ಮಧುಗಿರಿ : ಅತ್ತೆಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ಸೊಸೆಗೆ ಒಂದು ವರ್ಷ ಸಾಧಾರಣ ಶಿಕ್ಷೆ ಮತ್ತು 5 ಸಾವಿರ ದಂಡ ವಿಧಿಸಿ ಇಲ್ಲಿನ 4 ನೇ ಅಧಿಕ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಯಾದವ ಕರಕೇರ ತೀರ್ಪು ನೀಡಿದ್ದಾರೆ.
ಕೋಳಾಲ ಗ್ರಾಮದ ಚಂದನ ಕೋಂ ಕಿರಣ ಶಿಕ್ಷೆಗೊಳಗಾದ ಆರೋಪಿತೆ. ಈಕೆ ಸಂಸಾರದಲ್ಲಿ ನಡೆದ ಗಲಾಟೆಯಲ್ಲಿ ಹಗೆ ಸಾಧಿಸಿ 2020 ರ ಏ.4 ರಂದು ಕೋಳಾಲ ಗ್ರಾಮದ ಬಸವೇಶ್ವರ ಕಾಲೇಜು ಹತ್ತಿರದ ಮನೆಯಲ್ಲಿ ಮಚ್ಚಿನಿಂದ ಅತ್ತೆ ಸಾವಿತ್ರಮ್ಮಳ ತಲೆಗೆ ಹೊಡೆದಿದ್ದಳು. ಇದರ ಬಗ್ಗೆ ಅಂದಿನ ಪಿಎಸ್ಐ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಮೇಲ್ಕಂಡಂತೆ ತೀರ್ಪು ನೀಡಿದ್ದು, ದಂಡದ ಹಣ 5 ಸಾವಿರ ರೂಗಳನ್ನು ಅತ್ತೆಗೆ ಪರಿಹಾರದ ರೂಪದಲ್ಲಿ ನೀಡಲು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕ ಬಿ.ಎಂ. ನರಸಿಂಹಮೂರ್ತಿ ವಾದ ಮಂಡಿಸಿದ್ದರು.