ತುಮಕೂರು: ವಾಹನ ಸವಾರರ ಜೀವಕ್ಕೆ ಕಂಟಕವಾಗಿದ್ದ ಕುಣಿಗಲ್ ರಸ್ತೆಯ ಗುಂಡಿಗಳಿಗೆ ತೇಪೆ ಹಾಕುವ ಪ್ರಕ್ರಿಯೆಗೆ ಶನಿವಾರ ಮಹಾನಗರ ಪಾಲಿಕೆ ಚಾಲನೆ ನೀಡಲಾಯಿತು. ನಗರದ ಕಾಲ್ಟೆಕ್ಸ್‌ನಿಂದ ಕುಣಿಗಲ್ ವೃತ್ತದವರೆಗೆ ರಸ್ತೆಯಲ್ಲಿ ವಾಹನ ಸವಾರರ ಪ್ರಾಣಕ್ಕೆ ಸಂಚಕಾರವೆನಿಸಿದ್ದ ಗುಂಡಿಗಳ ಬಗ್ಗೆ ಜ.11 ರಂದು ವಿಜಯವಾಣಿಯಲ್ಲಿ ‘3 ಕಿ.ಮೀ., ಅಂತರದಲ್ಲಿ 53 ಗುಂಡಿಗಳು !’ ಎಂಬ ಶೀರ್ಷಿಕೆ ಅಡಿ ವಿಶೇಷ ವರದಿ ಪ್ರಕಟವಾಗಿತ್ತು. ಈ ವರದಿ ಬಂದ ಬಳಿಕ ಕೊನೆಗೂ ಎಚ್ಚೆತ್ತುಕೊಂಡಿರುವ ಪಾಲಿಕೆ ಶನಿವಾರ ನಗರದ ಎಲ್ಲ ಪ್ರಮುಖ ರಸ್ತೆಗಳ ಗುಂಡಿಮುಚ್ಚುವ ಕಾಮಗಾರಿ ಕೈಗೆತ್ತಿಕೊಂಡಿದೆ.
ರಸ್ತೆಗುಂಡಿ ಮುಚ್ಚಲು 50 ಲಕ್ಷ ರೂ.,!: ನಗರದ ಪ್ರಮುಖ ರಸ್ತೆಗಳು ಮಳೆಯಿಂದಾಗಿ ಸಂಪೂರ್ಣ ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ ವಾರ ನಗರದ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಲು ಪಾಲಿಕೆ ವತಿಯಿಂದ ಟೆಂಡರ್ ಕರೆಯಲಾಗಿತ್ತು. ನಗರದಲ್ಲಿನ ರಸ್ತೆ ಗುಂಡಿಗಳನ್ನು ಮುಚ್ಚಲು 50 ಲಕ್ಷ ರೂ., ವೆಚ್ಚದ ವಿಶೇಷ ಪ್ಯಾಕೇಜ್‌ನಡಿ ಕಾಮಗಾರಿ ಆರಂಭಿಸಲಾಗಿದೆ.
ಕಾಲ್ಟೆಕ್ಸ್-ಕುಣಿಗಲ್ ರಸ್ತೆ ಗುಂಡಿಮುಚ್ಚುವ ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆ 31ನೇ ವಾರ್ಡ್, 30ನೇ ವಾರ್ಡ್‌ನಲ್ಲಿನ ರಸ್ತೆಗಳ ಗುಂಡಿಮುಚ್ಚುವ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಹಂತ, ಹಂತವಾಗಿ ನಗರದ ಪ್ರಮುಖ ರಸ್ತೆಗಳ ಗುಂಡಿಮುಚ್ಚುವ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಪಾಲಿಕೆ ಎಇಇ ರವಿ ತಿಳಿಸಿದರು.
ಕುಣಿಗಲ್ ಮುಖ್ಯರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಈ ಗುಂಡಿಮಯ ರಸ್ತೆಯಲ್ಲಿ ಕುಣಿಗಲ್, ಮಂಡ್ಯ, ಮೈಸೂರು, ಹಾಸನಕ್ಕೆ ಹೋಗುವವರಿಗೆ ಭಾರಿ ತೊಂದರೆ ಉಂಟಾಗುತ್ತಿತ್ತು. ಸಿದ್ದಾರ್ಥ, ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ಸೇರಿ ವಿವಿಧ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಸಹ ಇದೇ ರಸ್ತೆಯಲ್ಲಿ ಓಡಾಡುತ್ತಿದ್ದರೂ ಪಾಲಿಕೆ ಗುಂಡಿಮುಚ್ಚಲು ಮುಂದಾಗಿರಲಿಲ್ಲ.
ಕಾಲ್ಟೆಕ್ಸ್‌ನಿಂದ ಕುಣಿಗಲ್ ರಸ್ತೆ ಪ್ರತಿವರ್ಷ ಮಳೆಗಾಲದಲ್ಲಿ ಸಂಪೂರ್ಣ ಹಾಳಾಗುತ್ತಿತ್ತು. ಮಳೆಗಾಲ ಮುಗಿಯುತ್ತಿದ್ದಂತೆ ಈ ವರ್ಷ ರಸ್ತೆ ಗುಂಡಿಮುಚ್ಚುವ ಕಾಮಗಾರಿ ಆರಂಭಿಸಲು ವಿಧಾನಪರಿಷತ್ ಚುನಾವಣೆ ಅಡ್ಡಿಯಾಗಿತ್ತು. ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ನಗರದ ಎಲ್ಲ ಪ್ರಮುಖ ರಸ್ತೆಗಳ ಗುಂಡಿಮುಚ್ಚುವ ಕಾಮಗಾರಿ ಆರಂಭಿಸಲಾಗಿದೆ. ಜಿ.ಬಿ. ಜ್ಯೋತಿಗಣೇಶ್ ನಗರ ಶಾಸಕ