ನಾಗಮಂಗಲ: ಕಳೆದ 15 ವರ್ಷಗಳ ಹಿಂದೆ ಕೊಳಗೇರಿ ಅಭಿವೃದ್ದಿ ಮಂಡಳಿಯ ವತಿಯಿಂದ ನಿರ್ಮಿಸಿರುವ ಮನೆಗಳಿಗೆ ಶೀಘ್ರವೇ ಹಕ್ಕುಪತ್ರ ವಿತರಿಸುವ ಜತೆಗೆ ಅನಧಿಕೃತವಾಗಿ ವಾಸಿಸುತ್ತಿರುವವರನ್ನು ಒಕ್ಕಲೆಬ್ಬಿಸದೆ ಕಾನೂನು ವ್ಯಾಪ್ತಿಯಲ್ಲಿ ಮಾನವೀಯ ನೆಲೆಗಟ್ಟಿನಲ್ಲಿ ನ್ಯಾಯ ದೊರಕಿಸಿಕೊಡುವುದಾಗಿ ಜಿಲ್ಲಾಧಿಕಾರಿ ಡಾ.ಕುಮಾರ್ ಪಟ್ಟಣದ ಸುಭಾಷ್‌ನಗರದ ನಿವಾಸಿಗಳಿಗೆ ಅಭಯ ನೀಡಿದರು.
ಪಟ್ಟಣದ ಸುಭಾಷ್‌ನಗರ ಬಡಾವಣೆಗೆ ಗುರುವಾರ ಭೇಟಿ ನೀಡಿ ಅಲ್ಲಿನ ನಿವಾಸಿಗಳ ಸಮಸ್ಯೆ ಆಲಿಸಿ ನಂತರ ಮಾತನಾಡಿದರು. 1995ರಲ್ಲಿ ಈ ಜಾಗವನ್ನು ಕೊಳಗೇರಿ ಪ್ರದೇಶವೆಂದು ಅಧಿಕೃತ ಸೂಚನೆ ಹೊರಡಿಸಲಾಗಿದೆ. ಅದರಂತೆ 2010ರಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿಯವರು ಮನೆಗಳ ನಿರ್ಮಾಣ ಮಾಡಿದ್ದಾರೆ. 2010ರಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ 226 ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಅಂದಿನಿಂದ ಇದುವರೆಗೂ ಮನೆಗಳಲ್ಲಿ ವಾಸಿಸುತ್ತಿರುವವರಿಗೆ ಅಧಿಕೃತ ಮಾಲೀಕತ್ವ ಸಾಧ್ಯವಾಗಿಲ್ಲ. ಆದ್ದರಿಂದ ಕಳೆದ 15 ವರ್ಷಗಳಿಂದ ಈ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ. ಹಲವು ವರ್ಷಗಳ ಸಮಸ್ಯೆಯನ್ನು ಕಾನೂನು ವ್ಯಾಪ್ತಿಯಲ್ಲಿ ಬಗೆಹರಿಸುವ ಕೆಲಸವನ್ನು ಮಾಡುತ್ತೇನೆ. ಈ ವಿಚಾರವಾಗಿ ಸಮಸ್ಯೆಗೆ ತಾರ್ಕಿಕ ಅಂತ್ಯ ನೀಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದ್ದಾರೆ. ಕೊಳಗೇರಿ ಅಭಿವೃದ್ಧಿ ಮಂಡಳಿಯವರು ಈ ಬಡಾವಣೆಯನ್ನು ಸಂಪೂರ್ಣವಾಗಿ ಅಭಿವೃದ್ದಿಪಡಿಸಿದ ನಂತರ ಪುರಸಭೆಗೆ ಹಸ್ತಾಂತರಿಸಲು ಸಾಧ್ಯ. ಈ ಬಡಾವಣೆಯಲ್ಲಿರುವ ಮನೆಗಳಲ್ಲಿ ವಾಸಿಸುತ್ತಿರುವವರ ಮಾಹಿತಿ ಪಡೆಯಲಾಗಿದೆ. ಇಲಾಖೆಯಿಂದ ಅಂದು ಮನೆಗಳಲ್ಲಿ ವಾಸಿಸಲು ಪರಿಚಯ ಪತ್ರ ಪಡೆದಿದ್ದಾರೆಯೇ ಅಥವಾ ಪರಿಚಯ ಪತ್ರಗಳಿಲ್ಲವೇ ಎಂಬ ವರದಿ ಸಿದ್ದಪಡಿಸಲಾಗಿದೆ. ಪರಿಚಯ ಪತ್ರವಿದ್ದವರಿಗೆ ಕಾನೂನು ರೀತಿಯ ಮನೆಗಳನ್ನು ನೀಡಲಾಗುವುದು. ಪರಿಚಯ ಪತ್ರವಿಲ್ಲದವರಿಗೆ ಮನೆ ಹೇಗೆ ಸಿಕ್ಕಿದೆ, ಅವರು ನಿಜವಾದ ನಿವಾಸಿಯೇ ಎಂಬಿತ್ಯಾದಿ ವಿಚಾರಣೆ ನಡೆಸಿ ಸಮಿತಿಯ ಮುಂದೆ ಚರ್ಚಿಸಿ ಕಾನೂನು ರೀತಿಯ ಮಾನವೀಯ ನೆಲೆಗಟ್ಟಿನಲ್ಲಿ ಅನುಕೂಲ ಮಾಡಿಕೊಡಲಾಗುವುದು. ಯಾರೂ ಆತಂಕಪಡುವ ಅಗತ್ಯವಿಲ್ಲ. ಯಾರನ್ನೂ ಒಕ್ಕಲೆಬ್ಬಿಸುವ ಕೆಲಸ ಮಾಡಲ್ಲವೆಂದು ಹೇಳಿದರು.
ಉಪವಿಭಾಗಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಆದರ್ಶ್, ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್, ತಾಲೂಕು ಆರೋಗ್ಯಾಧಿಕಾರಿ ಡಾ.ನಾರಾಯಣ್, ಕೊಳಗೇರಿ ಅಭಿವೃದ್ದಿ ಮಂಡಳಿ ಅಧಿಕಾರಿಗಳು, ಮುಖಂಡರಾದ ಅಯ್ಯಪ್ಪ, ಸಂಪತ್ತು, ನರಸಿಂಹ ಸೇರಿದಂತೆ ಮತ್ತಿತರಿದ್ದರು.
ಇಲಾಖೆಯ ನಿರ್ಲಕ್ಷೃದಿಂದ ಸಮಸ್ಯೆ: ಇದುವರೆಗೂ ಇದ್ದ ನಮ್ಮ ಇಲಾಖೆಯ ಅಧಿಕಾರಿಗಳು ಹಾಗೂ ಕೊಳಗೇರಿ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಮನಸ್ಸು ಮಾಡಿದ್ದರೆ ಈ ಸಮಸ್ಯೆ ಇಷ್ಟು ದೊಡ್ಡದಾಗುತ್ತಿರಲಿಲ್ಲ. ಅವರ ನಿರ್ಲಕ್ಷೃದಿಂದ ಇಷ್ಟು ದಿನ ಈ ಸಮಸ್ಯೆ ಉಳಿದಿದೆ ಹಾಗೂ ಅನಧಿಕೃತ ವ್ಯಕ್ತಿಗಳು ಬಂದು ಮನೆಗಳಲ್ಲಿ ನೆಲೆಸಲು ಅವಕಾಶ ಸಿಕ್ಕಿದೆ. ಆದ್ದರಿಂದ ಎಲ್ಲರೂ ಸಮಾಧಾನದಿಂದ ತಮ್ಮಲ್ಲಿರುವ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಿದರೆ ಮಾಲೀಕತ್ವ ನೀಡಲು ಸಹಕಾರಿಯಾಗುತ್ತದೆ. ಪ್ರಸ್ತುತ ನಿವಾಸಿಗಳ ಒಂದು ಪಟ್ಟಿಯನ್ನು ಸಿದ್ಧಪಡಿಸಿದ್ದು ಅದಕ್ಕೆ ಯಾವುದಾದರೂ ಸಾರ್ವಜನಿಕ ಆಕ್ಷೇಪಣೆಗಳಿದ್ದರೆ ಆಗಸ್ಟ್ 15ರೊಳಗೆ ತಕರಾರು ಸಲ್ಲಿಸಬಹುದಾಗಿದೆ ಎಂದರು.
