ಜಿಲ್ಲೆ

ಶೋಷಣೆಯಿಂದ ಹೊರಬರಲು ಸಂಘಟಿತರಾಗಿ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ದುರುದ್ದೇಶ ಹೊಂದಿರುವ ನಾಯಕರನ್ನು ನಂಬಿ ಶೋಷಣೆಗೆ ಒಳಗಾಗುವ ಬದಲು ಪೌರಕಾರ್ವಿುಕರು ಸ್ವ ಸಂಘಟಿತರಾಗಬೇಕು. ಕತ್ತಲೆಯಿಂದ ಹೊರ ಬರಬೇಕು. ತಮ್ಮ ಯಾವುದೇ ಸಮಸ್ಯೆಗಳನ್ನು ಈಡೇರಿಸಲು ಸರ್ಕಾರ ಬದ್ಧ ಎಂಬುದಕ್ಕೆ ಹೊರಗುತ್ತಿಗೆ ಪೌರಕಾರ್ವಿುಕರನ್ನು ನೇರ ವೇತನ ಪಾವತಿ ವ್ಯವಸ್ಥೆಗೆ ಒಳಪಡಿಸಿರುವುದೇ ಸಾಕ್ಷಿ ಎಂದು ಶಾಸಕ, ಕರ್ನಾಟಕ ಸ್ಲಮ್ ಬೋರ್ಡ್ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಹೇಳಿದರು.

ನೇರ ವೇತನ ಪಾವತಿ ವ್ಯವಸ್ಥೆಗೆ ಒಳಪಟ್ಟ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 799 ಹೊರಗುತ್ತಿಗೆ ಪೌರ ಕಾರ್ವಿುಕರು ಭಾನುವಾರ ಶಾಸಕರ ಗೃಹ ಕಚೇರಿಗೆ ಆಗಮಿಸಿ ಸಿಹಿ ತಿನಿಸಿ, ಬೃಹತ್ ಹೂವಿನ ಹಾರ ಹಾಕಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಪೌರಕಾರ್ವಿುಕರನ್ನುದ್ದೇಶಿಸಿ ಶಾಸಕರು ಮಾತನಾಡಿದರು.

ನೇರವೇತನ ಪಾವತಿ, ನೇರ ನೇಮಕಾತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಣ. ಸಿದ್ದರಾಮಯ್ಯ ಅವರನ್ನು ಯಾವತ್ತೂ ಮರೆಯಬಾರದು. ಹಿಂದೆ ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಹೊರಗುತ್ತಿಗೆ ಪೌರಕಾರ್ವಿುಕರನ್ನು ನೇರವೇತನ ಮತ್ತು ನೇರ ನೇಮಕಾತಿ ಮಾಡುವಂತೆ ಆದೇಶ ಹೊರಡಿಸಲಾಗಿತ್ತು. ಅದರಂತೆ ಹಂತ ಹಂತವಾಗಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಹು-ಧಾ ಮಹಾನಗರ ಪಾಲಿಕೆ ವಿಳಂಬ ಮಾಡಿದ್ದನ್ನು ವಿರೋಧಿಸಿ ಕಳೆದ ವಾರ ಪತ್ರ ಬರೆದು ಖಡಕ್ ಸೂಚನೆ ನಿಡಲಾಗಿತ್ತು. ಅದರಂತೆ ಪಾಲಿಕೆ ಆಯುಕ್ತರು ಆದೇಶ ಮಾಡಿದ್ದಾರೆ ಎಂದರು.

ಸ್ವಯಂ ಘೊಷಿತ ಮುಖಂಡರೆಂದು ಹೇಳಿಕೊಳ್ಳುವ ಕೆಲವರು ನಿಮ್ಮ ಬೆವರಿನ ಶ್ರಮದಿಂದಾಗಿ ಆರ್ಥಿಕವಾಗಿ ಸದೃಢರಾಗುತ್ತಿದ್ದಾರೆ. ಇದಕ್ಕೆ ನೀವು ಆಸ್ಪದ ಕೊಡಬಾರದು. ನಿಮ್ಮ ದಾರಿ ತಪ್ಪಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಅಂಥವರಿಂದ ದೂರ ಇರಿ. ನಿಮ್ಮ ಬೆವರಿನ ಶ್ರಮ, ಅದರ ಪ್ರತಿಫಲ ನಿಮಗೆ ಸಿಗಬೇಕು. ಅದು ಮತ್ಱಾರಿಗೂ ಸಿಗಲು ನಾನು ಬಿಡುವುದಿಲ್ಲ. ನಿಮ್ಮ ಯಾವುದೇ ಸಮಸ್ಯೆಗಳಿದ್ದರೂ ನೇರವಾಗಿ ನನಗೆ ಸಂರ್ಪಸಿ. ನಾನು ಪ್ರಾಮಾಣಿಕವಾಗಿ ಅದನ್ನು ಬಗೆಹರಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಪೌರ ಕಾರ್ವಿುಕರಿಗೆ ಅಭಯ ನೀಡಿದರು.

ಪೌರ ಕಾರ್ವಿುಕರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ತಮ್ಮ ಮಕ್ಕಳ ಭವಿಷ್ಯದ ಕುರಿತು ಚಿಂತನೆ ಮಾಡಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಉನ್ನತ ಹುದ್ದೆಗಳನ್ನು ಅಲಂಕರಿಸಲು ಪ್ರೋತ್ಸಾಹಿಬೇಕು ಎಂದರು.

ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಸದಸ್ಯರಾದ ಶ್ರೀನಿವಾಸ ಬೆಳದಡಿ, ಪ್ರಮುಖರಾದ ಬಿ.ಬಿ. ಕೆಂಪಣ್ಣವರ, ಸಿದ್ದಪ್ಪ ಶಿರವಾರ, ಈಶ್ವರ ಹೊಸಮನಿ, ಪ್ರಶಾಂತ ಮಣಮುಟ್ಟಗಿ, ನಿಂಗಪ್ಪ ಹೊಸಮನಿ, ರಾಹುಲ್ ಬೆಳದಡಿ, ಮುತ್ತುರಾಜ ಕೆಲೂರ, ಚಂದ್ರು ಕನೆಕಲ್, ಯಲ್ಲವ್ವ ಗುಡಿಹಾಳ, ಶಾವಕ್ಕ ಚಲವಾದಿ, ಶಿವು ಮೇಲಿನಮನಿ ಇತರರು ಇದ್ದರು.