MYSORE T. K. Layour RAYARA Mutt  
ಜಿಲ್ಲೆ

ಟಿ.ಕೆ. ಬಡಾವಣೆಯ ರಾಯರ ಸನ್ನಿಧಿಯಲ್ಲಿ ಬಹುಮುಖಿ ಸೇವೆ

ಎ. ಆರ್. ರಘುರಾಮ

ಎ.ಆರ್. ರಘುರಾಮ ಮೈಸೂರು ಭಾರತೀಯ ಸನಾತನ ಧರ್ಮ, ಸಂಸ್ಕೃತಿಗಳ ಪಾಲನೆ, ಕಲೆ, ಸಾಹಿತ್ಯ ಪೋಷಣೆ, ಯೋಗ, ಧ್ಯಾನ, ಕಾನೂನು, ಮಹಿಳಾ ಸ್ವಾವಲಂಬನೆಗಳ ಸಮಗ್ರ ಮಾಹಿತಿ, ನೆಮ್ಮದಿಯ ಜೀವನ ನಿರ್ವಹಣೆಗೆ ಅವಶ್ಯವಾದ ಅರಿವು ಚಟುವಟಿಕೆ, ಅನ್ನದಾನ, ಅಕ್ಷರ, ಆರೋಗ್ಯ ಪಾಲನೆಗೆ ನೆರವು, ಜ್ಞಾನ ಸತ್ರದ ನಿರಂತರ ಹರಿವು - ಹೀಗೆ ನೂರೆಂಟು ಸತ್ಕಾರ್ಯಗಳ ಕೇಂದ್ರವಾಗಿದೆ ಟಿ.ಕೆ. ಬಡಾವಣೆಯ ರಾಘವೇಂದ್ರ ಸ್ವಾಮಿಗಳ ವೃಂದಾವನ ಸನ್ನಿಧಿ. ಮಠ ಎಂದರೆ ಧರ್ಮ, ಆಚರಣೆಗಳ ಸಂರಕ್ಷಣೆ ಕೇಂದ್ರ ಎಂಬ ಚೌಕಟ್ಟು ಮೀರಿ ಸಮಾಜಕ್ಕೆ ಅಗತ್ಯ ಸೇವೆಗಳನ್ನು ಅಹರ್ನಿಷಿ ನೀಡಬೇಕು ಎಂಬ ಸಂಕಲ್ಪದೊಂದಿಗೆ ಪ್ರತಿಷ್ಠಾಪನೆಗೊಂಡ ವೃಂದಾವನ ಕ್ಷೇತ್ರ ಹಲವರ ಪಾಲಿಗೆ ಕಲ್ಪವೃಕ್ಷವೇ ಆಗಿದೆ. ಜ್ಞಾನ, ಧರ್ಮದಿಂದ ಮುನ್ನಡೆಯುವುದೇ ನಿಜವಾದ ಪ್ರಗತಿ. ಗುಣಾತ್ಮಕ ಬೆಳವಣಿಗೆಯೇ ನಾಡಿನ ಅಭಿವೃದ್ಧಿ. ದೇವರೆಡೆಗೆ ಸಾಗುವುದೇ ಪುರೋಗಾಮಿ. ಸುಖ -ಸಮಾಧಾನಗಳೇ ಲೋಕದ ಜನರ ಸಮೃದ್ಧಿ. ಇದಕ್ಕಾಗಿ ಸತ್ಯ-ಧರ್ಮಗಳನ್ನು ವ್ರತದಂತೆ ಸ್ವೀಕರಿಸಿ ಸಾಗುವುದೇ ಬದುಕಿನ ಉದ್ದೇಶವಾಗಲಿ- ಇಂತಹಾ ಸರಳಾತಿಸರಳ ಸೂತ್ರಗಳನ್ನು ಬೋಧಿಸಿ ಸಾಮಾನ್ಯರ ಜೀವನವನ್ನೂ ಪಾವನ ಗೊಳಿಸಿದ ವಿಶ್ವ ಸಂತರೇ ಶ್ರೀ ರಾಘವೇಂದ್ರರು. ಎಲ್ಲಿ ನಿನ್ನ ನೆನೆವರೋ ಅಲ್ಲೇ ದೇವಾಲಯ- ಎಂಬ ದಿವ್ಯವಾಣಿಯನ್ನು ದರ್ಶನ ಮಾಡಿಸಲು 1987ರಲ್ಲಿ ಮೈಸೂರಿನ ಟಿ.ಕೆ. ಬಡಾವಣೆಯಲ್ಲಿ ಸಾತ್ವಿಕರು ರಾಯರ ವೃಂದಾವನ ಪ್ರತಿಷ್ಠಾಪಿಸಿದ್ದು ವಿಶೇಷವೇ ಆಗಿದೆ.