ಒಂದೇ ಕುಟುಂಬಕ್ಕೆ 4 ಮನೆಗಳು: ಈ ಬಡಾವಣೆಯಲ್ಲಿ ಒಂದೇ ಕುಟುಂಬದವರು 3-4 ಮನೆಗಳನ್ನು ಪಡೆದು ವಾಸಿಸುತ್ತಿದ್ದಾರೆ. ತಂದೆ ಒಂದು ಮನೆ, ಮಗ ಒಂದು ಮನೆ, ಮೊಮ್ಮಕ್ಕಳು ಒಂದು ಈ ರೀತಿಯಲ್ಲಿ ಒಂದೇ ಕುಟುಂಬದವರು ಹೆಚ್ಚು ಮನೆ ಪಡೆದಿದ್ದಾರೆ. ಬಡವರಿಗೆ ಅವಕಾಶ ಕಲ್ಪಿಸಿಕೊಡಿ ಎಂದು ಜಿಲ್ಲಾಧಿಕಾರಿ ಭೇಟಿಯ ಸಂದರ್ಭ ಅಲ್ಲಿನ ನಿವಾಸಿಗಳು ಕೈಮುಗಿದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಡಿಸಿ ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ಆ ರೀತಿ ಯಾರಿಗೂ ಅವಕಾಶ ಮಾಡಿಕೊಡಲ್ಲ ಎಂದು ತಿಳಿಸಿದರು.
ಗಾಂಜಾ ಮಾರಾಟ ನಿಲ್ಲಿಸಿಕೊಡಿ ಸ್ವಾಮಿ: ಪಟ್ಟಣದ ಸುಭಾಷ್ ನಗರಕ್ಕೆ ಗುರುವಾರ ಡಿಸಿ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ನಿವಾಸಿಗಳು ನಮ್ಮ ಏರಿಯಾದಲ್ಲಿ ಗಾಂಜಾ, ಡ್ರಗ್ಸ್ ಮಾರಾಟ ತುಂಬಾ ನಡೆಯುತ್ತಿದೆ. ಅದೊಂದು ನಿಲ್ಲಿಸಿಕೊಡಿ ಸ್ವಾಮಿ ಎಂದು ಕೈಮುಗಿದು ಮನವಿ ಮಾಡಿಕೊಂಡರು.
ಸ್ಥಳೀಯರು ಹತ್ತಾರು ಸಂಖ್ಯೆಯಲ್ಲಿ ಈ ವಿಚಾರ ಹೇಳುತ್ತಿದ್ದಂತೆ ಜಿಲ್ಲಾಧಿಕಾರಿ ಡಾ.ಕುಮಾರ್ ಆಶ್ಚರ್ಯಗೊಳ್ಳುವ ಜತೆಗೆ ಆತಂಕಗೊಂಡು ಅಂತಹವರ ಮಾಹಿತಿ ಕೊಡಿ ಪೊಲೀಸರಿಗೆ ಸೂಚಿಸುತ್ತೇನೆ ಎಂದು ಹೇಳಿದರು.
ಇದಕ್ಕೂ ಒಪ್ಪದ ಸ್ಥಳೀಯರು ಪೊಲೀಸರು ಬಂಧಿಸಿ, ಗಡಿಪಾರು ಮಾಡಿದ್ದರೂ ಯಾವುದೇ ಭಯವಿಲ್ಲದೆ ಮತ್ತೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಈ ಬಡಾವಣೆಯಲ್ಲಿನ ಎಲ್ಲರನ್ನೂ ಒಂದು ಕೆಟ್ಟ ಭಾವನೆಯಿಂದ ನೋಡುತ್ತಿದ್ದಾರೆ. ಚಿಕ್ಕ ಮಕ್ಕಳ ಮೇಲೆ ಇದು ಬೇರೆ ರೀತಿಯಲ್ಲಿ ಪರಿಣಾಮ ಬೀರುತ್ತಿದೆ. ಒಂದು ದಿನಕ್ಕೆ 500 ರಿಂದ 800 ಪ್ಯಾಕೇಟ್ ಗಾಂಜಾ, ಡ್ರಗ್ಸ್ ಮಾರಾಟ ಮಾಡುತ್ತಿದ್ದಾರೆ. ಇದನ್ನು ನಿಲ್ಲಿಸಿಕೊಡಿ ಅವರ ಮೇಲೆ ಕ್ರಮ ಜರುಗಿಸಿ ಎಂದು ಮಹಿಳೆಯರು, ಮಕ್ಕಳು ಸೇರಿದಂತೆ ಸ್ಥಳೀಯರು ಡಿಸಿ ಅವರನ್ನು ಒತ್ತಾಯಿಸಿದರು.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಸ್ಥಳೀಯ ಪೊಲೀಸರಿಗೆ ತಿಳಿಸುವ ಜತೆಗೆ, ಎಸ್ಪಿ ಜತೆ ಈ ವಿಚಾರ ಮಾತನಾಡಿ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸುತ್ತೇನೆ. ಅಂತಹವರನ್ನು ಗಡಿಪಾರು ಮಾಡಲು ಕೂಡ ಸೂಚಿಸುತ್ತೇನೆ ಎಂದು ಪ್ರತಿಕ್ರಿಯಿಸಿದರು.