ಮೈಸೂರು: ದಸರಾ ಪ್ರತಿವರ್ಷ ಸಂಭ್ರಮ ಹೊತ್ತು ತರುವ ನಾಡಹಬ್ಬ. ದಸರಾ ಉತ್ಸವದ ಪ್ರತಿಯೊಂದು ಕಾರ್ಯಕ್ರಮಗಳನ್ನು ನೋಡಿ ಜನರು ಸಂಭ್ರಮಿಸುತ್ತಾರೆ. ಇಂತಹ ಸಂಭ್ರಮಿಸುವ ವಾತಾವರಣ ನಿರ್ಮಿಸುವಲ್ಲಿ ಪೌರ ಕಾರ್ಮಿಕರು ನೀಡುವ ಕೊಡುಗೆ ಅಪಾರ.
ದಸರಾ ಕಾರ್ಯಕ್ರಮ ನಡೆಯುವ ಸ್ಥಳಗಳು ಶುಚಿಯಾಗಿರದೆ ಹೋದರೆ ಆಗಮಿಸುವ ಜನರು ಮೂಗು ಮುಚ್ಚಿಕೊಂಡು ಕಾರ್ಯಕ್ರಮ ನೋಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದರೆ, ಪೌರ ಕಾರ್ಮಿಕರ ದಣಿವರಿಯದ ದುಡಿಮೆ ಪರಿಣಾಮ ನಗರಕ್ಕೆ ದಸರೆಗೆ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಆಗಮಿಸಿದರೂ ಸಾಂಸ್ಕೃತಿಕ ನಗರಿ ಸ್ವಚ್ಛ ಹಾಗೂ ಸುಂದರವಾಗಿತ್ತು.
ದಸರಾ ಸಂದರ್ಭ ನಗರಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಬಂದು ಹೋಗುತ್ತಾರೆ. ಜನರು ಬಂದು ಹೋಗುವ ಸಂದರ್ಭ ದೊಡ್ಡ ಪ್ರಮಾಣದಲ್ಲಿ ತ್ಯಾಜ್ಯ ಉತ್ಪತಿಯಾಗುವುದು ಸಹಜ. ಈ ರೀತಿ ಉತ್ಪತಿಯಾಗುವ ತ್ಯಾಜ್ಯ ತಕ್ಷಣ ವಿಲೇವಾರಿ ಮಾಡುವ ಅವಶ್ಯಕತೆ ಇದೆ. ಆದರೆ, ನಗರ ಪಾಲಿಕೆಯಲ್ಲಿರುವ ಪೌರ ಕಾರ್ಮಿಕರಿಂದ ಮಾತ್ರ ಈ ಜವಾಬ್ದಾರಿಯನ್ನು ಸಂಪೂರ್ಣ ನಿಭಾಯಿಸಲು ಸಾಧ್ಯವಿಲ್ಲ. ನಗರ ಪಾಲಿಕೆ ಪೌರ ಕಾರ್ಮಿಕರು ಎಂದಿನಂತೆ ವಾರ್ಡ್‌ಗಳು ಹಾಗೂ ನಗರದ ಪ್ರಮುಖ ರಸ್ತೆಗಳು, ಬಡಾವಣೆಗಳ ರಸ್ತೆಗಳ ಶುಚಿ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಎಂದಿನಂತೆ ಈ ಬಾರಿಯೂ ಹೆಚ್ಚುವರಿಯಾಗಿ ದಸರಾ ಕಾರ್ಯಕ್ರಮಕೋಸ್ಕರ ತಾತ್ಕಾಲಿಕವಾಗಿ ಪೌರ ಕಾರ್ಮಿಕರನ್ನು ನಗರ ಪಾಲಿಕೆ ನೇಮಕ ಮಾಡಿಕೊಳ್ಳಲಾಯಿತು. ಒಂದೆಡೆ ದಸರಾ ಉತ್ಸವದ ಸಂಭ್ರಮದಲ್ಲಿ ಸಾಂಸ್ಕೃತಿಕ ನಗರಿಯ ಜನರು, ದೇಶದ ವಿದೇಶದ ಜನರು ಮುಳುಗಿದ್ದರೆ ಮತ್ತೊಂದೆಡೆ ಪೌರ ಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿ ದ್ದರು. ಇದರ ಪರಿಣಾಮ ದಸರಾ ಕಾರ್ಯಕ್ರಮದ ವೇದಿಕೆಗಳಲ್ಲಿ ಅಶುಚಿತ್ವದ ಸಮಸ್ಯೆ ಕಂಡು ಬರಲಿಲ್ಲ.
