ಜಿಲ್ಲೆ

ಗುರಿ ಮುಟ್ಟಲು ಛಲ ಅಗತ್ಯ

Dharwada - Santosh Vaidya

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಪ್ರತಿ ವಿದ್ಯಾರ್ಥಿಯಲ್ಲೂ ಗುರಿ ಇರಬೇಕು. ಗುರಿ ಮುಟ್ಟಲು ಛಲ ಅಗತ್ಯ ಎಂದು ಶೈಕ್ಷಣಿಕ ಸಲಹೆಗಾರ ಜಗನ್ನಾಥ ನಾಡಿಗೇರ ಹೇಳಿದರು.

ಧಾರವಾಡ ಭಾರತಿನಗರದಲ್ಲಿರುವ ಗುರುದೇವ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಪ್ರವೇಶ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಿಯು ಶಿಕ್ಷಣವು ಭವಿಷ್ಯ ರೂಪಿಸಿಕೊಳ್ಳಲು ಸೂಕ್ತವಾದ ಕಲಿಕಾ ಹಂತವಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ಆಯ್ಕೆಯು ನಿಮ್ಮ ಕೈಯಲ್ಲಿದೆ ಎಂದರು.

ಜೀವನದಲ್ಲಿ ಎದುರಾಗುವ ಕಷ್ಟ, ಸಮಸ್ಯೆಗಳನ್ನು ಎದುರಿಸಿದಾಗ ಮಾತ್ರ ಸಾಧನೆ ಮಾಡಲು ಸಾಧ್ಯ. ಗ್ರಹಣ ಶಕ್ತಿ, ಸ್ಮರಣ ಶಕ್ತಿ, ಅಭಿವ್ಯಕ್ತಿ ಸಾಮರ್ಥ್ಯ ವಿದ್ಯಾರ್ಥಿಗಳಿಗೆ ಇರಲೇಬೇಕು. ಸತತ ಪ್ರಯತ್ನ, ಪ್ರಾಮಾಣಿಕತೆ, ಪರಿಶ್ರಮದಿಂದ ಗುರಿಯನ್ನು ಮುಟ್ಟಲು ಸಾಧ್ಯ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ನಿರ್ದೇಶಕ ಅಖಿಲಕುಮಾರ ಹಲಗತ್ತಿ ಮಾತನಾಡಿ, ಕಾಲೇಜ್ ಶಿಕ್ಷಣದಲ್ಲಿ ಪಿಯುಸಿಯ ಎರಡು ವರ್ಷ ಬಹಳ ಮುಖ್ಯ. ಇಲ್ಲಿಂದ ಜೀವನದ ಹೊಸ ಅಧ್ಯಾಯ ಪ್ರಾರಂಭ. ವಿದ್ಯಾರ್ಥಿಗಳು ಓದುವ ಹಸಿವನ್ನು ಬೆಳಸಿಕೊಳ್ಳಬೇಕು ಎಂದರು.

ಪ್ರಾಚಾರ್ಯ ಮದನ ಇಜಿ ಮಾತನಾಡಿದರು. ಉಪಪ್ರಾಚಾರ್ಯ ಮಹಾಲಿಂಗ ಕಮತಗಿ 2024-25ನೇ ಸಾಲಿನ ಶೈಕ್ಷಣಿಕ ಯೋಜನೆಯನ್ನು ವಿವರಿಸಿದರು. ಆಡಳಿತಾಧಿಕಾರಿ ಮಹಮ್ಮದ್ ಸಾಜೀದ್ ಉಪಸ್ಥಿತರಿದ್ದರು.

ಕುಮಾರ ಪೂಜಾರ್ ಹಾಗೂ ಚಾಂದಿನಿ ಡಿ. ನಿರೂಪಿಸಿದರು. ಅರುಣ ಎಸ್. ಸ್ವಾಗತಿಸಿದರು. ಡಾ. ಶ್ರೀಧರ್ ವಂದಿಸಿದರು.