ಜಿಲ್ಲೆ

ಪ್ರತಿ ಮನೆಯಲ್ಲಿ ಹಾರಲಿ ರಾಷ್ಟ್ರ ಧ್ವಜ : ಕ್ಯಾ.ಬ್ರಿಜೇಶ್ ಚೌಟ ಆಶಯ

ಸೌಮ್ಯ ಆರ್

ಉಳ್ಳಾಲ: ಒಂದು ಕಾಲದಲ್ಲಿ ಸರ್ಕಾರಿ ಕಾರ್ಯಕ್ರಮಕ್ಕೆ ಸೀಮಿತವಾಗಿದ್ದ ಸ್ವಾತಂತ್ರ್ಯ ದಿನ ಈಗ ಸಾರ್ವಜನಿಕ ಕಾರ್ಯಕ್ರಮವಾಗಿದೆ. ಪ್ರತಿಯೊಬ್ಬರೂ ಸಂಭ್ರಮಿಸಬೇಕೆನ್ನುವ ನೆಲೆಯಲ್ಲಿ ಪ್ರತಿ ಮನೆಯಲ್ಲಿ ರಾಷ್ಟ್ರ ಧ್ವಜ ಹಾರಿಸಲು ಪ್ರಧಾನಿ ಮೋದಿ ಅವಕಾಶ ಕಲ್ಪಿಸಿದ್ದಾರೆ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.

79ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಬುಧವಾರ ತಿರಂಗಾ ಯಾತ್ರೆ ಮತ್ತು ರಾಣಿ ಅಬ್ಬಕ್ಕ ಪ್ರತಿಮೆಗೆ ಮಾಲಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ತುಳುನಾಡಿನ ಮಣ್ಣಿನ ಮೂಲಕ ಇಡೀ ದೇಶಕ್ಕೆ ಸ್ವಾತಂತ್ರೃದ ಕಿಚ್ಚು ಹಚ್ಚಿದ ರಾಣಿ ಅಬ್ಬಕ್ಕಳ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಸ್ವಾತಂತ್ರೃ ಸಂಭ್ರಮ ಹೆಚ್ಚಿಸಲಾಗಿದೆ. ವಿದ್ಯಾರ್ಥಿಗಳೆಲ್ಲರೂ ತಮ್ಮ ಮನೆ ಮಾತ್ರವಲ್ಲದೆ ಸುತ್ತಮುತ್ತಲ ಮನೆಗಳು ಹಾಗೂ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ರಾಷ್ಟ್ರಧ್ವಜ ಹಾರಿಸಬೇಕು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮಂಡಲ ಜಗದೀಶ್ ಆಳ್ವ, ಫಾ.ವಿಲಿಯಂ, ಯುವನೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಮಾಜಿ ಶಾಸಕ ಜಯರಾಮ ಶೆಟ್ಟಿ, ಪ್ರಮುಖರಾದ ರವೀಂದ್ರ ಶೆಟ್ಟಿ ಉಳಿದೊಟ್ಟು ಇನ್ನಿತರರು ಉಪಸ್ಥಿತರಿದ್ದರು. ಧನಲಕ್ಷ್ಮೀ ಗಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಎಡೆಬಿಡದ ಮಳೆಯ ಸ್ವಾಗತ

ಬುಧವಾರ ಮಧ್ಯಾಹ್ನದಿಂದಲೇ ಮಳೆಯ ಸಿಂಚನ ಆರಂಭಗೊಂಡಿತ್ತು. ಈ ನಡುವೆಯೇ ಸಂಜೆ 4 ಗಂಟೆಗೆ ನಡೆದ ತಿರಂಗಾ ಯಾತ್ರೆಗಾಗಿ ಬಿಜೆಪಿ ಮುಖಂಡರು, ಮಾಜಿ ಸೇನಾನಿಗಳು, ಕಾರ್ಯಕರ್ತರು, ಎನ್‌ಸಿಸಿ ವಿದ್ಯಾರ್ಥಿಗಳು 75 ಮೀಟರ್ ಉದ್ದದ ರಾಷ್ಟ್ರಧ್ವಜದೊಂದಿಗೆ ಉಳ್ಳಾಲಬೈಲ್‌ನಲ್ಲಿ ಕಾಯುತ್ತಿದ್ದರು. ಮೆರವಣಿಗೆಯ ಸಂದರ್ಭ ಹಾಗೂ ಕೊನೆಯವರೆಗೆ ಮಳೆ ಬರುತ್ತಲೇ ಇತ್ತು. ಅಬ್ಬಕ್ಕ ವೃತ್ತದ ಬಳಿ ತಲುಪಿದಾಗ ಜೋರಾದ ಮಳೆ ಬಂದರೂ ಜನರು ನೆನೆಯುತ್ತಲೇ ಭಾಗವಹಿಸಿದರು. ಮುಖಂಡರೂ ಮಳೆಯಲ್ಲಿ ಭಾಷಣ ಮಾಡಿದರು.