ಜಿಲ್ಲೆ

ರಂಗ ಕಲೆಯನ್ನು ಉಳಿಸಲು ಗಮನ ಹರಿಸಿ

ಎ. ಆರ್. ರಘುರಾಮ

 ತಿ.ನರಸೀಪುರ : ರಂಗ ಕಲೆಯನ್ನು ಉಳಿಸಿ ಬೆಳೆಸಬೇಕು ಎಂದು ವಾಟಾಳು ಮಠದ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ತ್ರಿವೇಣಿ ಸಂಗಮ ರಂಗಭೂಮಿ ಕಲಾವಿದರ ಸಂಘದ ಉದ್ಘಾಟನೆ ಹಾಗೂ ಡ್ರಾಮಾ ಮಾಸ್ಟರ್ ಕಿರಗಸೂರು ಮಾದಪ್ಪ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ರಂಗಕಲಾ ಸೇವೆಯಲ್ಲಿ ಮಾದಪ್ಪ ಹಾಗೂ ಸಂಗೀತ ವಿದ್ವಾನ್ ರಾಜಪ್ಪ ಅವರ ಸೇವೆ ಬಹು ದೊಡ್ಡದು. ಇವರಿಬ್ಬರೂ ತಾಲೂಕಿನ ಹೆಮ್ಮೆಯ ಕಲಾವಿದರು ಎಂದರು. ರಂಗಭೂಮಿ ಕಲಾವಿದರನ್ನು ಎಲ್ಲರೂ ಗೌರವಿಸಬೇಕು. ಈ ಪರಂಪರೆ ಉಳಿಸಬೇಕು ಎಂದರು.

ಹಿರಿಯ ರಂಗಕರ್ಮಿ ಜನಾರ್ಧನ (ಜನ್ನಿ) ಮಾತನಾಡಿ, ಉತ್ತಮ ಸಮಾಜ ನಿರ್ಮಾಣಕ್ಕೆ ಮನುಷ್ಯತ್ವ, ಪ್ರೀತಿ ಹಾಗೂ ಬಾಂಧವ್ಯ ಬಹು ಮುಖ್ಯ ಎಂದರು. ರಂಗಭೂಮಿಗೆ ತನ್ನದೇ ಆದ ಮಹತ್ವ ಇದೆ. ರಂಗ ಕಲೆಯಿಂದ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ ಎಂದರು. ತ್ರಿವೇಣಿ ಸಂಗಮ ರಂಗಭೂಮಿ ಕಲಾವಿದರ ಸಂಘ ಈ ನಿಟ್ಟಿನಲ್ಲಿ ರಂಗ ಸೇವೆಯನ್ನು ಹೆಚ್ಚಾಗಿ ಮಾಡಲಿ. ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಲಿ ಎಂದರು.

ನಂಟು ಇದೆ: ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಪ್ರಭುಸ್ವಾಮಿ ಮಾತನಾಡಿ, ತಾಲೂಕಿನ ಪ್ರತಿಯೊಂದು ಗ್ರಾಮಕ್ಕೂ ರಂಗಭೂಮಿ ನಂಟು ಇದೆ ಎಂದರು. ಡಾ. ರಾಜಕುಮಾರ್ ಅವರಂಥ ಮೇರು ನಟನನ್ನು ನಾಡಿಗೆ ಪರಿಚಯಿಸಿದ್ದೇ ರಂಗಭೂಮಿ. ಅವರ ತಂದೆ ಪುಟ್ಟಸ್ವಾಮಯ್ಯ ಕೂಡ ರಂಗ ಕಲಾವಿದರಾಗಿದ್ದರು ಎಂದು ಸ್ಮರಿಸಿದರು.

ತರಬೇತಿ: ಕಿರಗಸೂರು ಎಂ.ಮಾದಪ್ಪ ಬಾಲ್ಯದಿಂದಲೂ ಹಳೇ ಮೈಸೂರು ಪ್ರಾಂತ್ಯದ ಎಲ್ಲಾ ಜಿಲ್ಲೆಗಳಲ್ಲಿ 300 ಕ್ಕೂ ಹೆಚ್ಚು ಪೌರಾಣಿಕ ನಾಟಕಗಳ ಪ್ರದರ್ಶನ ಮಾಡಲು ಸಾವಿರಾರು ಕಲಾವಿದರಿಗೆ ತರಬೇತಿ ನೀಡಿದ್ದಾರೆ. ರಾಮಾಯಣ, ಮಹಾಭಾರತದಂತಹ ಕಥೆಗಳು ನಾಟಕ ರೂಪದಲ್ಲಿ ಹಳ್ಳಿ, ಹಳ್ಳಿಗೆ

ಪ್ರವೇಶ ಮಾಡಿ ರಂಜಿಸಲು ಇವರ ಸೇವೆಯೇ ಕಾರಣ ಎಂದು ಪ್ರಭುಸ್ವಾಮಿ ಹೇಳಿದರು.

ಕಿರಗಸೂರು ಮಾದಪ್ಪ ಅವರ ಚಂದ್ರಮನ ಪರಿಭಾವ ಅಥವಾ ಭೃಗುಮುನಿಯ ಗರ್ವಭಂಗ ಎಂಬ ಪೌರಾಣಿಕ ನಾಟಕವನ್ನು ಪ್ರದರ್ಶಿಸಲಾಯಿತು.

ಸರ್ಕಾರಿ ನೌಕರ ಸಂಘದ ತಾಲೂಕು ಅಧ್ಯಕ್ಷ ಎಂ.ವಿ.ಶಿವಶಂಕರಮೂರ್ತಿ, ಜಿ.ಪಂ ಮಾಜಿ ಸದಸ್ಯ ಕೆ.ಮಹದೇವು, ತಾ.ಪಂ ಮಾಜಿ ಸದಸ್ಯ ಗೆಜ್ಜಗನಹಳ್ಳಿ ಜಿ.ಡಿ.ಮಹೇಶ, ಸಂಗೀತ ವಿದ್ವಾನ್

ರಾಜಪ್ಪ, ಹೆಳವರ ಹುಂಡಿ ಡ್ರಾಮಾ ಮಾಸ್ಟರ್ ಚೌಡಶೆಟ್ಟಿ, ಕಲಾವಿದರ ಸಂಘದ ಗೌರವಾಧ್ಯಕ್ಷ ಶಶಿಕಾಂತ, ಕಾರ್ಯದರ್ಶಿ ಪರಶಿವಮೂರ್ತಿ ಇತರರು ಇದ್ದರು.