ನೇಸರಗಿ: ಮಣ್ಣು ಪೋಷಕಾಂಶಗಳ ಆಗರ. ಮಣ್ಣಿನ ಸವಕಳಿ ತಡೆಯುವ ಮೂಲಕ ಉಳುಮೆ ಮಾಡಿದರೆ ಆದಾಯ ದ್ವಿಗುಣವಾಗುತ್ತದೆ ಎಂದು ತಾಂತ್ರಿಕ ಸಲಹೆಗಾರ ಡಾ.ಆರ್.ಆರ್. ಪಾಟೀಲ ಹೇಳಿದರು.
ಸಮೀಪದ ಮತ್ತಿಕೊಪ್ಪದ ಐಸಿಎಆರ್ ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಮಣ್ಣು ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಡಿ.5 ರಂದು ಪ್ರತಿ ವರ್ಷ ವಿಶ್ವ ಮಣ್ಣು ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ವರ್ಷ ಮಣ್ಣುಗಳ ಕಾಳಜಿ ಅಳತೆ, ಮೇಲ್ವಿಚಾರಣೆ, ನಿರ್ವಹಣೆ ಎನ್ನುವ ೂಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ ಎಂದರು.
ರೈತ ಮುಖಂಡ ನಿಂಗನಗೌಡ ದೊಡಗೌಡರ ಮಾತನಾಡಿ, ಮಣ್ಣಿನ ಫಲವತ್ತತೆ ನಿರಂತರವಾಗಿ ಕಾಯ್ದುಕೊಳ್ಳಲು ರೈತ ಸಮುದಾಯವು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಸಲಹೆ ಸೂಚನೆ ಪಡೆಯಬೇಕು ಎಂದರು. ಕೇಂದ್ರದ ವಿಜ್ಞಾನಿ ಡಾ. ಎಸ್.ಎಸ್. ಹಿರೇಮಠ ಮಾತನಾಡಿ, ದೇಶದಲ್ಲಿ 5,500 ದಶಲಕ್ಷ ಟನ್ ಫಲವತ್ತಾದ ಮಣ್ಣು ಸವಕಳಿಯಿಂದ ನಷ್ಟವಾಗುತ್ತಿದೆ. 2,900 ದಶಲಕ್ಷ ಟನ್ ಸಮುದ್ರ ಸೇರಿ ಶಾಶ್ವತವಾಗಿ ನಷ್ಟವಾಗುತ್ತಿದೆ. ಭೂ ಭಾಗದಲ್ಲಿರುವ ಮಣ್ಣು ಶೇ.33 ಪ್ರತಿಶತ ಮಣ್ಣಿನ ಆರೋಗ್ಯವು ಹದಗೆಟ್ಟು ಈಗಾಗಲೇ ಅವನತಿ ಅಂಚಿನಲ್ಲಿದೆ ಎಂದರು. ಸಹಾಯಕ ಕೃಷಿ ನಿರ್ದೇಶಕ ಸಿ.ಐ. ಹೂಗಾರ, ಮಣ್ಣಿನ ಫಲವತ್ತತೆ, ವಿವಿಧ ಪೋಷಕಾಂಶಗಳ ಸಮಗ್ರ ನಿರ್ವಹಣೆ, ಮಣ್ಣಿನ ಸವಕಳಿ ತಡೆಗಟ್ಟುವ ವಿಧಾನಗಳ ಕುರಿತು ವಿವರಿಸಿದರು. ಕೇಂದ್ರದ ಮಣ್ಣು ವಿಜ್ಞಾನಿ ಎಸ್.ಎಂ. ವಾರದ ಮಾತನಾಡಿದರು. ಟಿ.ಸ್ಟೇನ್ಸ್ ಕಂಪನಿ ಪ್ರೆ ಲಿಮಿಟೆಡ್ ಅಧಿಕಾರಿ ಪ್ರಮೋದ ಬಿ., ಬಿ.ಬಿ. ಕಗ್ಗಲ, ಗುರುನಾಥ ಶಿಶುನಾಳ ಇದ್ದರು. ವಿಜ್ಞಾನಿ ಜಿ.ಬಿ. ವಿಶ್ವನಾಥ ಸ್ವಾಗತಿಸಿದರು. ಪ್ರವಿಣ ಯಡಹಳ್ಳಿ ವಂದಿಸಿದರು.