ಹೊಳೆನರಸೀಪುರ ಪುರಸಭೆಯಲ್ಲಿ ಗುರುವಾರ ಪತ್ರಿಕಾ ಗೋಷ್ಟಿ ನಡೆಸಿದ ಶಾಸಕ ಎಚ್.ಡಿ. ರೇವಣ್ಣ ದಶಕಗಳಿಂದ ನೆನಗುದಿಗೆ ಬಿದ್ದಿದ್ದ 130 ಮನೆಗಳಿಗೆ ಹಕ್ಕುಪತ್ರ ವಿತರಣೆಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿದರು. 
ಜಿಲ್ಲೆ

ಇನ್ನೆರಡು ತಿಂಗಳಲ್ಲಿ ಹಕ್ಕುಪತ್ರ ವಿತರಣೆ

ಶಿವಶಂಕರ್ ಎಂ. ಹೆಬ್ಬಳ್ಳ

ಹೊಳೆನರಸೀಪುರ : ಪಟ್ಟಣದ ಕಿಕ್ಕೇರಮ್ಮನಕೊತ್ತಲು ಬಡಾವಣೆ ಸೇರಿದಂತೆ ಕೆಲವು ಬಡಾವಣೆಗಳಲ್ಲಿ ಮನೆ ಕಟ್ಟಿಕೊಂಡಿರುವ ಮನೆಗಳ ಮಾಲೀಕರಿಗೆ ಹಕ್ಕುಪತ್ರ ವಿತರಣೆಗೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಇನ್ನೆರಡು ತಿಂಗಳಲ್ಲಿ ಎಲ್ಲ ಪ್ರಕ್ರಿಯೆಗಳನ್ನು ಪೂರೈಸಿ ಹಕ್ಕ್ಕುಪತ್ರ ನೀಡಲಾಗುತ್ತದೆ ಎಂದು ಶಾಸಕ ಎಚ್.ಡಿ.ರೇವಣ್ಣ ತಿಳಿಸಿದರು.

ಪುರಸಭೆ ಅಧ್ಯಕ್ಷರಾಗಿದ್ದ ದಿವಂಗತ ಎಚ್.ಸಿ.ಸಿಂಗ್ರೀಗೌಡರು ಬಡವರಿಗೆ ನೀಡಿದ್ದ ನಿವೇಶನಗಳಲ್ಲಿ ಮನೆ ಕಟ್ಟಿಕೊಂಡಿದ್ದವರಿಗೆ ಈ ಹಿಂದೆ ಇದ್ದ ಕೆಲವು ನಾಯಕರು ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಿದ್ದರಿಂದ ಹಕ್ಕುಪತ್ರ ವಿತರಣೆ ಸಾಧ್ಯ ಆಗಿರಲಿಲ್ಲ. ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಈ ಬಡಾವಣೆಗಳನ್ನು ಕೊಳಚೆ ನಿರ್ಮೂಲನೆ ಮಂಡಳಿಗೆ ಸೇರಿಸಿದ್ದು 92 ಸಿ ಪ್ರಕಾರ ಕೊಳಚೆ ನಿರ್ಮೂಲನಾ ಮಂಡಳಿ ಹಾಗೂ ಪುರಸಭೆಯವರು ಈ ಜಾಗವನ್ನು ಮಂಡಳಿಗೆ ನೋಂದಾಯಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಾನು ವಸತಿ ಖಾತೆ ಸಚಿವನಾಗಿದ್ದಾಗ ಆಶ್ರಯ ಬಡಾವಣೆ ಯೋಜನೆಯಲ್ಲಿ 1500 ಮನೆಗಳನ್ನು ಹಾಗೂ ಕೊಳಚೆ ನಿರ್ಮೂಲನಾ ಮಂಡಳಿಯಿಂದ 500 ಮನೆಗಳನ್ನು ನೀಡಲಾಗಿತ್ತು. ಈಗ ಮತ್ತೆ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ 1000 ಮನೆಗಳನ್ನು ನೀಡಲಾಗುತ್ತಿದ್ದು ಈಗಾಗಲೇ ಅಂಬೇಡ್ಕರ್ ನಗರ ಹಾಗೂ ಎ.ಡಿ. ಕಾಲನಿಗೆ 400 ಮನೆಗಳನ್ನು ನೀಡಲಾಗಿದೆ. ಹೊಸ ಆದೇಶದಂತೆ ನಿವೇಶನ ಇರುವವರಿಗೆ ಮನೆಕಟ್ಟಿಕೊಳ್ಳಲು ಮಂಡಳಿ ಧನ ಸಹಾಯ ನೀಡುತ್ತಿದೆ. ಇದರಲ್ಲಿ ನಿವೇಶನ ಮಾಲೀಕರು 1ಲಕ್ಷ ರೂ. ಪಾವತಿಸಿದರೆ ಮಂಡಳಿ ಮನೆಕಟ್ಟಿಕೊಳ್ಳಲು 6 ಲಕ್ಷ ರೂ.ಗಳನ್ನು ನೀಡುತ್ತದೆ ಎಂದರು.

ಪಟ್ಟಣದ ಹಾಸನ ಮೈಸೂರು ರಸ್ತೆಯ ಚೆನ್ನಾಂಬಿಕ ವೃತ್ತದಿಂದ ಕನಕ ಭವನದ ವರೆಗೆ 29 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣ ಕಾರ್ಯ ಈಗಾಗಲೇ ಪ್ರಾರಂಭವಾಗಿದೆ. ಈ ರಸ್ತೆ ನಿರ್ಮಾಣ ಸಮಯದಲ್ಲಿ ಒತ್ತುವರಿ ಬಿಟ್ಟು ಮನೆಗಳನ್ನಾಗಲಿ ಅಂಗಡಿಮಳಿಗೆಗಳನ್ನಾಗಲಿ ಒಡೆಯುವುದಿಲ್ಲ ಎಂದರು.

ಸರ್ಕಾರಿ ಆಸ್ಪತ್ರೆ ಕಾಂಪೌಂಡ್ ಒಳಗಡೆ ಇರುವ ಚಿಕ್ಕಮ್ಮ ದೊಡ್ಡಮ್ಮ ದೇವಾಲಯ ನಿರ್ಮಾಣಕ್ಕೆ ಚಾಲನೆ ನೀಡಿದ್ದೇನೆ. ಇನ್ನೊಂದು ವಾರದಲ್ಲಿ ನಿರ್ಮಾಣ ಶಿಲ್ಪಿಗಳು ಆಗಮಿಸುತ್ತಿದ್ದು ಪೂಜಾ ವಿಧಿ ವಿಧಾನಗಳನ್ನು ಪೂರ್ಣಗೊಳಿಸಿ ಎಂದು ಸ್ಥಳದಲ್ಲಿದ್ದ ಗಾಂಧೀನಗರ ನಿವಾಸಿಗಳಿಗೆ ಸೂಚಿಸಿದರು.

ಪುರಸಭಾಧ್ಯಕ್ಷ ಕೆ.ಶ್ರೀಧರ್, ಪುರಸಭೆ ಮುಖ್ಯಾಧಿಕಾರಿ ಶಿವಕುಮಾರ್, ಕಂದಾಯಾಧಿಕಾರಿ ನಾಗೇಂದ್ರಕುಮಾರ್. ರಮೇಶ್, ಉಪಸ್ಥಿತರಿದ್ದರು.