ಜಿಲ್ಲೆ

ಮತ್ತೆ ದಾಳಿ ಮಾಡಿದರೆ ಪಾಕಿಸ್ತಾನ ಉಳಿಯದು...

ನಿವೃತ್ತ ಯೋಧ ಸುರೇಶ ರಾವ್​ ಹೇಳಿಕೆ

ಉಡುಪಿಯಲ್ಲಿ ತಿರಂಗಾ ಯಾತ್ರೆ

ಗಮನ ಸೆಳೆದ 30 ಅಡಿ ಉದ್ದದ ಮೂರು ಬಾವುಟ

ವಿಜಯವಾಣಿ ಸುದ್ದಿಜಾಲ ಉಡುಪಿ

ಭಾರತವು ಜಗತ್ತಿನ ನಾಲ್ಕನೇ ಬಲಿಷ್ಠವಾದ ಸೇನೆ ಹೊಂದಿದೆ. ಭಾರತೀಯ ಸೇನೆಯ ಸಾಮರ್ಥ್ಯ ಹೇಗಿದೆಯೆನ್ನುವುದು ಆಪರೇಷನ್​ ಸಿಂಧೂರ ಜಗತ್ತಿಗೆ ತೋರ್ಪಡಿಸಿದೆ. ಯುದ್ಧ ಗೆಲ್ಲಲು ಸಮರ್ಥ ನಾಯಕತ್ವ, ಆಯುಧ ಹಾಗೂ ಯೋಧರು ಮುಖ್ಯವಾಗುತ್ತಾರೆ. ಇದೀಗ ಸಾಲದ ಭಿಕ್ಷೆ ಬೇಡುತ್ತಿರುವ ಪಾಕಿಸ್ತಾನ, ಭಾರತ ಕೊಟ್ಟ ತಿರುಗೇಟಿಗೆ ತತ್ತರಿಸಿದೆ. ಮತ್ತೆ ದಾಳಿಯ ಹುಚ್ಚು ಸಾಹಸಕ್ಕೆ ಮುಂದಾದರೆ ಇತಿಹಾಸದಲ್ಲಿ ಮರೆಯಲಾಗದ ಪಾಠವನ್ನೇ ಅವರಿಗೆ ಕಲಿಸಬೇಕು ಎಂದು ನಿವೃತ್ತ ಯೋಧ ಸುರೇಶ ರಾವ್​ ಹೇಳಿದರು.

ಭಾರತೀಯ ಸೇನೆಯ ವೀರ ಯೋಧರಿಗೆ ಬೆಂಬಲವಾಗಿ ರಾಷ್ಟ್ರ ರಕ್ಷಣಾ ಸಮಿತಿ ವತಿಯಿಂದ ಉಡುಪಿಯ ಜೋಡುಕಟ್ಟೆಯಲ್ಲಿ ಮೇ 20ರಂದು ಸಂಜೆ ಆಯೋಜಿಸಿದ್ದ ತಿರಂಗಾ ಯಾತ್ರೆ ಯಾತ್ರೆಯಲ್ಲಿ ಮಾತನಾಡಿದರು.

ಬಾವುಟದೊಂದಿಗೆ ಮೆರವಣಿಗೆ

ಮೆರವಣಿಗೆಯಲ್ಲಿ 30 ಅಡಿ ಉದ್ದದ ಮೂರು ತ್ರಿವರ್ಣ ಧ್ವಜ ಹಿಡಿದು ಸಾಗಿದರು. ಯಾತ್ರೆಯುದ್ದಕ್ಕೂ ಪುಷ್ಪ ನಮನ ಸಲ್ಲಿಸಲಾಯಿತು. ನೂರಾರು ಮಂದಿ ಸಣ್ಣ ಸಣ್ಣ ತ್ರಿವರ್ಣ ಧ್ವಜವನ್ನು ಹಿಡಿದು ಬೀಸುತ್ತ ವಂದೇ ಮಾತರಂ, ಭಾರತ್​ ಮಾತಾಕೀ ಜೈ ಘೋಷಣೆ ಕೂಗಿದರು. ಎಲ್ಲರಿಗೂ ಸಿಹಿ ವಿತರಿಸಲಾಯಿತು.

