ಕೂಡ್ಲಿಗೆರೆಯಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ನೆರವೇರಿತು. ಶ್ರೀ ರೇಣುಕ ಶಿವಾಚಾರ್ಯರು, ಡಾ. ಶ್ರೀ ನಾಗಭೂಷಣ ಶಿವಾಚಾರ್ಯರು, ಶ್ರೀ ರಾಚೋಟೇಶ್ವರ ಶಿವಾಚಾರ್ಯರು, ಶ್ರೀ ಕೇದಾರ ಶಿವಶಾಂತವೀರ ಶಿವಾಚಾರ್ಯರು ಇತರರಿದ್ದರು.  
ಜಿಲ್ಲೆ

ಎತ್ತರಕ್ಕೇರಲು ಮೆಟ್ಟಿಲನ್ನು ತುಳಿಯಬೇಕೇ ಹೊರತು ಮತ್ತೊಬ್ಬರನ್ನಲ್ಲ: ರಂಭಾಪುರಿ ಜಗದ್ಗುರುಗಳು

ಹೊಳೆಹೊನ್ನೂರು: ಬದುಕು ಭಗವಂತನ ಕೊಡುಗೆ. ಬದುಕಿನ ಅರಿವು ಆದರ್ಶಗಳಿಂದ ಸಮೃದ್ಧಿಗೊಳ್ಳಬೇಕು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ತಿಳಿಸಿದರು.

ಸಮೀಪದ ಕೂಡ್ಲಿಗೆರೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಈಶ್ವರ, ಬಸವೇಶ್ವರ, ವೀರಭದ್ರಸ್ವಾಮಿ, ಕಾಳಿಕಾಂಬಾ, ಶನೈಶ್ವರ ಸ್ವಾಮಿ ದೇವಾಲಯಗಳ ಉದ್ಘಾಟನೆ ಹಾಗೂ ಕಳಸರೋಹಣ ಪ್ರಯುಕ್ತ ಸೋಮವಾರ ಹಮ್ಮಿಕೊಂಡಿದ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಆರ್ಶಿವಚನ ನೀಡಿದರು.
ಸುಖ, ಶಾಂತಿದಾಯಕ ಬದುಕಿಗೆ ಧರ್ಮ ಪರಿಪಾಲನೆಯ ಅವಶ್ಯಕತೆ ಇದೆ. ಧರ್ಮದಲ್ಲಿರುವ ಉದಾತ್ತ ತತ್ವಗಳು ಜೀವನದ ಶ್ರೇಯಸ್ಸಿಗೆ ಕಾರಣವಾಗಿವೆ. ಅರಿತು ಬಾಳಿದರೆ ಬಾಳು ಬಂಗಾರ. ಮರೆತು ಮಲಗಿದರೆ ಬಾಳು ಬಂಧನಕಾರಿ. ಬದುಕು ಬದಲಾಗಬೇಕಾದರೆ ಬದುಕುವ ದಾರಿ ಬದಲಾಗಬೇಕು. ಬಾಳೆಗೊಂದು ಗೊನೆಯಿರುವಂತೆ ಬಾಳಿಗೊಂದು ಗುರಿಯಿರಬೇಕು. ಗುರಿಯಿಲ್ಲದ, ಗುರಿ ಸಾಧಿಸದ ಜೀವನ ವ್ಯರ್ಥ ಎಂದರು.
ಆಧುನಿಕ ಜಗತಿನ ಭರಾಟೆಗೆ ಸಿಲುಕಿ ಆಧ್ಯಾತ್ಮಿಕ ರಂಗದಲ್ಲಿ ಸಂಘರ್ಷಗಳು ತಾರಕ್ಕಕೇರುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಭಾರತೀಯ ಸಂಸ್ಕೃತಿ ಆದರ್ಶವಾದುದು. ಸಂಸ್ಕೃತಿ ಎಂದರೆ ಮನುಷ್ಯರ ಅನೋನ್ಯ ಸಂಬಂಧಗಳಲ್ಲಿ ನಯ ವಿನಯಗಳ ಸೊಬಗು. ಸ್ವಗುಣ ಮತ್ತು ಪರ ಗುಣಗಳ ಸಮ್ಮಿಶ್ರಿತ ಕಾಂತಿ. ಎಲ್ಲರನ್ನು ಪ್ರೀತಿಸಬೇಕು. ಅದರಲ್ಲಿ ನಂಬಿಕಸ್ಥರನ್ನು ಮಾತ್ರ ನಂಬಬೇಕು. ಎತ್ತರಕ್ಕೆ ಬೆಳೆಯಬೇಕೆಂಬ ಆಸೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಅದಕ್ಕಾಗಿ ಮೆಟ್ಟಿಲನ್ನು ತುಳಿಯಬೇಕೇ ಹೊರತು ಮತ್ತೊಬ್ಬರನ್ನಲ್ಲ. ವ್ಯಕ್ತಿಯಲ್ಲಿನ ವೈಚಾರಿಕ ಚಿಂತನೆಗಳು ಆತನಲ್ಲಿ ನಾಸ್ಥಿಕ ಪ್ರವೃತ್ತಿ ಬೆಳೆಯಲು ಆಸ್ಪದ ನೀಡಬಾರದು ಎಂದರು.
ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಅಹಿಂಸಾದಿ ಧ್ಯಾನ ಪರ್ಯಂತರವಾದ ದಶ ಧರ್ಮ ಸೂತ್ರಗಳು ಸಕಲರ ಬಾಳಿಗೆ ಬೆಳಕು ತೋರಿವೆ. ವೀರಶೈವ ಧರ್ಮ ಸಕಲ ಜೀವಾತ್ಮರಿಗೆ ಸದಾ ಒಳಿತನ್ನೇ ಬಯಸುವ ಉದಾತ್ತ ಗುರಿ ಹೊಂದಿದೆ. ತತ್ವ ತ್ರಯಗಳನ್ನು ಮನುಷ್ಯ ಆಚರಿಸಿ ಜೀವನದಲ್ಲಿ ಉನ್ನತಿಯನ್ನು ಕಾಣಬೇಕಾಗಿದೆ ಎಂದು ತಿಳಿಸಿದರು.
ಧರ್ಮ ಪ್ರಧಾನವಾಗಿರುವ ಭಾರತ ದೇಶದಲ್ಲಿ ಹಲವಾರ ಧರ್ಮಗಳು ಅನ್ಯೋನ್ಯವಾಗಿ ಸಹಜೀವನ ನಡೆಸಿಕೊಂಡು ಬರುತ್ತಿವೆ. ಧರ್ಮಗಳು ಬೇರೆಯಾದರು, ಮಾನವನ ಕಲ್ಯಾಣವಾಗಿವೇ ಎಲ್ಲ ಧರ್ಮಗಳ ಗುರಿಯಾಗಿದೆ. ಸ್ವ ಧರ್ಮದಲ್ಲಿ ನಿಷ್ಠೆ ಪರ ಧರ್ಮದೊಟ್ಟಿಗೆ ಸಹಿಷ್ಣುತೆ ತೋರಿದರೆ ಆರೋಗ್ಯವಂತ ಸಮಾಜ ನಿರ್ಮಾಣವಾಗುವುದರಲ್ಲಿ ಎರಡು ಮಾತಿಲ್ಲ. ಧರ್ಮ ಮತ್ತು ಭಾಷೆ ವಿಚಾರಗಳಲ್ಲಿ ಸಂಘರ್ಷಗಳು ವ್ಯಾಪಾಕವಾಗುತ್ತಿವೆ. ವೈವಿಧ್ಯತೆಯಲ್ಲಿ ಏಕತೆ ಕಾಣುವ ಸಂಸ್ಕೃತಿ ನಮ್ಮದು. ಅವರವರ ಧರ್ಮ ಅವರಿಗೆ ಸರ್ವ ಶ್ರೇಷ್ಠ. ಮಾನವ ಧರ್ಮ ಉಳಿದು ಬೆಳೆದರೆ ಮಾತ್ರ ಎಲ್ಲ ಧರ್ಮಗಳು ಉಳಿಯುತ್ತವೆ. ನಮ್ಮ ಜತೆ ಅವರಿಲ್ಲ ಇವರಿಲ್ಲ ಎಂದು ಕೊರಗದೆ ನಮ್ಮ ಜತೆ ಇರುವುದಕ್ಕೆ ಅವರಿಗೆ ಯೋಗ್ಯತೆ ಎಂದು ನಿಶ್ಚಿಂತವಾಗಿರಬೇಕು. ವೈರಿಯನ್ನು ಇಲ್ಲವಾಗಿಸಲು ಅವನ ತಲೆ ತೆಗೆಯಬೇಕಾಗಿಲ್ಲ. ನಮ್ಮ ತಲೆಯಿಂದ ಅವನನ್ನು ತೆಗೆದು ಹಾಕಿದರೆ ಸಾಕು ಎಂದರು.
