ಹುಕ್ಕೇರಿ: ಬಡ ಫಲಾನುಭವಿಗಳಿಗೆ ಅನ್ಯಾಯವಾಗದಂತೆ ಬಗರ ಹುಕುಂ ಸಾಗುವಳಿ ಸಮೀಕ್ಷೆ ನಡೆಸಬೇಕು. 2005ಕ್ಕಿಂತ ಮೊದಲು ಅರ್ಜಿ ಸಲ್ಲಿಸಿದವರು ಸಾಗುವಳಿ ಮಾಡುತ್ತಿರುವುದನ್ನು ಸ್ಥಾನಿಕ ಚೌಕಾಶಿ ಮತ್ತು ದಾಖಲೆ ಪರಿಶೀಲಿಸಿ ಮುಂದಿನ ಬಗರ್ ಹುಕುಂ ಸಮಿತಿ ಸಭೆಯಲ್ಲಿ ಮಂಡಿಸಬೇಕೆಂದು ಶಾಸಕ ನಿಖಿಲ ಕತ್ತಿ ಸೂಚಿಸಿದರು.
ಇಲ್ಲಿನ ತಹಸೀಲ್ದಾರ್ ಕಾರ್ಯಾಲಯದಲ್ಲಿ ಸೋಮವಾರ ಜರುಗಿದ ಬಗರ್ ಹುಕುಂ ಸಮಿತಿ ಸದಸ್ಯರ ಸಭೆಯಲ್ಲಿ ಮಾತನಾಡಿ, ಹಲವು ವರ್ಷಗಳಿಂದ ಸರ್ಕಾರಿ ಗಾಯರಾಣ ಮತ್ತು ಅರಣ್ಯ ಇಲಾಖೆ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ಬಡವರು, ಹಿಂದುಳಿದವರಿಗೆ ಯಾವುದೇ ಹಕ್ಕು ಪತ್ರ ನೀಡಿಲ್ಲ. ಇದೀಗ ಸರ್ಕಾರ ಅಕ್ರಮ-ಸಕ್ರಮ ಯೋಜನೆಯಡಿ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಲು
ನಿರ್ಧರಿಸಿದೆ. ಆದ್ದರಿಂದ ಬಗರ್ ಹುಕುಂ ಸಮಿತಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸ್ಥಾನಿಕ ಚೌಕಾಶಿ ನಡೆಸಿ ತಹಸೀಲ್ದಾರರು ತಮ್ಮ ಸಿಬ್ಬಂದಿಗಳೊಂದಿಗೆ ವರದಿ ತಯಾರಿಸಬೇಕು ಎಂದು ಸೂಚಿಸಿದರು.
ಸಮಿತಿ ಸದಸ್ಯ ಕೆಂಪಣ್ಣ ಶಿರಹಟ್ಟಿ ಮಾತನಾಡಿ, ಬಹಳಷ್ಟು ಬಡ ಮತ್ತು ಹಿಂದುಳಿದ ಸಾಗುವಳಿದಾರರು ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅವುಗಳನ್ನು ಈ ಹಿಂದೆ ತಿರಸ್ಕರಿಸಿದ್ದಾರೆ. ಕಾರಣ ಆ ಅರ್ಜಿಗಳನ್ನು ನೂತನ ತಂತ್ರಜ್ಞಾನದ ಮೂಲಕ 2005ಕ್ಕಿಂತ ಮೊದಲಿನಿಂದ ಸಾಗುವಳಿ ಮಾಡುತ್ತಿರುವುದನ್ನು ಪರಿಶೀಲಿಸಲು ಸಾಧ್ಯವಿದೆ. ಆ ವಿಷಯವನ್ನು ಶಾಸಕರು, ತಹಸೀಲ್ದಾರರು ಗಮನಿಸುವಂತೆ ವಿನಂತಿಸಿದರು.
ಬಗರ್ ಹುಕುಂ ಸಮಿತಿ ಸಭೆಯ ನೂತನ ಸದಸ್ಯರು ಹಾಗೂ ಶಾಸಕರನ್ನು ತಾಲೂಕಾಡಳಿತದಿಂದ ಸನ್ಮಾನಿಸಲಾಯಿತು. ತಹಸೀಲ್ದಾರ್ ಮಂಜುಳಾ ನಾಯಕ, ತಾಪಂ ಇಒ ಟಿ.ಆರ್.ಮಲ್ಲಾಡದ, ಬಗರ್ ಹುಕುಂ ಸಮಿತಿ ಸದಸ್ಯರಾದ ಕೆಂಪಣ್ಣ ಶಿರಹಟ್ಟಿ, ಸಿಕಂದರ್ ಸನದಿ, ಭಾರತಿ ಬೆಣ್ಣಿ, ಸದಾನಂದ ಗುಡಿಕಡೆ, ದ್ರಾಕ್ಷಾಯಿಣಿ ಏಸಿ, ಗ್ರೇಡ್-2 ತಹಸೀಲ್ದಾರ್ ಪ್ರಕಾಶ ಕಲ್ಲೋಳಿ, ಶಿರಸ್ತೆದಾರ ಎನ್.ಆರ್.ಪಾಟೀಲ, ಭೂಮಾಪನ ಇಲಾಖೆಯ ತನ್ವೀರ್ ಢಾಂಗೆ ಇತರರಿದ್ದರು.