ಉಡುಪಿಯ ಶೋಕ ಮಾತಾ ಇಗರ್ಜಿಯ ಸಹಾಯಕ ಧರ್ಮಗುರು ಫಾ. ಪ್ರವೀಣ ಡಿಸೋಜಾ, ಕರ್ನಲ್​ ಎಫ್​.ಎ. ರೋಡ್ರಿಗ್ರೀಸ್​, ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಡಾ. ಸುಕನ್ಯಾ ಮೇರಿ, ನಿವೃತ್ತ ಯೋಧರ ಸಂಘದ ಅಧ್ಯಕ್ಷ ಕೇಶವ ಮಲ್ಪೆ ಮಾತನಾಡಿದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯಕುಮಾರ್​ ಶೆಟ್ಟಿ, ಉಡುಪಿ ಶಾಸಕ ಯಶಪಾಲ್​ ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ, ಕುಂದಾಪುರ ಶಾಸಕ ಕಿರಣ ಕೊಡ್ಗಿ, ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ಕುಯಿಲಾಡಿ ಸುರೇಶ ನಾಯಕ, ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಮಾಜಿ ಶಾಸಕ ಕೆ. ರಘುಪತಿ ಭಟ್​, ಶಿಲ್ಪಾ ಜಿ. ಸುವರ್ಣ, ಗೀತಾಂಜಲಿ ಸುವರ್ಣ, ವೀಣಾ ಎಸ್​. ಶೆಟ್ಟಿ, ಗೋಕುಲದಾಸ್​ ಬಾರ್ಕೂರು ಪೆರ್ಣಂಕಿಲ ಶ್ರೀಶ ನಾಯಕ, ರವಿ ಅಮೀನ್​, ಸಂಧ್ಯಾ ರಮೇಶ, ಸಂಘ ಪ್ರಚಾರಕ ದಾ.ಮ. ರವೀಂದ್ರ, ದಿನಕರ ಶೆಟ್ಟಿ ಹೆರ್ಗ, ದಿನೇಶ ಆತ್ರಾಡಿ, ಶ್ರೀನಿಧಿ ಹೆಗ್ಡೆ, ನವೀನ ಶೆಟ್ಟಿ ಕುತ್ಯಾರು, ಶಶಾಂಕ ಶಿವತ್ತಾಯ, ರಾಜೇಶ ಕಾವೇರಿ ಇತರರು ಉಪಸ್ಥಿತರಿದ್ದರು.

ವಿಜೇತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಮೆರವಣಿಗೆಗೆ ತೊಡಕಾದ ಮಳೆ

ನಗರದ ಜೋಡುಕಟ್ಟೆಯಿಂದ ಹೊರಟ ತಿರಂಗಾ ಯಾತ್ರೆಯ ಮೆರವಣಿಗೆಯು ಕೋರ್ಟ್​ ರಸ್ತೆ, ಡಯಾನಾ ಸರ್ಕಲ್​, ಅಲಂಕಾರ ಟಾಕೀಸ್​ ಮಾರ್ಗವಾಗಿ ಸಾಗಿಬಂದು ಕ್ಲಾಕ್​ ಟವರ್​ ಬಳಿ ಮುಕ್ತಾಯಗೊಂಡಿತು. ಪಹಲ್ಗಾಮ್​ ದಾಳಿ ಖಂಡಿಸಿ ಹಾಗೂ ಉಗ್ರ ಚಟುವಟಿಕೆಯ ವಿರುದ್ಧ ಹೋರಾಟ ನಡೆಸಲು ಭಾರತೀಯರು ಒಗ್ಗಟ್ಟಾಗಬೇಕು ಎಂಬ ಜಾಗೃತಿ ಉದ್ದೇಶದೊಂದಿಗೆ ಮತ್ತು ಆಪರೇಷನ್​ ಸಿಂಧೂರದ ವಿಜಯೋತ್ಸವದ ಹಿನ್ನೆಲೆಯಲ್ಲಿ ತಿರಂಗಾ ಯಾತ್ರೆ ಆಯೋಜಿಸಲಾಗಿತ್ತು. ಭಾರಿ ಮಳೆಯಿಂದಾಗಿ ನಿರೀಕ್ಷಿಸಿದಷ್ಟು ಜನರು ಪಾಲ್ಗೊಂಡಿರಲಿಲ್ಲ.