ಜಿಲ್ಲೆ

ಹುಬ್ಬಳ್ಳಿಯಲ್ಲಿ ತಿರಂಗಾ ಯಾತ್ರೆ

ಹುಬ್ಬಳ್ಳಿ : ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಇಲ್ಲಿನ ಚಿನ್ಮಯ ಪದವಿ ಪೂರ್ವ ಕಾಲೇಜಿನಿಂದ ನಗರದ ಪ್ರಮುಖ ರಸ್ತೆಗಳಲ್ಲಿ ತಿರಂಗಾ ಯಾತ್ರೆ ಶನಿವಾರ ನಡೆಯಿತು.

ಚಿನ್ಮಯ ಕಾಲೇಜ್, ಹಮ್ ಭಾರತಿ ಫೌಂಡೇಷನ್, ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ನಕ್ಷತ್ರ ಟೆಕ್ನಾಲಜೀಸ್ ಸಹಯೋಗದೊಂದಿಗೆ ಕಳೆದ 15 ವರ್ಷಗಳಿಂದ ತಿರಂಗಾ ಯಾತ್ರೆ ನಡೆಸಲಾಗುತ್ತಿದೆ.

ಕಾಲೇಜಿನ ಆವರಣದಲ್ಲಿ ಹುಬ್ಬಳ್ಳಿಯ ಚಿನ್ಮಯ ಮಿಷನ್​ನ ಆಚಾರ್ಯ ಸ್ವಾಮಿ ಕೃತಾತ್ಮನಂದ ಅವರು ಡೋಲು ಬಾರಿಸುವ ಮೂಲಕ ತಿರಂಗಾ ಯಾತ್ರೆಗೆ ಚಾಲನೆ ನೀಡಿದರು.

ಚಿನ್ಮಯ ಸಮೂಹ ಸಂಸ್ಥೆಯ ಅಧ್ಯಕ್ಷ ಗಿರೀಶ ಉಪಾಧ್ಯಾಯ ತಿರಂಗಾ ಯಾತ್ರೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಚಿಕ್ಕ ರಾಷ್ಟ್ರ ಧ್ವಜ ವಿತರಿಸಿದರು. ಹಮ್ ಭಾರತಿ ಫೌಂಡೇಷನ್​ನ ಅನ್ವರ ಮುಲ್ಲಾ ಮಾತನಾಡಿ, ಪೂರ್ವಜರ ರಕ್ತ, ಬೆವರು ಮತ್ತು ಕನಸುಗಳ ಸಂಕೇತ ಈ ತಿರಂಗಾ ಎಂದರು.

ಚಿನ್ಮಯ ಕಾಲೇಜಿನಿಂದ ಪ್ರಾರಂಭಗೊಂಡ ತಿರಂಗಾ ಯಾತ್ರೆಯು ಭವಾನಿ ನಗರ, ರಮೇಶ ಭವನ, ಸವೋದಯ ಸರ್ಕಲ್, ಫಾತಿಮಾ ಕಾಲೇಜು ಮುಂಭಾಗದ ರಸ್ತೆ ಮೂಲಕ ಶ್ರೀ ಸಿದ್ಧಾರೂಢ ಸ್ವಾಮಿ ರೈಲು ನಿಲ್ದಾಣ ಪ್ರವೇಶ ದ್ವಾರದಲ್ಲಿರುವ ಸ್ವಾಮಿ ವಿವೇಕಾನಂದ ಮೂರ್ತಿವರೆಗೆ ನಡೆಯಿತು.

600ಕ್ಕೂ ಹೆಚ್ಚು ವಿದ್ಯಾರ್ಥಿಗಳು, ರಾಷ್ಟ್ರ ಭಕ್ತರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಶಿಕ್ಷಕರು 150 ಅಡಿ ಉದ್ದದ ರಾಷ್ಟ್ರ ಧ್ವಜ ಹಿಡಿದು ತಿರಂಗಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

40 ಝಾಂಜ್ ಕಲಾವಿದರ ತಂಡದ ಸಂಚಾಲಕ ಅಭಿಷೇಕ ಅವರ ನೇತೃತ್ವದಲ್ಲಿ ದೇಶಭಕ್ತಿ ಗೀತೆ ಹಾಡುತ್ತ ವಿದ್ಯಾರ್ಥಿಗಳು ಪಥಸಂಚಲನದಲ್ಲಿ ಸಾಗಿದರು. ರಾಷ್ಟ್ರಗೀತೆ ಹಾಡಿದರು.

ಕಾಲೇಜಿನ ಪ್ರಾಚಾರ್ಯ ಬಿ.ಕೆ. ವಿನಾಯಕ, ಆಡಳಿತಾಧಿಕಾರಿ ವಿಶ್ವನಾಥ ರಾನಡೆ, ಧರ್ಮದರ್ಶಿಗಳಾದ ಪಾಂಡುರಂಗ ನಾಯ್ಡು, ಆರ್.ಎನ್. ಮೂರ್ತಿ, ಅಶೋಕ ತೇಲಗಾರ, ಸಿಮ್ರನ್ ಮುಲ್ಲಾ, ಹನುಮಂತಗೌಡ ಪಾಟೀಲ, ಇಮ್ತಿಯಾಜ ಮುಲ್ಲಾ, ಮಲ್ಲಿಕಾರ್ಜುನ ತೊಟಗಿ ಹಾಗೂ ಇತರರು ಪಾಲ್ಗೊಂಡಿದ್ದರು.