filter: 0; fileterIntensity: 0.0; filterMask: 0; hdrForward: 0; highlight: false; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.3420374, 0.64141685);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: -1;weatherinfo: null;temperature: 43; 
ಜಿಲ್ಲೆ

ವ್ಯಂಗ್ಯಚಿತ್ರಕಾರರಾಗಲು ಹಾಸ್ಯ ಪ್ರಜ್ಞೆ, ಕಲ್ಪನಾ ಶಕ್ತಿ ಇರಬೇಕು: ವ್ಯಂಗ್ಯ ಚಿತ್ರಕಾರ ಎಂ.ವಿ. ಶಿವರಾಂ ಸಲಹೆ

ಹಾಸನ: ಹಾಸ್ಯ ಪ್ರಜ್ಞೆ, ಕಲ್ಪನಾ ಶಕ್ತಿ, ಹೊಸತನವನ್ನು ಆಲೋಚಿಸುವ ಶಕ್ತಿ ಇರುವವರು ಅತ್ಯುತ್ತಮ ವ್ಯಂಗ್ಯಚಿತ್ರಕಾರರಾಗಬಹುದು ಎಂದು ಹಿರಿಯ ಪತ್ರಕರ್ತರು ಹಾಗೂ ವ್ಯಂಗ್ಯ ಚಿತ್ರಕಾರರಾದ ಎಂ.ವಿ. ಶಿವರಾಂ ಹೇಳಿದರು.

ನಗರದ ಆರ್.ಸಿ. ರಸ್ತೆಯ ಗಂಧದಕೋಠಿ ಆವರಣದಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ಆಯೋಜಿಸಿದ್ದ ವ್ಯಂಗ್ಯಚಿತ್ರ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪತ್ರಿಕೋದ್ಯಮ ಕ್ಷೇತ್ರದಲ್ಲಿ ವ್ಯಂಗ್ಯಚಿತ್ರಗಳ ಪ್ರಾಮುಖ್ಯತೆ ಅತ್ಯಂತ ಹೆಚ್ಚಿದೆ. ನೂರಾರು ಪದಗಳಲ್ಲಿ ಹೇಳಲಾಗದ ಅರ್ಥವನ್ನು ಒಂದು ಕಿರು ಚಿತ್ರಗಳನ್ನು ಬಿಡಿಸುವ ಮೂಲಕ ಅರ್ಥವನ್ನು ಹೇಳಲಾಗುತ್ತದೆ. 1740 ರಲ್ಲಿ ರೋಮ್ ರಾಜರ ಮೇಲೆ ಅವರ ಅತೃಪ್ತ ಆಡಳಿತವನ್ನು ಟೀಕಿಸುವ, ವಿರೋಧಿಸುವ ಸಲುವಾಗಿ ವ್ಯಂಗ್ಯಚಿತ್ರ ಆರಂಭವಾಯಿತು ಎಂದು ತಿಳಿಸಿದರು.

