ಜಿಲ್ಲೆ

ಸೌಲಭ್ಯ ಕಲ್ಪಿಸಲು ಶ್ರಮ

ಪ್ರಶಾಂತ ಹೂಗಾರ

ಮಮದಾಪುರ: ಸಮೀಪದ ಕೊಳವಿ ಶಾಲೆಯು ಸಡಗರದಿಂದ ಶತಮಾನೋತ್ಸವ ಆಚರಣೆ ಮಾಡಿಕೊಳ್ಳುತ್ತಿರುವುದು ಹೆಮ್ಮೆಯ ವಿಷಯ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ಸಮೀಪದ ಕೊಳವಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಆಚರಣೆ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ನವೀಕೃತ ಶಾಲೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಶಾಸಕನಾಗಿ 25 ವರ್ಷಗಳಿಂದ ಗ್ರಾಮೀಣ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕಲ್ಪಿಸಲು ಎಲ್ಲ ಮೂಲಸೌಕರ್ಯ ಒದಗಿಸಲು ಶ್ರಮಿಸುತ್ತಿರುವೆ. ಈ ಶಾಲೆಯ ಅಭಿವೃದ್ಧಿಗೆ, ಗುರು-ಹಿರಿಯರು ಶ್ರಮಪಟ್ಟಿದ್ದು, ಈಗಿನವರೂ ಮುಂದುವರಿಸುತ್ತಿದ್ದಾರೆ. ಕ್ಷೇತ್ರದ ಹೆಚ್ಚಿನ ಅಭಿವದ್ಧಿಗೆ ನಾನು ಹಾಗೂ ನಮ್ಮ ಕುಟುಂಬಸ್ಥರು ಪ್ರಯತ್ನಿಸುತ್ತೇವೆ ಎಂದರು.

ಸಂಸದ ಜಗದೀಶ ಶೆಟ್ಟರ ಮಾತನಾಡಿ, ಕೊಳವಿ ಗ್ರಾಮದ ಶಾಲೆಯ ಶತಮಾನೋತ್ಸವ ಹಬ್ಬದ ರೀತಿ ಆಚರಿಸುತ್ತಿರುವುದು ಇದೇ ಮೊದಲ ಬಾರಿಗೆ ಕಂಡಿರುವೆ. ಗ್ರಾಮಸ್ಥರು ಶಾಲೆ ಅಭಿವದ್ಧಿ ಸರ್ಕಾರದ ಕೆಲಸ ಎಂದು ಭಾವಿಸದೆ ಸರ್ಕಾರದ ಅನುದಾನದ ಜತೆಗೆ ದೇಣಿಗೆ ಸಂಗ್ರಹಿಸಿ ಶಾಲೆ ಕಟ್ಟಡ ನವೀಕರಣಗೊಳಿಸಿ ಅನೇಕ ಸೌಲಭ್ಯ ಒದಗಿಸಿರುವುದು ಅತ್ಯಂತ ಶ್ಲಾಘನೀಯ ಎಂದರು.

ಅಂಕಲಗಿ ಅಡವಿ ಸಿದ್ದೇಶ್ವರ ಮಠದ ಅಮರ ಸಿದ್ದೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಗಣ್ಯರನ್ನು ಸಕಲ ವಾದ್ಯಮೇಳದೊಂದಿಗೆ ವಿದ್ಯಾರ್ಥಿಗಳು ಸ್ವಾಗತಿಸಿದರು. ಶತಮಾನೋತ್ಸವದ ಲೋಗೋ ಉದ್ಘಾಟಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಹಾಗೂ ಮನರಂಜನೆ ಕಾರ್ಯಕ್ರಮ ಜರುಗಿದವು. ಹಳೆಯ ವಿದ್ಯಾರ್ಥಿಗಳು ನೆನಪುಗಳನ್ನು ಮೆಲುಕು ಹಾಕಿದರು. ಊಟದ ವ್ಯವಸ್ಥೆ ಏರ್ಪಡಿಸಲಾಯಿತು.

ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ, ತಹಸೀಲ್ದಾರ್ ಮೋಹನ್ ಭಸ್ಮೆ, ತಾಪಂ ಇಒ ಪರಶುರಾಮ ಘಸ್ತೆ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ, ಜಿಪಂ ಮಾಜಿ ಸದಸ್ಯರಾದ ಟಿ.ಆರ್.ಕಾಗಲ್, ಮಡ್ಡೆಪ್ಪ ತೋಳಿನವರ, ಪಿಡಿಒ ಸಂಜುಕುಮಾರ ಜೊತಾವರ, ಹಳೆಯ ವಿದ್ಯಾರ್ಥಿ ಮಾಣಿಕ ಹಿರಟ್ಟಿ, ಡಾ.ಆರ್.ಡಿ.ಪಾಟೀಲ, ಎಂ.ಕೆ.ಪಾಟೀಲ, ನಿಜಲಿಂಗಪ್ಪ ಅಂಗಡಿ, ಶಂಕರ ವನಕಿ, ಬಾಳಯ್ಯ ಪೂಜಾರಿ, ಬಸಯ್ಯ ಹುಲಕಂತಿಮಠ, ಬಿ.ಎಂ.ಶಿವಾಪುರ, ಬಿ.ಎಸ್.ನಂದೆಪ್ಪನ್ನವರ, ಗ್ರಾಪಂ ಅಧ್ಯಕ್ಷ ಕರೆಪ್ಪ ಬಡಿಗವಾಡ ಹಾಗೂ ಸರ್ವ ಗ್ರಾಪಂ ಸದಸ್ಯರು, ಎಸ್‌ಡಿಎಂಸಿ ಸದಸ್ಯರು ಪಾಲ್ಗೊಂಡಿದ್ದರು.