ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಮರಗಳ ಸಮಗ್ರ ಗಣತಿ ನಡೆಸಲು ವಿಳಂಬ ಧೋರಣೆ ಅನುಸರಿಸುತ್ತಿರುವ ಪಾಲಿಕೆ ಹಾಗೂ ಸರ್ಕಾರದ ಬಗ್ಗೆ ಹೈಕೋರ್ಟ್ ತೀವ್ರ ಬೇಸರ ವ್ಯಕ್ತಪಡಿಸಿದೆ.
ಅಭಿವೃದ್ಧಿ ಕಾಮಗಾರಿಗಳಿಗಾಗಿ ಮರಗಳನ್ನು ಕತ್ತರಿಸುವುದನ್ನು ಆಕ್ಷೇಪಿಸಿ ದತ್ತಾತ್ರೇಯ ಟಿ. ದೇವರೆ ಮತ್ತು ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್ ಸಲ್ಲಿಸಿದ್ದ ಪಿಐಎಲ್ ವಿಚಾರಣೆಯನ್ನು ಸಿಜೆ ಎಸ್.ಓಕ್ ನೇತೃತ್ವದ ವಿಭಾಗೀಯ ಪೀಠ ಸೋಮವಾರ ನಡೆಸಿತು. ಮರಗಳ ರಕ್ಷಣೆಯ ಸಾಧ್ಯತೆ ಮತ್ತು ಅದಕ್ಕೆ ಅನುಸರಿಸ ಬೇಕಾದ ಕಾರ್ಯವಿಧಾನ ಹಾಗೂ ಮಾರ್ಗಸೂಚಿಗಳನ್ನು ರೂಪಿಸಲು ತಜ್ಞರ ಸಂಸ್ಥೆ ರಚಿಸುವಂತೆ ಕಳೆದ ಏಪ್ರಿಲ್ನಲ್ಲಿ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿತ್ತು. ಆ ಆದೇಶದಂತೆ ತಜ್ಞರ ಸಮಿತಿ ರಚನೆ ಮಾಡಲಾಗಿತ್ತಾದರೂ, ಕಾರ್ಯ ವಿಧಾನ ಮತ್ತು ಮಾರ್ಗಸೂಚಿಗಳನ್ನು ರೂಪಿಸಿ ನ್ಯಾಯಾಲಯಕ್ಕೆ ಸಲ್ಲಿಸಿರಲಿಲ್ಲ. ವಿಚಾರಣೆ ವೇಳೆ, ಸಮಿತಿಯ ಕಾರ್ಯವಿಧಾನ ಮತ್ತು ಮಾರ್ಗಸೂಚಿ ರೂಪಿಸಿರುವ ಕುರಿತು ಬಿಬಿಎಂಪಿಯ ಡಿಎಫ್ಒ ಪ್ರಮಾಣಪತ್ರ ಸಲ್ಲಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪೀಠ, ಮಾರ್ಗಸೂಚಿ ಗಳನ್ನು ತಜ್ಞರ ಸಮಿತಿ ರೂಪಿಸಿದೆಯೇ, ಅಥವಾ ತಜ್ಞರ ಸಮಿತಿಯೊಂದಿಗೆ ಸಮಾಲೋಚಿಸಿ ಬಿಬಿಎಂಪಿ ರಚಿಸಿದೆಯೇ ಎಂಬ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಮೇಲಾಗಿ ತಜ್ಞರ ಸಮಿತಿಗೆ ಸಂಬಂಧಪಡದ ವ್ಯಕ್ತಿ (ಡಿಎಫ್ಒ) ಪ್ರಮಾಣಪತ್ರಕ್ಕೆ ಸಹಿ ಹಾಕಿದ್ದಾರೆ. ಆದ್ದರಿಂದ, ಈ ಮಾರ್ಗಸೂಚಿಗಳನ್ನು ಒಪ್ಪಲಾಗದು ಎಂದು ಹೇಳಿತು.
ವೆಬ್ಸೈಟ್ ರೂಪಿಸಿದರೆ ಮರಗಣತಿ ಮಾಡಿದಂತಲ್ಲ
ಮರಗಳ ಗಣತಿ ಕಾರ್ಯ ಆರಂಭಿಸಲಾಗಿದೆಯೇ ಎಂದು ನ್ಯಾಯಪೀಠ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮರ ವಿಜ್ಞಾನ ಸಂಸ್ಥೆಯ ಪರ ವಕೀಲರು ಪ್ರಕ್ರಿಯೆಗೆ ಈಗಾಗಲೇ ಚಾಲನೆ ನೀಡಲಾಗಿದೆ ಎಂದರು. ಕಳೆದ ಡಿಸೆಂಬರ್ನಲ್ಲೇ ವೆಬ್ಸೈಟ್ ರೂಪಿಸಲಾಗಿದೆ ಎಂದು ತಿಳಿಸಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪೀಠ, ವೆಬ್ಸೈಟ್ ರೂಪಿಸಿದ ಮಾತ್ರಕ್ಕೆ ಮರಗಣತಿ ಆರಂಭವಾಗಿದೆ ಎಂದರ್ಥವೇ? ನಿರ್ದಿಷ್ಟವಾಗಿ ಗಣತಿ ಕಾರ್ಯ ಯಾವಾಗ ನಡೆಸುತ್ತೀರಿ ಎಂದು ಹೇಳಿ. 1976ರಲ್ಲಿ ಕರ್ನಾಟಕ ರಾಜ್ಯ ಮರ ಸಂರಕ್ಷಣಾ ಕಾಯ್ದೆ ರೂಪಿಸಲಾಗಿದೆ. ಕಾಯ್ದೆಯ ಅನುಸಾರ ಈವರೆಗೂ ಕ್ರಮ ಕೈಗೊಂಡಿಲ್ಲವೆಂದರೆ ಏನರ್ಥ? ಇಲ್ಲಿಯವರೆಗೆ ಲಕ್ಷಾಂತರ ಮರಗಳು ಕಣ್ಮರೆ ಯಾಗಿರಬಹುದು ಎಂದು ಆತಂಕ ವ್ಯಕ್ತಪಡಿಸಿತು. ಅಧಿಸೂಚನೆ ಕುರಿತು ವಿವರಣೆ ನೀಡಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ ವ್ಯಾಪ್ತಿಗೆ ರಚಿಸಲಾಗಿದ್ದ ತಜ್ಞರ ವಿಶೇಷ ಸಮಿತಿ ಯನ್ನು ಕೇವಲ ಬಿಬಿಎಂಪಿ ವ್ಯಾಪ್ತಿಗೆ ಸೀಮಿತ ಗೊಳಿಸಿ ಜ.16ರಂದು ಅಧಿಸೂಚನೆ ಹೊರಡಿಸಿದ್ದ ಸರ್ಕಾರದ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪೀಠ, ಕೋರ್ಟ್ ಅನುಮತಿ ಇಲ್ಲದೆ ಅಧಿಸೂಚನೆ ಹೇಗೆ ಹೊರಡಿಸಲಾಗಿದೆ ಎಂಬ ಬಗ್ಗೆ ವಿವರಣೆ ನೀಡುವಂತೆ ತಾಕೀತು ಮಾಡಿತು.