ಯಳಂದೂರು: ಸರ್ಕಾರದ ವಿವಿಧ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಲು ಗ್ರಾ.ಪಂ. ಸದಸ್ಯರು ಕ್ರಮ ವಹಿಸಬೇಕು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಸಲಹೆ ನೀಡಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯಿತಿ ಹಾಗೂ ಸಹಕಾರ ಸಂಘಗಳಲ್ಲಿನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ನಡೆದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
1983ರಲ್ಲಿ ರಾಜೀವ್ ಗಾಂಧಿ 4 ಹಂತದಲ್ಲಿ ಅಧಿಕಾರವನ್ನು ವಿಕೇಂದ್ರಿಕರಣಗೊಳಿಸಿ, ಶಾಸಕರು, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಮೂಲಕ ಸ್ಥಳೀಯ ಮಟ್ಟದ ಜನರಿಗೂ ಅಧಿಕಾರ ದೊರೆಯುವಂತೆ ಮಾಡಿದ್ದಾರೆ. ಗ್ರಾ.ಪಂ. ಸದಸ್ಯರು ತಳಮಟ್ಟದವರಿಗೆ ಸೌಲಭ್ಯಗಳು ದೊರೆಯುವಂತೆ ನೋಡಿಕೊಳ್ಳಬೇಕು. ಸರ್ಕಾರದ ಐದು ಗ್ಯಾರಂಟಿಗಳು ಬಡಜನರಿಗೆ ಸಾಕಷ್ಟು ಉಪಕಾರಿಯಾಗಿದೆ ಎಂದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಮರಿಸ್ವಾಮಿ ಮಾತನಾಡಿ, ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ 3ರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. 130 ಗ್ರಾಮ ಪಂಚಾಯಿತಿಗಳ ಪೈಕಿ 87ರಲ್ಲಿ ಕಾಂಗ್ರೆಸ್ ಬೆಂಬಲಿತರೇ ಅಧ್ಯಕ್ಷರಾಗಿದ್ದು, 350 ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದಾರೆ. ಜಿಲ್ಲೆಯಲ್ಲಿ ತಳಮಟ್ಟದಿಂದಲೂ ಕಾಂಗ್ರೆಸ್ ಸದೃಢವಾಗಿದೆ ಎಂದು ಹೇಳಿದರು.
ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ ಮಾತನಾಡಿದರು. ಮಾಜಿ ಶಾಸಕ ಎಸ್.ಜಯಣ್ಣ, ಜಿ.ಪಂ. ಮಾಜಿ ಸದಸ್ಯ ಜೆ.ಯೋಗೇಶ್, ವಡಗೆರೆ ದಾಸ್, ಕಿನಕಹಳ್ಳಿ ಸಿದ್ದರಾಜು, ಯಳಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೊಂಗನೂರು ಚಂದ್ರು, ಡಿ.ಎನ್.ನಟರಾಜು, ಮಾಂಬಳ್ಳಿ ನಂಜುಂಡಸ್ವಾಮಿ, ಗೌಡಹಳ್ಳಿ ರಾಜೇಶ್, ಬೆಟ್ಟದ ವೆಂಕಟೇಶ್, ಚೇತನ್ ಇತರರು ಇದ್ದರು.