ಕೊರವಂಜಿ ಎಂಬ ಪತ್ರಿಕೆ ವ್ಯಂಗ್ಯ ಚಿತ್ರಗಳನ್ನು ಮೊದಲಿಗೆ ಪ್ರಕಟಿಸುತ್ತಿತ್ತು. ಅದರಲ್ಲೂ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ವ್ಯಂಗ್ಯ ಚಿತ್ರ ಬರೆಯುತ್ತಿದ್ದ ಆರ್.ಕೆ. ಲಕ್ಷ್ಮಣ್ ಅವರು ಹೆಸರಾಂತ ವ್ಯಂಗ್ಯಚಿತ್ರಕಾರರಾಗಿ ದೇಶಾದ್ಯಾಂತ ಖ್ಯಾತಿ ಪಡೆದಿದ್ದರು. ಒಂದು ವ್ಯಂಗ್ಯ ಚಿತ್ರ ನೋಡುವುದಕ್ಕೆ ಹಾಸ್ಯವಾಗಿ ಕಂಡು ಬಂದರೂ ಅದರಲ್ಲಿ ಅಪಾರವಾದ ವಿಷಯಗಳು ಅಡಕವಾಗಿರುತ್ತದೆ. ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ವಿಡಂಬನೆ ಮಾಡುವ ವ್ಯಂಗ್ಯ ಚಿತ್ರಗಳು ಹೆಚ್ಚಾಗಿ ಇರುತ್ತದೆ. ಅದರಲ್ಲೂ ರಾಜಕೀಯ ವ್ಯಕ್ತಿಗಳ ವಿಡಂಬನೆ ಮಾಡುವ ವೇಳೆ ಅತ್ಯಂತ ಹೆಚ್ಚು ಜಾಗರೂಕರಾಗಿರಬೇಕು. ಒಮ್ಮೊಮ್ಮೆ ರಾಜಕೀಯ ವ್ಯಕ್ತಿಗಳ ಚಿತ್ರವನ್ನು ವ್ಯಂಗ್ಯವಾಗಿ ಚಿತ್ರಿಸಿದ ವೇಳೆ ಅವರ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ವ್ಯಂಗ್ಯಚಿತ್ರ ರಚನೆಯಲ್ಲಿ ತಂತ್ರ ಹಾಗೂ ಕುತಂತ್ರ ಎರಡೂ ಪ್ರಮುಖವಾದವುಗಳು. ವಿಷಯಗಳು, ಮುಖಭಾವ, ಸ್ಥಳ ಇವೆಲ್ಲವೂ ವ್ಯಂಗ್ಯಚಿತ್ರದ ರಚನೆಯಲ್ಲಿ ಬಹುಮುಖ್ಯವಾದವುಗಳಾಗಿವೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಿ.ಕೆ. ಮಂಜಯ್ಯ ಮಾತನಾಡಿ, ಪತ್ರಿಕೋದ್ಯಮ ಕ್ಷೇತ್ರ ಇಂದು ಬಹುದೊಡ್ಡ ಕ್ಷೇತ್ರವಾಗಿ ಬೆಳೆದಿದ್ದು, ಯುವಕರನ್ನು ಆಕರ್ಷಿಸುವ ನೆಚ್ಚಿನ ಕ್ಷೇತ್ರವಾಗಿದೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವ ಯುವ ಸಮೂಹ ಕಾರ್ಯಕ್ಷಮತೆ, ಪ್ರಾಮಾಣಿಕತೆ, ನಿಷ್ಪಕ್ಷಪಾತತೆಯನ್ನು ಮೈಗೂಡಿಸಿಕೊಳ್ಳಬೇಕು. ಮಾಧ್ಯಮ ಕ್ಷೇತ್ರದಲ್ಲಿ ಬರವಣಿಗೆಗೆ ಇರುವಷ್ಟೇ ಮೌಲ್ಯ ವ್ಯಂಗ್ಯಚಿತ್ರಕ್ಕೂ ಇದೆ. ಹಾಗಾಗಿ ವ್ಯಂಗ್ಯ ಚಿತ್ರಗಳು ನೋಡುಗರ, ಓದುಗರ ಮನ ಸೆಳೆಯುವಲ್ಲಿ ಪ್ರಮುಖ ಪಾತ್ರವಹಿಸುವುದರಿಂದ ಮಾಧ್ಯಮ ಕ್ಷೇತ್ರಕ್ಕೆ ಇದು ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ. ವ್ಯಂಗ್ಯ ಚಿತ್ರದಲ್ಲಿ ಚಿತ್ರ ಬರೆಯುವುದು ಎಷ್ಟು ಮುಖ್ಯವಾಗಿರುತ್ತದೆಯೋ ಅದಕ್ಕೆ ಪಂಚಿಂಗ್ ಲೈನ್ ನೀಡುವುದು ಅಷ್ಟೇ ಮುಖ್ಯವಾಗಿರುತ್ತದೆ. ಯುವ ಪತ್ರಕರ್ತರು ವರದಿಗಾರಿಕೆ, ನಿರೂಪಣೆ ಮಾಡುವುದರೊಂದಿಗೆ ಈ ತರನಾದ ಕಲೆಗಳನ್ನು ಕಲಿಯಬೇಕು ಎಂದು ತಿಳಿಸಿದರು.

ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಸಿ.ಎಲ್. ಶಿವಕುಮಾರ್, ಐಕ್ಯೂಎಸಿ ಸಂಚಾಲಕ ಜಿ.ಆರ್. ಮೋಹನ್ ಕುಮಾರ್, ಎಂ.ಜಿ. ರಸ್ತೆ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಮನೋಹರ್, ಉಪನ್ಯಾಸಕರಾದ ಪಿ. ರವಿ ಕುಮಾರ್, ಎಚ್.ಕೆ. ದಿಲೀಪ್ ಕುಮಾರ್, ಸಿ.ಪಿ. ಕಾವ್ಯಾ ಇತರರು ಹಾಜರಿದ್ದರು.