ಜಿಲ್ಲೆ

ಅರ್ಧ ಕಿಮೀ ಉದ್ದದ ತಿರಂಗಾ ಯಾತ್ರೆ, 40 ಮಾಜಿ ಸೈನಿಕರಿಗೆ ಸನ್ಮಾನ

ಕಾರವಾರ: ಆಪರೇಶನ್ ಸಿಂಧೂರ ಮೂಲಕ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಿದ ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸುವ ಸಲುವಾಗಿ ಆಯೋಜಿಸಿದ್ದ ತಿರಂಗಾ ಯಾತ್ರೆ ಕಾರವಾರದಲ್ಲಿ ಗುರುವಾರ ಯಶಸ್ವಿಯಾಗಿ ನಡೆಯಿತು. ಧರ್ಮ,ಜಾತಿ, ಪಕ್ಷ, ಭಾಷೆ ಭೇದ ