ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಶ್ರೀದೇವಿ, ಭೂದೇವಿ ಸಮೇತ ಶ್ರೀರಂಗನಾಥ ದೇವಾಲಯದ 12ನೇವರ್ಷದ ವಾರ್ಷಿಕೋತ್ಸವ ಹಾಗೂ ತಿರುಕಲ್ಯಾಣೋತ್ಸವ ಕಾರ್ಯಕ್ರಮವು ವಿಜೃಂಭಣೆಯಿಂದ ನೆರವೇರಿತು.
ಕಾರ್ಯಕ್ರಮದ ಪ್ರಯುಕ್ತ ದೇಗುಲದ ಮಹಾಗಣಪತಿ ಸೇರಿ, ಶ್ರೀ ಲಕ್ಷ್ಮೀ ಸಮೇತ ವೆಂಕಟೇಶ್ವರ ಸ್ವಾಮಿ ಮತ್ತು ವೈನತೇಯ ಸ್ವಾಮಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ವಾರ್ಷಿಕೋತ್ಸವದ ಪ್ರಯುಕ್ತ ದೇವರಿಗೆ ಪಂಚಾಮೃತಾಭಿಷೇಕ, ವಿಶೇಷ ಅಲಂಕಾರ, ಕಲ್ಯಾಣೋತ್ಸವ, ಲಾಜಹೋಮ, ಪ್ರಾಯಶ್ಚಿತ ಹೋಮ, ಶಾಂತಿ ಹೋಮ, ಪೂರ್ಣಾಹುತಿ, ಸುಮಂಗಲಿಯರಿಂದ ಕುಂಕುಮಾರ್ಚನೆ, ನಿವೇದನೆ, ಅಷ್ಠಾವಧಾನಸೇವೆ, ರಾಷ್ಟ್ರಾಶೀರ್ವಾದ, ಮಹಾಪೂರ್ಣಾಹುತಿ, ಪ್ರಸಾದ ವಿನಿಯೋಗ ಮಾಡಲಾಯಿತು. ದೇವಾಲಯ ಸಮಿತಿ ಅಧ್ಯಕ್ಷ ಆರ್.ಲಕ್ಷ್ಮಣ್‌ಮೂರ್ತಿ ಮಾತನಾಡಿ, ಜಗತ್ತನ್ನು ರಕ್ಷಿಸುತ್ತಿರುವ ಶ್ರೀ ಹರಿಯ ಅವತಾರವಾಗಿರುವ ಶ್ರೀ ರಂಗನಾಥಸ್ವಾಮಿಗೆ ಶ್ರೀದೇವಿ ಭೂದೇವಿ ಅವರೊಂದಿಗೆ ವಿವಾಹ ನೆರವೇರಿಸಲಾಗಿದೆ. ಭಾರತೀಯರ ಧರ್ಮದಲ್ಲಿ ದೇವಾಲಯಗಳಿಗೆ ವಿಶೇಷ ನಂಬಿಕೆ ಇದ್ದು, ನಾಗರಿಕತೆಯ ಕಾಲದಿಂದಲೂ ದೇವರ ಆರಾಧನೆ ಮಾಡಿಕೊಂಡು ಬರಲಾಗುತ್ತಿದೆ. ಪೂರ್ವಜರು ಪರಿಚಯಿಸಿರುವ ದೇವಾಲಯಗಳ ಪರಿಕಲ್ಪನೆ ಆಧುನಿಕತೆಯ ದಿನಗಳಲ್ಲೂ ಮುಂದುವರೆಸಿಕೊಂಡು ಬರುತ್ತಿರುವುದು ನೆಮ್ಮದಿಯಿಂದ ಬದುಕುವಂತಾಗಿದೆ. ವಾರ್ಷಿಕೋತ್ಸವ ಹೆಸರಿನಲ್ಲಿ ಪರಸ್ಪರ ಸಾಮರಸ್ಯ, ಸ್ನೇಹ ಸೌಹಾರ್ದತೆ ವೃದ್ಧಿಸುತ್ತಿರುವ ಗ್ರಾಮಸ್ಥರ ಕಾರ್ಯ ಉತ್ತವಾಗಿದೆ ಎಂದರು.
ದೇವಾಲಯ ಖಜಾಂಚಿ ಡಿ.ಆರ್.ಮಂಜುನಾಥ್, ಪ್ರಧಾನ ಅರ್ಚಕ ಸಂಜೀವ ಆಚಾರ್ಯ, ಕೃಷ್ಣಮೂರ್ತಿ, ಕಾರ್ಯಕಾರಿ ಸಮಿತಿ ಸದಸ್ಯ ಅಪ್ಪೆಗೌಡ, ಗಂಗರಾಜು, ವಿ.ವೆಂಕಟೇಶ್, ಹನುಮಂತರಾಯಪ್ಪ, ಶಿವಣ್ಣ, ಜಗದೀಶ್, ಪುಟ್ಟರಾಜು, ಮೂರ್ತಿ, ಗಿರೀಶ್, ನಾಗರಾಜು, ರವಿಕುಮಾರ್ ಇದ್ದರು.