು ನಗರಸಭೆ ಅಧ್ಯಕ್ಷ ಆನಂದರೆಡ್ಡಿ ಎಚ್​.ಎನ್​ ವ್ಯಾಲಿ ನೀರಿನ ಯೋಜನೆಯ ಅನುಕೂಲಗಳ ಬಗ್ಗೆ ಅಧ್ಯಯನ ತಂಡದ ಎದುರು ಮೆಚ್ಚುಗೆ ವ್ಯಕ್ತಪಡಿಸಿದರು. ಇತ್ತೀಚೆಗೆ ಕೊರೆದ ಕೊಳವೆಬಾವಿಯಲ್ಲಿ 150 ರಿಂದ 200 ಅಡಿಗಳಿಗೇ ನೀರು ಲಭ್ಯವಾಗಿ ಅಚ್ಚರಿ ಮೂಡಿಸಿದೆ. ಇದು ಎಚ್​.ಎನ್​.ವ್ಯಾಲಿ ಯೋಜನೆಯ ಪರಿಣಾಮ ಎಂದರು. ಮತ್ತೊಂದೆಡೆ ಕೆರೆಗಳಲ್ಲಿ ನೀರು ತುಂಬಿರುವುದರಿಂದ ಮೀನುಗಾರಿಕೆಯಲ್ಲಿ ಹೆಚ್ಚಿನ ಪ್ರಗತಿ ಕಂಡು ಬಂದಿದೆ ಎಂದು ಮೀನುಗಾರಿಕೆ ಅಧಿಕಾರಿಗಳು ತಿಳಿಸಿದರು. ಗ್ರಾಮದ ಅಂತರ್ಜಲ ನಿರ್ವಹಣಾ ಸಂಸ್ಥೆಯ ಸದಸ್ಯರು ಅಟಲ್​ ಭೂಜಲ ಯೋಜನೆಯ ಅನುಷ್ಠಾನ, ಅನುಕೂಲಗಳ ಬಗ್ಗೆ ವಿವರಿಸಿದರು. ಇದಕ್ಕೆ ಧ್ವನಿಗೂಡಿಸಿದ ಸಂಸದ ಬಾಲಕನಾಥ್​, ತ್ಯಾಜ್ಯ ನೀರು ಸಂರಕ್ಷಣೆ, ಶುದ್ದೀಕರಣ, ಕೃಷಿಗೆ ಬಳಕೆಯ ಮೂಲಕ ದೇಶ ಮಾತ್ರವಲ್ಲ. ಇಡೀ ವಿಶ್ವಕ್ಕೆ ಮಾದರಿ ಎಂಬುದನ್ನು ಇಲ್ಲಿ ತೋರಿಸಲಾಗಿದೆ ಎಂದರು.