ಪವಿತ್ರ ಕಾವೇರಿ ತೀರದ ಕನ್ನಂಬಾಡಿಯಲ್ಲಿ ರಾಯರ ಮಠ ಸ್ಥಾಪಿಸಬೇಕು ಎಂದು ಇಬ್ಬರು ಸಾತ್ವಿಕರು ಮಂತ್ರಾಲಯದಿಂದ ಮೃತ್ತಿಕೆ ತಂದಿದ್ದರು. ಅದರಲ್ಲಿ ಒಂದು ಮೃತ್ತಿಕೆ ಹಾಗೇ ಇತ್ತು. ಮೈಸೂರಿನ ವಕೀಲ ಕಪಿನೀಪತಿ ರಾಯರು ಮಠ, ಅನಾಥಾಲಯ ಸ್ಥಾಪಿಸಬೇಕು ಎಂಬ ನಿರ್ಧಾರ ಮಾಡಿದ್ದರು. 1979ರಲ್ಲಿ ಸಿಐಟಿಬಿ ಇಂದ ಒಂದು ನಿವೇಶನವೂ ಒದಗಿತು. ಕಪಿನೀಪತಿರಾಯರ ನಿಧನಾನಂತರ ಸಮಿತಿಗೆ ಗೋವಿಂದರಾಯರು ಅಧ್ಯಕ್ಷರಾದರು. 1887ರಲ್ಲಿ ಕನ್ನಂಬಾಡಿಯಲ್ಲಿದ್ದ ಮೃತ್ತಿಕೆ ತಂದು ಮಂದಿರ ಸ್ಥಾಪಿಸಿದರು. ಶಿವಮೊಗ್ಗದ ಭಕ್ತರು ಕಡಗೋಲು ಕೃಷ್ಣನ ವಿಗ್ರಹ ಮಾಡಿಸಿಕೊಟ್ಟರು. ಸಂಜೀವಿನಿ ಆಂಜನೇಯನೂ ನೆಲೆಗೊಂಡ. ಆಚಾರ್ಯ ಮಧ್ವರ ‘ಪೂರ್ಣಪ್ರಜ್ಞ’ ತತ್ವ ಸಾರುವ ಪರಂಪರೆಯ ಅಗ್ರಮಾನ್ಯ ಯತಿ ರಾಯರಿಗೆ ಟಿ.ಕೆ. ಬಡಾವಣೆ ಭೂಮಿಕೆ ಆಯಿತು. ಜಾತಿ-ಮತ- ಧರ್ಮ ಮೀರಿ ರಾಯರನ್ನು ನಂಬಿ ಬಂದ ಭಕ್ತರಿಗೆಲ್ಲಾ ಇಲ್ಲಿ ಮಂತ್ರಾಕ್ಷತೆ, ತೀರ್ಥ, ಪ್ರಸಾದದೊಂದಿಗೆ ದಿವ್ಯ ಅನುಗ್ರಹವೂ ಆಯಿತು. ಕಷ್ಟ ಹೇಳಿಕೊಂಡು ಬಂದು ಪ್ರಾರ್ಥಿಸಿದ ಎಲ್ಲರ ಬಾಳು ಬೆಳಕಾಗಿದೆ. 38 ವರ್ಷಗಳಿಂದ ಇದು ಜನಮಾನಸದಲ್ಲಿ ಭಕ್ತಿ, ಭಾವ, ಭರವಸೆ ಪೀಠವಾಗಿದೆ.