500 ಪೌರ ಕಾರ್ಮಿಕರ ನೇಮಕ: ಕಳೆದ ಬಾರಿ ಸರಳವಾಗಿ ದಸರಾ ಆಚರಿಸಿದ ಹಿನ್ನೆಲೆಯಲ್ಲಿ 385 ಪೌರ ಕಾರ್ಮಿಕರನ್ನು ದಸರಾ ಕಾರ್ಯಕ್ರಮದಲ್ಲಿ ಶುಚಿತ್ವಕ್ಕೆ ನೇಮಕ ಮಾಡಿಕೊಳ್ಳಲಾಗಿತ್ತು. ಈ ಬಾರಿ ಅದ್ದೂರಿಯಾಗಿ ದಸರಾ ಉತ್ಸವ ಆಚರಿಸಲು ಸರ್ಕಾರ ನಿರ್ಧರಿಸಿದ್ದ ಹಿನ್ನೆಲೆಯಲ್ಲಿ 500 ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಯಿತು.
ದಸರಾ ಸಂದರ್ಭ ನಗರದಲ್ಲಿ ಹಗಲು, ರಾತ್ರಿ ನಿರಂತರವಾಗಿ ತ್ಯಾಜ್ಯ ಉತ್ಪತಿ ಆಗುತ್ತಲೇ ಇರುತ್ತದೆ. ಈ ರೀತಿ ಉತ್ಪತಿಯಾಗುವ ತ್ಯಾಜ್ಯವನ್ನು ಪೌರ ಕಾರ್ಮಿಕರು ಹಗಲು-ರಾತ್ರಿ ನಿರಂತರವಾಗಿ ವಿಲೇವಾರಿ ಮಾಡಿದರು. ಇದಕೋಸ್ಕರ ಒಟ್ಟು ಮೂರು ಪಾಳಿಯಲ್ಲಿ ಪೌರ ಕಾರ್ಮಿಕರು ಸ್ವಚ್ಛತಾ ಕಾರ್ಯ ಕೈಗೊಂಡರು. ಪ್ರತ್ಯೇಕ ತಂಡ ರಚಿಸಿ ದಸರಾ ಕಾರ್ಯಕ್ರಮ ನಡೆಯುವ ವಿವಿಧ ಸ್ಥಳಗಳು ಹಾಗೂ ಪ್ರಮುಖ ರಸ್ತೆಗಳಿಗೆ ಪೌರ ಕಾರ್ಮಿಕರನ್ನು ನಿಯೋಜಿಸಲಾಯಿತು. 1ನೇ ಪಾಳಿಯ ತಂಡದವರು ಬೆಳಗ್ಗೆ 6.30 ರಿಂದ ಮಧ್ಯಾಹ್ನ 2.30ರವರೆಗೆ, 2ನೇ ಪಾಳಿಯವರು ಮಧ್ಯಾಹ್ನ 2.30 ರಿಂದ ರಾತ್ರಿ 10.30ರವರೆಗೆ, 3ನೇ ಪಾಳಿಯವರು ರಾತ್ರಿ 10.30 ರಿಂದ ಬೆಳಗ್ಗೆ 6.30ರವರೆಗೆ ಸ್ವಚ್ಛತಾ ಕಾರ್ಯ ನಿರ್ವಹಿಸಿದರು.
ಸ್ವಚ್ಛತಾ ಕಾರ್ಯದ ಮೇಲುಸ್ತುವಾರಿಯನ್ನು ಸೂಪರ್‌ವೈಜರ್, ಆರೋಗ್ಯ ನಿರೀಕ್ಷಕರು, ಪರಿಸರ ಇಂಜಿನಿಯರ್‌ಗಳು, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳು (ಪರಿಸರ) ಹಾಗೂ ಆರೋಗ್ಯಾಧಿಕಾರಿಗಳು, ವಲಯ ಆಯುಕ್ತರು, ಉಪ ಆಯುಕ್ತರು ಮಾಡಿದರು. ತ್ಯಾಜ್ಯ ವಿಲೇವಾರಿ ಮಾಡಲು ಪ್ರತ್ಯೇಕ ವಾಹನದ ವ್ಯವಸ್ಥೆ ಮಾಡಲಾಗಿತ್ತು. ಸ್ವಚ್ಛತಾ ಕಾರ್ಯಕ್ಕೆ ನಿಯೋಜಿಸಿದ್ದ ಪೌರ ಕಾರ್ಮಿಕರು ಪ್ರತಿನಿತ್ಯ ಕೆಲಸಕ್ಕೆ ಹಾಜರಾಗುತ್ತಿದ್ದಾರೆಯೇ, ಸ್ವಚ್ಛತಾ ಕಾರ್ಯ ಉತ್ತಮವಾಗಿ ನಡೆಯುತ್ತಿದೆಯೇ ಎಂದು ಈ ಅಧಿಕಾರಿಗಳು ಮೇಲುಸ್ತುವಾರಿ ಮಾಡಿದರು.
ಎಲ್ಲೆಲ್ಲಿ ಸ್ವಚ್ಛತಾ ಕಾರ್ಯ?: ದಸರಾ ಕಾರ್ಯಕ್ರಮ ಆಯೋಜಿಸಿದ್ದ ಎಲ್ಲ ಕಡೆಗಳಲ್ಲೂ ಪೌರ ಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂ ಡಿದ್ದರು. ಇದರ ಜತೆಗೆ ಚಾಮರಾಜ ಒಡೆಯರ್ ವೃತ್ತ, ಕೃಷ್ಣರಾಜ ಒಡೆಯರ್ ವೃತ್ತ, ಜಯಚಾಮರಾಜ ಒಡೆಯರ್ ವೃತ್ತ, ಫೈವ್‌ಲೈಟ್ ಸರ್ಕಲ್, ಆಯುರ್ವೇದ ವೃತ್ತ, ಸಯ್ಯಜಿರಾವ್ ರಸ್ತೆ, ಬಿಎನ್ ರಸ್ತೆ, ಜೆಎಲ್‌ಬಿ ರಸ್ತೆ, ಎಂ.ಜಿ. ರೋಡ್, ದೇವರಾಜ ಅರಸು ರಸ್ತೆ, ಸೇರಿದಂತೆ ನಗರದ ಹೃದಯ ಭಾಗಗಳಲ್ಲಿ ಪೌರ ಕಾರ್ಮಿಕರನ್ನು ನಿಯೋಜಿಸಲಾಗಿತ್ತು. ದಸರಾ ಸ್ವಚ್ಛತಾ ಕಾರ್ಯಕ್ಕೆ ನಿಯೋಜನೆಯಾಗಿದ್ದ ಪೌರ ಕಾರ್ಮಿಕರು ಒಟ್ಟು 41 ಕಿ.ಮೀ. ಉದ್ದದ ರಸ್ತೆಯನ್ನು ಶುಚಿಗೊಳಿಸುವ ಕಾರ್ಯವನ್ನು ಯಶಸ್ವಿಯಾಗಿ ಮಾಡಿದರು.
ದಸರಾ ಉತ್ಸವದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಯಾವುದೇ ರೀತಿಯ ಲೋಪ ಉಂಟಾಗದಂತೆ ಎಚ್ಚರ ವಹಿಸಲು ಈ ಬಾರಿ ಒಟ್ಟು 500 ಪೌರ ಕಾರ್ಮಿಕರನ್ನು ದಸರಾ ಸ್ವಚ್ಛತೆಗೋಸ್ಕರ ನೇಮಕ ಮಾಡಿಕೊಳ್ಳಲಾಗಿತ್ತು. ಇದರ ಜತೆಗೆ ನಗರ ಪಾಲಿಕೆಯ ಪೌರ ಕಾರ್ಮಿಕರು ಎಂದಿನಂತೆ ನಗರ ಹಾಗೂ ವಾರ್ಡ್‌ಗಳಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಹೀಗಾಗಿ ಈ ಬಾರಿಯ ದಸರೆಯಲ್ಲಿ ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡಲು ಸಾಧ್ಯವಾಯಿತು. ದಸರಾ ಕಾರ್ಯಕ್ರಮ ನಡೆಯುವ ಸ್ಥಳಗಳು ಹಾಗೂ ನಗರದ ಹೃದಯ ಭಾಗದ ರಸ್ತೆಗಳು ಹಾಗೂ ವೃತ್ತಗಳನ್ನು ಶುಚಿಗೊಳಿಸುವ ಕಾರ್ಯಕ್ಕೆ ಪ್ರತ್ಯೇಕ ತಂಡಗಳನ್ನು ರಚಿಸಿ ಮೂರು ಪಾಳಿಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳ ಲಾಯಿತು.
ಡಾ.ವೆಂಕಟೇಶ್, ಆರೋಗ್ಯಾಧಿಕಾರಿ, ನಗರಪಾಲಿಕೆ