ಬಿಡದಿ: ಕಾರ್ವಿುಕ ಕಾನೂನು ಪಾಲಿಸದ ಟಿಕೆಎಂ ಆಡಳಿತ ಮಂಡಳಿ ಹೊಸ ಸಂಸ್ಕೃತಿ ಹುಟ್ಟು ಹಾಕುವ ತಂತ್ರಗಾರಿಕೆ ಮಾಡುತ್ತಿದೆ ಎಂದು ಕಾರ್ವಿುಕ ಸಂಘಟನೆ ಅಧ್ಯಕ್ಷ ಚಕ್ಕೆರೆ ಪ್ರಸನ್ನ ಕುಮಾರ್ ಗಂಭೀರ ಆರೋಪ ಮಾಡಿದರು.
ಮುಷ್ಕರದ ಸ್ಥಳದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಪಾನ್ ಮೂಲದ ಕಂಪನಿಯಲ್ಲಿ 3,500 ಕಾಯಂ ಕಾರ್ವಿುಕರು ಕೆಲಸ ನಿರ್ವಹಿಸುತ್ತಿದ್ದಾರೆ. ಕಾರ್ವಿುಕರ ಮೇಲಿನ ಶೋಷಣೆ ಮತ್ತು ಸಂಬಳ ಕಡಿತದಂತಹ ಸಮಸ್ಯೆಗಳ ಬಗ್ಗೆ ಪ್ರಶ್ನಿಸಿದರೆ ಅಮಾನತು ಆದೇಶ ಹೊರಡಿಸಿ, ಕಂಪನಿ ಲಾಕೌಟ್ ಘೋಷಿಸಿದೆ. ನವಚೇತನ ಯೋಜನೆಯಲ್ಲಿ ಹೆಚ್ಚು ವರ್ಷ ಕೆಲಸ ನಿರ್ವಹಿಸಿರುವ ಕಾರ್ವಿುಕರಿಗೆ ಸ್ವಯಂ ನಿವೃತ್ತಿ ಪಡೆಯುವಂತೆ ಒತ್ತಾಯ ಮಾಡಿ, ಗುತ್ತಿಗೆ ಆಧಾರದ ಮೇಲೆ ಯುವಕರನ್ನು ನೇಮಕ ಮಾಡಿಕೊಳ್ಳುವ ದೊಡ್ಡ ಷಡ್ಯಂತ್ರ ನಡೆಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಿಲಿಯನ್ ಸೆಕೆಂಡ್ಗಳಲ್ಲಿ ಕೆಲಸ ನಿಗದಿ ಮಾಡಲಾಗುತ್ತಿದ್ದು, ವಿಳಂಬವಾದರೆ ನೋಟಿಸ್ ನೀಡಲಾಗುವುದಲ್ಲದೆ ಸಂಬಳ ಕಡಿತ ಮಾಡಲಾಗುತ್ತಿದೆ. ಕರ್ತವ್ಯ ನಿರ್ವಹಿಸುವ ವೇಳೆ ಶೌಚಕ್ಕೂ ಹೋಗಲು ಬಿಡದೆ ನಿರಂತರವಾಗಿ ತೊಂದರೆ ನೀಡಲಾಗುತ್ತಿದೆ. ಅಲ್ಲದೆ 40 ಕಾರ್ವಿುಕರನ್ನು ಅಮಾನತು ಮಾಡಲಾಗಿದೆ. ಇದೀಗ ಮುಚ್ಚಳಿಕೆ ಪತ್ರದಲ್ಲಿ ಸಹಿ ಮಾಡಿ ಕೆಲಸಕ್ಕೆ ಹಾಜರಾಗುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಲ್ಲದೆ ಬೇರೆ ರಾಜ್ಯಕ್ಕೆ ವರ್ಗಾವಣೆ ಮಾಡುವ ಬೆದರಿಕೆ ಸಹ ಹಾಕುತ್ತಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಟಿಕೆಎಂ ಆಡಳಿತ ಮಂಡಳಿ ಕಾರ್ವಿುಕರೊಂದಿಗೆ ರ್ಚಚಿಸಿ, ಇತ್ಯರ್ಥ ಮಾಡಿಕೊಂಡರೆ ಕೆಲಸ ಮಾಡಲು ಸಿದ್ಧರಿದ್ದೇವೆ. ಆದರೆ, ಸೌಜನ್ಯಕ್ಕಾದರೂ ಮಾತನಾಡುವ ಕೆಲಸ ಮಾಡುತ್ತಿಲ್ಲ. ಉತ್ಪಾದನೆ ವಿಷಯದಲ್ಲಿ ಕಾರ್ವಿುಕರ ಜತೆ ಯಾವುದೇ ಒಪ್ಪಂದ ಮಾಡಿಕೊಳ್ಳದೆ ಕೇವಲ ಗುರಿಯನ್ನಷ್ಟೆ ನಿಗದಿ ಮಾಡಲಾಗುತ್ತಿದೆ. ಹಾಗಾಗಿ ಸರ್ಕಾರ ಮಧ್ಯಸ್ಥಿಕೆ ವಹಿಸಿ ಕಾರ್ವಿುಕರ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರು.