ಎಲ್ಲರ ಬಾಳು ಬೆಳಕಾಗಿದೆ: 

ಮೈಸೂರಿನ ತೊಣಚಿಕೊಪ್ಪಲು ಬಡಾವಣೆಯ ರಾಯರ ಮಠ

ರಾಯರ ಸನ್ನಿಧಾನ, ಪ್ರದಕ್ಷಿಣಾ ಪಥದೊಂದಿಗೆ ಇಲ್ಲಿ ಪ್ರತ್ಯೇಕ ಸಭಾಭವನ, ಡೈನಿಂಗ್ ಹಾಲ್ ಇದೆ. ಸಭೆ- ಸಮಾರಂಭ, ಪಿತೃಕಾರ್ಯ ಸೇರಿದಂತೆ ಹಲವು ಧಾರ್ಮಿಕ ವಿಧಿಗಳನ್ನು ಮಾಡಲು ಸೂಕ್ತ ಅವಕಾಶವಿದೆ. ಭವ್ಯ ಸನ್ನಿಧಾನಕ್ಕೆ ಹಲವು ಪೀಠಾಧಿಪತಿಗಳು ಪ್ರೀತಿ ಮತ್ತು ಅಭಿಮಾನ ಗಳಿಂದಲೇ ಬಂದು ಪರಂಪರೆಯನ್ನು ನಿರ್ಮಿಸಿದ್ದಾರೆ. ನಾಡಿನ ಖ್ಯಾತ ಪ್ರವಚನಕಾರರು, ಪಂಡಿತರ ಉಪನ್ಯಾಸ ಇಲ್ಲಿ ನಡೆಯುತ್ತಿರುತ್ತದೆ. ತಾತ್ವಿಕ ಮತ್ತು ಸಾತ್ವಿಕ ಸಂಗತಿಗಳ ಮಂಥನ ನಿತ್ಯವೂ ನೆರವೇರುತ್ತದೆ. ಸ್ಥಳೀಯ ಮತ್ತು ವಿಶ್ವಖ್ಯಾತ ಗಾಯಕರು, ವಾದಕರು ಇಲ್ಲಿ ಸಂಗೀತವನ್ನು ಸಮರ್ಪಣೆ ಮಾಡಿದ್ದಾರೆ. ಭಜನ ಸಂಪ್ರದಾಯಕ್ಕೂ ಮಾನ್ಯತೆ ನೀಡಲಾಗಿದೆ ಎನ್ನುತ್ತಾರೆ ಟ್ರಸ್ಟಿ ಮತ್ತು ಹಿರಿಯ ವಕೀಲ ಶಿವಶಂಕರ್. ಪ್ರತಿ ವರ್ಷವೂ ಶ್ರಾವಣದಲ್ಲಿ (ಈ ಬಾರಿ ಆ. 10ರಿಂದ 12ರ ವರೆಗೆ) ರಾಯರ ಆರಾಧನೆಯನ್ನು ಪರಂಪರೆಯ ಶೈಲಿಯಲ್ಲೇ ಆಚರಿಸಿಕೊಂಡು ಬರುತ್ತಿರುವುದು ವಿಶೇಷ.

* ಕಲಾವಿದರಿಂದ ಸಂಗೀತ ಸಮರ್ಪಣೆ

ಪ್ರತಿ ಗುರುವಾರ ಅನ್ನ ಸಂತರ್ಪಣೆ :

