ಜಿಲ್ಲೆ

ಸರ್ವರನ್ನು ಪ್ರೀತಿಸುವುದು ಬೌದ್ಧ ಧರ್ಮದ ಆಶಯ

ಚಿತ್ರದುರ್ಗ: ಬೌದ್ಧ ಧರ್ಮ ಅತ್ಯಂತ ಹಳೆಯದು. ಇಲ್ಲಿ ಕರುಣೆ, ದಯೆ, ವಾತ್ಸಲ್ಯವಿದೆ. ಸರ್ವರನ್ನು ಪ್ರೀತಿಸುವ ಶ್ರೇಷ್ಠತೆ ಇದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

ನವಯಾನ ಬುದ್ಧ ಸಂಘದಿಂದ ಕ್ರೀಡಾ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಧಮ್ಮ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಜಾತಿ ವ್ಯವಸ್ಥೆ ಪ್ರಬಲವಾಗಿ ಬೇರೂರಿದೆ. ಒಂದು ಜಾತಿಗೆ ಮಾತ್ರ ಅಸ್ಪಶ್ಯರೆಂಬ ಹಣೆಪಟ್ಟಿ ಕಟ್ಟಿ ಕೀಳಾಗಿ ನೋಡಿ ದೂರ ಇಡಲಾಗುತ್ತಿತ್ತು. ಡಾ.ಬಿ.ಆರ್.ಅಂಬೇಡ್ಕರ್ ಕೂಡ ಬಾಲ್ಯದಲ್ಲಿಯೇ ಸಾಕಷ್ಟು ನೋವು, ಸಂಕಟ, ಹಿಂಸೆ, ಅವಮಾನ ಅನುಭವಿಸಿದ್ದರಿಂದ ಸಂವಿಧಾನ ರಚಿಸಿ ದೇಶಕ್ಕೆ ಕೊಡುಗೆಯಾಗಿ ನೀಡಲು ಕಾರಣವಾಯಿತು ಎಂದರು.

ರಾಜಕೀಯ ಕಲುಷಿತಗೊಂಡಿದೆ. ಆದ್ದರಿಂದ ಜಾತಿ ಮತ್ತು ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಿಸಲು ಬುದ್ಧನ ಚಿಂತನೆಯಿಂದ ಮಾತ್ರ ಸಾಧ್ಯ ಎಂದು ಸಲಹೆ ನೀಡಿದರು.

ದಲಿತರ ಮೇಲೆ ಅತ್ಯಾಚಾರ, ದೌರ್ಜನ್ಯ, ದಬ್ಬಾಳಿಕೆ ನಡೆಯುತ್ತಿದೆ. ಮಾನವೀಯ ಮೌಲ್ಯಗಳಿಗೆ ಬೆಲೆ ಇಲ್ಲದಂತಾಗಿದೆ. ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಪ್ರೊ.ಬಿ.ಕೃಷ್ಣಪ್ಪ ಆಶಯದಂತೆ ಧ್ವನಿ ಇಲ್ಲದವರ, ಶೋಷಿತರ ಪರವಾಗಿ ನಿಲ್ಲಿ. ಮೊದಲು ಶಿಕ್ಷಣ ಪಡೆದು ತಮ್ಮ ಹಕ್ಕು ಪಡೆಯಲಿಕ್ಕಾಗಿ ಸಂಘಟಿತರಾಗಿ ಹೋರಾಡುವ ಮನೋಭಾವ ಬೆಳೆಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಕೆಪಿಸಿಸಿ ಅಸಂಘಟಿತ ಕಾರ್ಮಿಕರ ಸಂಘಟನೆಗಳ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಮಾತನಾಡಿ, ದಲಿತರು ಅನಾದಿ ಕಾಲದಿಂದಲೂ ತುಳಿತಕ್ಕೊಳಗಾಗಿ ನೋವು ಅನುಭವಿಸಿಕೊಂಡು ಬರುತ್ತಿದ್ದಾರೆ. ವಾಸ್ತವ ಸ್ಥಿತಿ ಗೊತ್ತಿದ್ದರೂ ಬೌದ್ಧ ಧರ್ಮ ಏಕೆ ಸ್ವೀಕರಿಸುತ್ತಿಲ್ಲ ಎಂಬುದೇ ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ದಲಿತರ ಸ್ಥಿತಿ ಚಿಂತಾಜನಕವಾಗಿದೆ. ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿಯೂ ಮತದಾರರು ಆಮಿಷಕ್ಕೆ ಒಳಗಾಗುತ್ತಿದ್ದಾರೆ. ಚುನಾವಣೆಯಲ್ಲಿ ಟಿಕೆಟ್ ಸಿಗುವುದು, ಗೆಲ್ಲುವುದು ಹಣವಂತರಾಗಿದ್ದು, ಉಳಿದವರಿಗೆ ಅವಕಾಶ ಇಲ್ಲದಂತಾಗಿದೆ ಎಂದರು.

ವಿಶ್ವದೆಲ್ಲೆಡೆ ಬೌದ್ಧ ಧರ್ಮ ಪಾಲನೆಯಲ್ಲಿದೆ. ಎಲ್ಲರನ್ನೂ ಒಪ್ಪಿಕೊಳ್ಳುವ ಮನೋಧರ್ಮ ಹೊಂದಿದೆ. ಆದ್ದರಿಂದ ಭಗವಾನ್ ಬುದ್ಧನ ಅನುಯಾಯಿಗಳಾಗಬೇಕು. ಜನಪ್ರತಿನಿಧಿಗಳಿಂದ ಆಗದ ಕೆಲಸ ಕೆಲವೊಮ್ಮೆ ಸಂಘಟನೆಯಿಂದ ಆಗುತ್ತದೆ ಎಂದು ಹೇಳಿದರು.

ಮುಖಂಡರಾದ ಪ್ರೊ.ಸಿ.ಕೆ.ಮಹೇಶ್, ಎಂ.ಮಲ್ಲಿಕಾರ್ಜುನ್ ಹಿರೇಹಳ್ಳಿ, ಸಂಸ್ಕೃತಿ ಚಿಂತಕ ಹರ್ಷಕುಮಾರ್ ಕುಗ್ವೆ, ನವಯಾನ ಉಪಾಸಕರಾದ ದುರುಗೇಶ್, ಚಿಕ್ಕಣ್ಣ, ನೀಲಕಂಠಪ್ಪ, ಎ.ರಾಮು ಗೋಸಾಯಿ, ಕೆ.ಕುಮಾರ್, ಟಿ.ರಾಮು, ಎಚ್.ಆನಂದ್‌ಕುಮಾರ್ ಇತರರಿದ್ದರು.