ಧರ್ಮಗಳ ಮೇಲೆ ಮಾನವ ಧರ್ಮವೆಂಬ ಬಿಗಿಯಾದ ರಕ್ಷಾ ಕವಚ ನಿರ್ಮಾಣವಾಗಿದೆ. ಸಮಾಜದಲ್ಲಿ ಸರ್ವಧರ್ಮ ಸಮನ್ವಯವೆ ಪ್ರಾಮುಖ್ಯತೆ ಪಡೆಯುತ್ತದೆ. ವ್ಯಕ್ತಿ ಮಾತಿಗಿಂತ ಕೃತಿಯಲ್ಲಿ ಸರ್ವಶ್ರೇಷ್ಠವಾಗಿರಬೇಕು. ಚರಿತ್ರೆಗಿಂತ ಚಾರಿತ್ರ್ಯ ಶ್ರೇಷ್ಠವಾಗಿರಬೇಕು. ಧರ್ಮ ಮಾರ್ಗದ ಕಾಯಕ ಹಾಗೂ ದಾಸೋಹಗಳು ಮಾನವ ಧರ್ಮದ ಉನ್ನತಿ ಸಾಧ್ಯ. ಕಾಯಕ ಜೀವನಕ್ಕೆ ಮೆರುಗು ನೀಡುತ್ತದೆ. ಸ್ವಾಭಿಮಾನದ ಕೊರತೆಯಿಂದ ಅನೇಕ ಅಸ್ಥಿರತೆಗಳನ್ನು ಎದುರಿಸಬೇಕಾಗಿದೆ. ಪ್ರತಿಯೊಬ್ಬರಲ್ಲೂ ಆತ್ಮಾಭಿಮಾನ ವೃದ್ಧಿಯಾಗಬೇಕು. ನಾವು ಎನ್ನುವುದಕ್ಕಿಂತ ನಮ್ಮವರು ಎಂಬ ಅಭಿಮಾನ ಬೆಳೆಸಿಕೊಳ್ಳಬೇಕಾಗಿದೆ. ಸಂಸ್ಕೃತಿ ಉಳಿಸಿ ಬೆಳೆಸಿಕೊಂಡು ಹೋಗಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಒಬ್ಬರು ಮತ್ತೊಬ್ಬರನ್ನು ತಿಳಿದು ಬದುಕಬೇಕಲ್ಲದೇ ತುಳಿದು ಬದುಕಬಾರದು. ಉತ್ತಮವಾದ ನಿರ್ಧಾರಗಳು ಅನುಭವದಿಂದ ಮಾತ್ರ ಲಭಿಸುತ್ತವೆ ಎಂದರು.
ಶಾಸಕ ಬಿ.ಕೆ.ಸಂಗಮೇಶ ಮಾತನಾಡಿದರು. ಎಡೆಯೂರು ಶ್ರೀ ರೇಣುಕ ಶಿವಾಚಾರ್ಯರು, ಮಳಲಿ ಮಠದ ಡಾ. ಶ್ರೀ ನಾಗಭೂಷಣ ಶಿವಾಚಾರ್ಯರು, ಬಿಳಕಿಯ ಶ್ರೀ ರಾಚೋಟೇಶ್ವರ ಶಿವಾಚಾರ್ಯರು, ಚನ್ನಗಿರಿಯ ಶ್ರೀ ಕೇದಾರ ಶಿವಶಾಂತವೀರ ಶಿವಾಚಾರ್ಯರು, ತಾವರೆಕೆರೆಯ ಡಾ. ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯರು ಆರ್ಶೀವಚನ ನೀಡಿದರು.
ಕವಲೆದುರ್ಗದ ಶ್ರೀ ಮರುಳಸಿದ್ದ ಶಿವಾಚಾರ್ಯ ಸ್ವಾಮೀಜಿ, ಹುಣಸಘಟ್ಟದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸಿದ್ದರಬೆಟ್ಟ ಕ್ಷೇತ್ರದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಬೀರೂರಿನ ಶ್ರೀ ರುದ್ರಮುನಿ ಸ್ವಾಮೀಜಿ, ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಪ್ರಮುಖರಾದ ಮಹೇಶ್ ಕುಮಾರ್, ಕೆ.ಎಚ್.ತೀರ್ಥಯ್ಯ, ಎಸ್.ಹಾಲೇಶ್ ಇತರರಿದ್ದರು.