ರಾಯರ ಸಂಪ್ರೀತಿಗಾಗಿ ನೂರಾರು ಜನರಿಗೆ ಮಧ್ಯಾಹ್ನದ ಅವಧಿಯ ಮಹಾಪ್ರಸಾದ ವಿತರಿಸುವ ಸೇವೆ ಪ್ರತಿ ಗುರುವಾರ ನಡೆಯುತ್ತಿದೆ. ಸಮಿತಿ ಪದಾಧಿಕಾರಿಗಳೂ ಸೇರಿದಂತೆ ದಾನಿಗಳು, ಸ್ವಯಂಸೇವಕರು ಅನ್ನಸಂತರ್ಪಣೆ ಸೇವೆಯಲ್ಲಿ ತನು-ಮನ ಧನ ಸಮರ್ಪಣೆ ಮಾಡುತ್ತಿದ್ದಾರೆ.* ಕಾನೂನು ಸೇವಾ ಕೇಂದ್ರ: ಮಠವು ಮಹಿಳೆ ಮತ್ತು ಕಾನೂನು ಎಂಬ ವಿಷಯಕ್ಕೆ ಆದ್ಯತೆ ನೀಡಿದೆ. ಪ್ರತಿನಿತ್ಯವೂ ಸಂಜೆ ಜನರಿಗೆ ಉಚಿತ ಕಾನೂನು ಸೇವೆ ಲಭ್ಯವಿದೆ. ಆಸ್ತಿ, ಜಮೀನು ತಕರಾರು ಪರಿಹರಿಸಲು,ಸಾಮಾಜಿಕ, ಕೌಟುಂಬಿಕ ಸಾಮರಸ್ಯ ಮೂಡಿಸಲು ವಕೀಲರ ತಂಡ ಉಚಿತ ಸೇವೆಗೆ ನಿಂತಿದೆ. 2 ತಿಂಗಳಿಗೊಮ್ಮೆ ಸಾಮಾಜಿಕ ಅರಿವು, ಹಿರಿಯ ನಾಗರಿಕರಿಗೆ ಕಾರ್ಯಕ್ರಮ, ಆರೋಗ್ಯ ತಪಾಸಣೆ ಶಿಬಿರ ನಡೆಯುತ್ತಿದೆ. ಮಠದ ಆವರಣದಲ್ಲಿ ಗಂಗಾಜಲ ಕೇಂದ್ರವಿದೆ. 5 ವರ್ಷಗಳಿಂದ ಪರಿಶುದ್ಧ ನೀರು ವಿತರಣಾ ಕಾರ್ಯವನ್ನು ನಿರ್ವಹಿಸಿಕೊಂಡು ಬರಲಾಗುತ್ತಿದೆ. ವಿಪ್ರ ಮ್ಯಾಟ್ರಿಮೋನಿ, ಉಚಿತ ಸಾಮೂಹಿಕ ಉಪನಯನ, ಬಡ ವಿದ್ಯಾರ್ಥಿಗಳಿಗೆ ನೆರವು ಸೇವೆಯೂ ಸಾಗುತ್ತಿದೆ.   ಹಬ್ಬ- ಹರಿದಿನ ಆಚರಣೆ ಪ್ರತಿ ಗುರುವಾರ ಸಂಜೆ ಭಜನೆ, ಪ್ರಾಕಾರೋತ್ಸವ, ಅಷ್ಟಾವಧಾನ ಸೇವೆ ವಿಜೃಂಭಿಸುತ್ತದೆ. ನೂರಾರು ಭಕ್ತರು ಸಂಜೆಯ ಉತ್ಸವಕ್ಕೆ ಸಾಕ್ಷಿ ಆಗುತ್ತಿದ್ದಾರೆ. ರಾಯರ ವರ್ಧಂತಿ ಉತ್ಸವ, ಕಾರ್ತಿಕದಲ್ಲಿ ಪ್ರತಿ ಸೋಮವಾರ ದೀಪೋತ್ಸವ, ಪಕ್ಷ ಮಾಸದಲ್ಲಿ ಪಿತೃಕಾರ್ಯ, ಜನವರಿಯಲ್ಲಿ ಶ್ರೀನಿವಾಸ ಕಲ್ಯಾಣ, ರಾಷ್ಟ್ರದ ಅಭ್ಯಯದಯಕ್ಕಾಗಿ ವಿವಿಧ ಹೋಮ ಸಂಪನ್ನಗೊಳ್ಳುತ್ತವೆ. ಯುಗಾದಿ, ದೀಪಾವಳಿ, ರಾಮನವಮಿ, ಜನ್ಮಾಷ್ಟಮಿ ಸೇರಿದಂತೆ ಹಬ್ಬ ಹರಿದಿನ, ಟೀಕಾರಾಯರ ಆರಾಧನೆ, ಶ್ರೀ ಮಧ್ವ ನವಮಿ ನೆರವೇರುತ್ತದೆ.