ಆರೋಪದಲ್ಲಿ ಸತ್ಯಾಂಶವಿಲ್ಲ
ಕಂಪನಿಗೆ ಶಿಸ್ತು ಮತ್ತು ಸಂಯಮ ಮುಖ್ಯವಾಗಿದೆ. ಅದಕ್ಕೆ ಬದ್ಧರಾಗಿ ಕಾರ್ವಿುಕರು ಕೆಲಸ ನಿರ್ವಹಿಸಲು ಆಗಮಿಸಿದರೆ ಅಭ್ಯಂತರವಿಲ್ಲ ಎಂದು ಟೊಯೋಟಾ ಕಿಲೋಸ್ಕರ್ ಮೋಟಾರ್ (ಟಿಕೆಎಂ) ಸಂಸ್ಥೆಯ ಮಾನವ ಸಂಪನ್ಮೂಲ ಮತ್ತು ಸೇವೆ ವಿಭಾಗದ ಅಸೋಸಿಯೇಟ್ ಉಪಾಧ್ಯಕ್ಷ ಜಿ.ಶಂಕರ್ ಹೇಳಿದರು. ಬಿಡದಿಯ ಈಗಲ್ಟನ್ ರೆಸಾರ್ಟ್ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಸ್ಥೆ ಕಾರ್ವಿುಕರಿಗೆ ಮೂಲಸೌಕರ್ಯ ಮತ್ತು ಉತ್ತಮ ವೇತನ ನೀಡುವ ಮೂಲಕ ಕಾರ್ವಿುಕ ಕಾನೂನಿನಡಿ ಉತ್ಪಾದನೆಗೆ ಮುಂದಾಗಿದೆ. ಆದರೆ ಉದ್ಯೋಗದಾತ ಸಂಸ್ಥೆ ವಿರುದ್ಧವೇ ಕಾರ್ವಿುಕರು ಪ್ರತಿಭಟನೆ ನಡೆಸಿ, ಅವಹೇಳನಕಾರಿ ಹೇಳಿಕೆ ನೀಡುತ್ತಾ, ಅಶಾಂತಿ ವಾತಾವರಣ ನಿರ್ವಿುಸುತ್ತಿರುವುದನ್ನು ಗಮನಿಸಿ ಎರಡನೇ ಬಾರಿಗೆ ಲಾಕೌಟ್ ಘೊಷಣೆ ಮಾಡಬೇಕಾಯಿತು ಎಂದರು.
ಸಂಸ್ಥೆ ವಿರುದ್ಧ ಕಾರ್ವಿುಕರು ಮಾಡುತ್ತಿರುವ ಆರೋಪಗಳಲ್ಲಿ ಸತ್ಯಾಂಶವಿಲ್ಲ. ಶೌಚಗೃಹ ಕ್ರಿಯೆಯಂತಹ ವಿಷಯವನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುವುದರಲ್ಲಿ ಅರ್ಥವಿಲ್ಲ. ಸಂಸ್ಥೆಯಲ್ಲಿ 600ಕ್ಕೂ ಹೆಚ್ಚು ಶೌಚಗೃಹಗಳಿವೆ. ಪ್ರತಿ 2 ಗಂಟೆಗೊಮ್ಮೆ 10 ನಿಮಿಷ ವಿಶ್ರಾಂತಿಗೆ ಸಮಯ ನಿಗದಿ ಮಾಡಲಾಗಿದೆ. ಇಷ್ಟೆಲ್ಲ ಸೌಕರ್ಯ ಕೊಟ್ಟರೂ ಕಂಪನಿಯ ಒಳಗೆ ಕಾರ್ವಿುಕರು ಅನವಶ್ಯಕವಾಗಿ ಓಡಾಟ ನಡೆಸುವುದನ್ನು ಗಮನಿಸಿ ನೋಟಿಸ್ ನೀಡಲಾಗಿದೆ ಎಂದರು.
ಕಾರ್ವಿುಕನೊಬ್ಬ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಕ್ಕೆ ಶಿಸ್ತುಕ್ರಮ ಕೈಗೊಳ್ಳಲಾಗಿದೆ. ಅದರಂತೆ 39 ಕಾರ್ವಿುಕರನ್ನು ವಿಚಾರಣೆಗೆ ಕಾದಿರಿಸಿ ಅಮಾನತು ಮಾಡಲಾಗಿದೆ. ವಿಚಾರಣೆ ಹಂತದಲ್ಲಿರುವಾಗ ಅಮಾನತು ಆದೇಶ ರದ್ದು ಮಾಡುವಂತೆ ಕಾರ್ವಿುಕ ಸಂಘಟನೆಯ ವಾದ ಒಪ್ಪಲಾಗದು. ಇದನ್ನು ಅರ್ಥ ಮಾಡಿಕೊಂಡು ಕಾರ್ವಿುಕರು ಕೆಲಸ ಮಾಡಲು ಮುಂದಾಗಬೇಕಿದೆ ಎಂದರು.