ಗೋಕರ್ಣ: ಉತ್ತಮ ಕವಿ, ಸಾಹಿತಿಯಾಗ ಬಯಸುವವರು ಮೊದಲು ಓದುವ ಶ್ರಮ ಬೆಳೆಸಿಕೊಳ್ಳಬೇಕು. ಅಧ್ಯಯನ ಮತ್ತು ವಾಚನದ ಅಭಿರುಚಿಯಿಂದ ಮಾತ್ರ ಸರ್ವ ಹಿತವಾದ ಸಾಹಿತ್ಯ ಕೃತಿಯ ಸೃಜನವಾಗುತ್ತದೆ ಎಂದು ಹಿರಿಯ ಸಾಹಿತಿ ಡಾ.ಶ್ರೀಪಾದ ಶೆಟ್ಟಿ ಹೇಳಿದರು.
ಕರ್ನಾಟಕ ಬರಹಗಾರರ ಸಂಘದ ಜಿಲ್ಲಾ ಘಟಕದಿಂದ ಸ್ಥಳೀಯ ಭದ್ರಕಾಳಿ ಕಾಲೇಜ್ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ನೂತನ ಕೃತಿ ಬಿಡುಗಡೆ ಮತ್ತು ಕವಿ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು. ಯಾವುದೇ ಕಾರ್ಯ ಪ್ರಯತ್ನ ಮತ್ತು ಪರಿಶ್ರಮ ಇಲ್ಲದೇ ಸಾಫಲ್ಯ ಕಾಣುವುದಿಲ್ಲ. ಇದಕ್ಕೆ ಸಾಹಿತ್ಯವೂ ಹೊರತಾಗಿಲ್ಲ ಎಂದರು.
ಸಾಹಿತಿ ಹೊನ್ನಪ್ಪಯ್ಯ ಗುನಗ ಅವರ ‘ಮೌನದ ಪರದೆ’ ಕಥಾ ಸಂಕಲನ ಮತ್ತು ‘ಮೌನಧ್ವನಿ’ ಕವನ ಸಂಗ್ರಹವನ್ನು ಬಿಡುಗಡೆಗೊಳಿಸಲಾಯಿತು. ಪ್ರಾಚಾರ್ಯ ಎಸ್.ಸಿ. ನಾಯಕ, ಉಪನ್ಯಾಸಕ ರಾಮಮೂರ್ತಿ ನಾಯಕ, ಶಿಕ್ಷಕ ಪಾಂಡುರಂಗ ವಾಗ್ಳೇಕರ, ನಿವೃತ್ತ ಪೊಲೀಸ್ ಅಧಿಕಾರಿ ಸುರೇಶ ಜಿ. ನಾಯಕ ಉಪಸ್ಥಿತರಿದ್ದರು. ಸ್ಥಳೀಯ ಲಯನ್ಸ್ ಕ್ಲಬ್ ಅಧ್ಯಕ್ಷ ರವೀಂದ್ರ ಕೊಡ್ಲೆಕೆರೆ ಅಧ್ಯಕ್ಷತೆ ವಹಿಸಿದ್ದರು.
ಸಂಘದ ಜಿಲ್ಲಾ ಘಟಕಾಧ್ಯಕ್ಷ ಎನ್.ಎಸ್. ಲಮಾಣಿ ಸಂಘದ ಕಾರ್ಯ ಕಲಾಪಗಳನ್ನು ಪರಿಚಯಿಸಿದರು. ನೂತನ ಕೃತಿಗಳ ಕುರಿತು ಕಲ್ಪನಾ ನಾಯಕ ಮಾತನಾಡಿದರು. ಕವಿ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಜಿಲ್ಲೆಯ 40 ಕವಿಗಳಿಗೆ ಪ್ರಶಂಸನಾ ಪತ್ರ ನೀಡಲಾಯಿತು. ಕವಿ ಗೋಷ್ಠಿಯನ್ನು ರಾಜು ನಾಯ್ಕ, ಪುಷ್ಪಹಾಸ ಬಸ್ತೀಕರ ಮತ್ತು ಅನಿಲ ಕಾಮತ ಸಂಯೋಜಿಸಿದರು. ಶ್ರೀಶಾ ಗುನಗ ನೃತ್ಯ ಮತ್ತು ಪೊ›. ಸತ್ಯನಾರಾಯಣ ಗಾಯನ ಪ್ರಸ್ತುತ ಪಡಿಸಿದರು. ಕಾರ್ಯಕ್ರಮವನ್ನು ಪಲ್ಲವಿ ಹೆಗಡೆ, ಸಾವಿತ್ರಿ ಮಾಸ್ಕೇರಿ ಮತ್ತು ಸಾತು ಗೌಡ ಕಾರ್ಯಕ್ರಮ ನಿರ್ವಹಿಸಿದರು.