ಸಮಾಜಮುಖಿ ಸರಣಿ ಸೇವೆಗಳ ಮೂಲಕ ಎಲ್ಲರನ್ನೂ ಒಗ್ಗೂಡಿಸಿಕೊಂಡು, ಒಪ್ಪಿಕೊಂಡು, ಅಪ್ಪಿಕೊಂಡ ಸನ್ನಿಧಾನವೇ ಟಿ.ಕೆ. ಬಡಾವಣೆ ರಾಯರ ಮಠ. ಇಲ್ಲಿನ ಪ್ರತಿ ಕಾರ್ಯವೂ ವಿವಿಧ ಸಮುದಾಯಗಳ ಸೇವೆಯಾಗಿದೆ. ಟ್ರಸ್ಟಿಗಳು ಎಲ್ಲರನ್ನೂ ಗೌರವದಿಂದ ನಡೆಸಿಕೊಂಡಿದ್ದಾರೆ. ಹಾಗಾಗಿ ಇಲ್ಲಿ ನಾನೂ ಸ್ವಯಂ ಸೇವಕನಾಗಿದ್ದೇನೆ. ಯಾರಿಂದ ಯಾವ ಕೆಲಸ ಮಾಡಿಸಬೇಕು ಎಂದು ರಾಯರೇ ನಿರ್ಧರಿಸಿದ್ದಾರೆ. ಅವೆಲ್ಲವೂ ಈ ಕ್ಷೇತ್ರದಲ್ಲಿ ಸಮರ್ಥವಾಗಿ ಕಾರ್ಯರೂಪಕ್ಕೆ ಬರುತ್ತಿದೆ. ಶ್ರೀಹರಿ ದ್ವಾರಕಾನಾಥ್ ಯೋಗ ಸಾಧಕ ಮತ್ತು ಭಕ್ತ
3 ದಶಕದಿಂದ ಟಿ.ಕೆ. ಬಡಾವಣೆಯ ಮಠ ಸಾವಿರಾರು ಭಕ್ತರ ನೆಮ್ಮದಿ ತಾಣವಾಗಿದೆ. ಶಾಸ್ತ್ರೀಯ ಸಂಗೀತಕ್ಕೂ ಇಲ್ಲಿ ಆದ್ಯತೆ ದೊರಕಿದೆ. ರಾಯರೇ ವೀಣಾ ವಿದ್ವಾಂಸರು. ಅವರ ಶಕ್ತಿಯ ದರ್ಶನ ನಮಗೂ ಆಗಲು 5 ವರ್ಷಗಳಿಂದ ನನಗೆ ಕಛೇರಿ ಸೇವಾಭಾಗ್ಯ ದೊರಕಿದೆ. ತ್ಯಾಗರಾಜ, ಪುರಂದರ ಆರಾಧನೆ, ನೃತ್ಯ ಉತ್ಸವ ನಡೆಸಲು ಟ್ರಸ್ಟಿಗಳು ನನಗೇ ಜವಾಬ್ದಾರಿ ನೀಡಿದ್ದು ಧನ್ಯತೆ ಸಂಕೇತ. ಸ್ಥಳಿಯರೊಂದಿಗೆ ವಿದೇಶದ ಕಲಾವಿದರೂ ಇಲ್ಲಿ ಶಾಸ್ತ್ರೀಯ ಸಂಗೀತ ಹಾಡಿರುವುದು ವಿಶೇಷ. ವಿದ್ವಾನ್ ಮಂಜುನಾಥ್ , ಖ್ಯಾತ ಪಿಟೀಲು ವಾದಕ