ಜಿಲ್ಲೆ

ಅವ್ಯವಹಾರ ತನಿಖೆಗೆ ಒತ್ತಾಯಿಸಿ ಪತ್ರ

ಕೊಟ್ಟೂರು: ಕಾಳಾಪುರ ಗ್ರಾಪಂ ವ್ಯಾಪ್ತಿಯ ನಡುಮಾವಿನಹಳ್ಳಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಲಕ್ಷಾಂತರ ರೂ. ಅವ್ಯವಹಾರವಾಗಿದೆ ಎಂದು ಗ್ರಾಪಂ ಸದಸ್ಯ ಸಿ.ನಾಗರಾಜ ಗೌಡ, ಮಾಜಿ ಸದಸ್ಯ ಮೈದೂರು ರೇವಣ್ಣ, ತಾಲೂಕು ರೈತ ಸಂಘದ(ಮೇಟಿ ಬಣ) ಅಧ್ಯಕ್ಷ ಎಚ್. ಸಿದ್ದಪ್ಪ ತಾಪಂ ಇಒಗೆ ಸೋಮವಾರ ಪತ್ರ ಬರೆದಿದ್ದಾರೆ.

250 ಜನ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಿದ್ದಾರೆ ಎಂದು ಎನ್.ಎಂ.ಆರ್. ಬರೆಯಲಾಗಿದ್ದು, ಅಲ್ಲಿ ಕೇವಲ 150 ಜನ ಕೆಲಸ ಮಾಡಿದ್ದಾರೆ. 100 ಜನ ಎನ್.ಎಂ.ಆರ್. ಕೆಲಸ ಮಾಡಿಸದೆ ಹಣ ಲಪಟಾಯಿಸಲಾಗಿದೆ. 40 ಜನ ಉದ್ಯೋಗ ಖಾತ್ರಿ ಕೆಲಸ ಮಾಡುವವರಿಗೆ ಒಬ್ಬ ಮೇಟಿ ಇರಬೇಕು.

ಆದರೆ ನಡುಮಾವಿನಹಳ್ಳಿ ಗ್ರಾಮದಲ್ಲಿ 250 ಉದ್ಯೋಗ ಖಾತ್ರಿ ಕೆಲಸಗಾರರಿಗೆ ಒಬ್ಬ ಮೇಟಿ ಇದ್ದಾರೆ ಎಂದು ತಿಳಿಸಿದ್ದಾರೆ. ಜಿಪಂವತಿಯಿಂದ ಸಾಮಾಜಿಕ ಲೆಕ್ಕಪರಿಶೋಧಕರು ಕಾಳಾಪುರ ಗ್ರಾಪಂಗೆ ಬಂದು ಸರಿಯಾಗಿ ಶೋಧನೆ ಮಾಡದೆ ಪಿಡಿಒ, ಇಂಜಿನಿಯರ್, ಲೆಕ್ಕಪರಿಶೋಧಕರು, ಮೇಟಿ ಸೇರಿ ಹಣ ಲಪಟಾಯಿಸಿದ್ದಾರೆ. ಆದ್ದರಿಂದ ಜಿಪಂ ಪ್ರಮುಖ ಅಧಿಕಾರಿಗಳು ನಡುಮಾವಿನಹಳ್ಳಿ ಗ್ರಾಮಕ್ಕೆ ಬಂದು ಪರಿಶೀಲನೆ ಮಾಡಿದರೆ ಅವ್ಯವಹಾರ ಹೊರಬರುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.