ಜಿಲ್ಲೆ

ಹೃದಯ ಭಾಷೆ ಮಾತೃಭಾಷೆಯಾಗಲಿ ; ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಸಲಹೆ

Tumakuru

ತುಮಕೂರು : ನಾಲಗೆಯ ಮೇಲೆ ಹಲವು ಭಾಷೆಗಳು ನಲಿಯಲಿ, ಹೃದಯದ ಭಾಷೆ ಮಾತೃಭಾಷೆಯಾಗಿರಲಿ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಹೇಳಿದರು.

ನಗರದ ಶ್ರೀಸಿದ್ಧಗಂಗಾ ಮಹಿಳಾ ಪದವಿ ಕಾಲೇಜಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಶ್ರೀಸಿದ್ಧಗಂಗಾ ಮಹಿಳಾ ಕಾಲೇಜಿನಲ್ಲಿ ಸೋಮವಾರ ವಿಶ್ವ ಮಾತೃಭಾಷಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಮಾತೃಭಾಷೆಯ ಮೂಲಕ ವ್ಯಕ್ತಿಯೊಬ್ಬ ಅತಿ ಸ್ಪಷ್ಟವಾಗಿ ತನ್ನ ವಿಚಾರಗಳನ್ನು, ಭಾವನೆಗಳನ್ನು, ಆಲೋಚನೆಗಳನ್ನು ಹಂಚಿಕೊಳ್ಳಲು ಸಾಧ್ಯ. ಹೀಗಾಗಿಯೇ ಮಾತೃಭಾಷೆಗೆ ನಾವು ತಾಯಿಯ ಸ್ಥಾನ ನೀಡಿದ್ದು, ಅದು ತಾಯಿಭಾಷೆ ಎನಿಸಿದೆ ಎಂದರು.

ಶಿಕ್ಷಣವು ಕಲಿಕೆಯ ಮೂಲ ಅಡಿಪಾಯವಾಗಿದ್ದು, ಮಗುವಿನ ಬಾಲ್ಯಾವಸ್ಥೆಯ ಶಿಕ್ಷಣ ಮಾತೃಭಾಷೆಯಲ್ಲಿಯೇ ಆರಂಭವಾಗಬೇಕು ಎಂದು ವಿಶ್ವಸಂಸ್ಥೆ ಹೇಳಿದೆ. ಇಂದಿನ ಜಾಗತೀಕರಣದ ಸಂದರ್ಭದಲ್ಲಿ ಶಿಕ್ಷಣ ಮತ್ತು ಉತ್ತಮ ಸಮಾಜ ನಿರ್ಮಾಣಕ್ಕೆ ಬಹುಭಾಷೆಗಳ ಕಲಿಕೆ ಅತ್ಯಗತ್ಯವಾಗಿದೆ ಎಂದರು.

ಪ್ರಾಚಾರ್ಯ ಡಾ.ಕೆ.ಸಿ.ಜಯಸ್ವಾಮಿ ಮಾತನಾಡಿ, ಕನ್ನಡವೊಂದು ವೈಜ್ಞಾನಿಕ ಭಾಷೆಯಾಗಿದ್ದು, ಎಲ್ಲ ಭಾಷೆಗಳ ಪದಗಳನ್ನು ಜೀರ್ಣಿಸಿಕೊಂಡು ಬೆಳೆಯುತ್ತಾ ಇದೆ. ಆದರೆ, ತಾಯಿಭಾಷೆಯಾದ ಕನ್ನಡವನ್ನು ಆಧುನೀಕರಣಕ್ಕೆ ಒಗ್ಗಿಕೊಳ್ಳುವಂತೆ ಬೆಳೆಸಬೇಕಾದ ಅಗತ್ಯವಿದೆ ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ ಜಾಗೃತಿ ಸಮಿತಿ ಸದಸ್ಯರಾದ ಉಗಮ ಶ್ರೀನಿವಾಸ್, ಮಲ್ಲಿಕಾರ್ಜುನ ಕೆಂಕೆರೆ, ಲೇಖಕಿ ಡಾ.ಬಿ.ಸಿ.ಶೈಲಾನಾಗರಾಜು, ಪ್ರೊ.ವಿಜಯಲತಾ, ಕಸಾಪ ತಾಲೂಕು ಅಧ್ಯಕ್ಷ ಚಿಕ್ಕಬೆಳ್ಳಾವಿ ಶಿವಕುಮಾರ್, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಮಂಗಳಾ, ಪ್ರೊ.ಶಕುಂತಲಾ, ಪ್ರೊ.ಸಿ.ಎಸ್.ಶ್ವೇತಾ ಇದ್ದರು. ಕನ್ನಡ ವರ್ಣಮಾಲೆಯ ನಾಲ್ಕು ಗೀತೆಗಳನ್ನು ಒಟ್ಟಾಗಿ ಹಾಡಲಾಯಿತು. ವಿದ್ಯಾರ್ಥಿನಿಯರಿಗಾಗಿ ಪದಪದ ಕನ್ನಡ ಅರ್ಥದ ಚಟುವಟಿಕೆ ನಡೆಸಲಾಯಿತು.

ಭಾಷೆಗೆ ಸಾಂಸ್ಕೃತಿಕ ಆವರಣ : ಭಾಷೆ ಸಂಸ್ಕೃತಿಯ ಪ್ರತಿಬಿಂಬ. ಒಬ್ಬ ವ್ಯಕ್ತಿ ತಲೆಮಾರಿನಿಂದ ಬಳಸಿಕೊಂಡು ಬಂದ ಭಾಷೆಗೆ ಸಾಂಸ್ಕೃತಿಕ ಆವರಣ ಬಂದಿರುತ್ತದೆ. ಅದಕ್ಕೆ ಮಾತೃಭಾಷೆ ಎನ್ನುತ್ತೇವೆ ಎಂದು ಸಿದ್ಧಗಂಗಾ ಪದವಿ ಕಾಲೇಜುಗಳ ಸಂಯೋಜನಾಧಿಕಾರಿ ಡಾ.ಡಿ.ಎನ್.ಯೋಗೀಶ್ವರಪ್ಪ ಹೇಳಿದರು. ಮಾತೃಭಾಷೆಯ ಮೂಲಕವೇ ಆತನ ಬದುಕು ಆರಂಭವಾಗುತ್ತದೆ. ಆದ್ದರಿಂದ ಭಾಷೆ ಮತ್ತು ಬದುಕು ಬೇರೆಯಲ್ಲ ಅವೆರಡೂ ಒಂದೇ ನಾಣ್ಯದ ಎರಡು ಮುಖಗಳು ಎಂದು ಅಭಿಪ್ರಾಯಪಟ್ಟರು.

ಮಾತೃಭಾಷೆ ನಮ್ಮನ್ನು ಯಜಮಾನರನ್ನಾಗಿ ಮಾಡುತ್ತದೆ. ಅದನ್ನು ನಾವು ಬದಿಗೆ ಸರಿಸಿ ಅನ್ಯಭಾಷೆಯ ವ್ಯಾಮೋಹ ಬೆಳೆಸಿಕೊಂಡರೆ ನಾವು ಅದರ ಗುಲಾಮರಾಗಬೇಕಾಗುತ್ತದೆ. ಜಗತ್ತಿನಲ್ಲಿ ಆರು ಸಾವಿರಕ್ಕೂ ಹೆಚ್ಚು ಭಾಷೆಗಳಿದ್ದು, ಅದರಲ್ಲಿ ಶೇ.43 ಭಾಷೆಗಳು ಅಳಿವಿನಂಚಿನಲ್ಲಿವೆ ಎಂದರು.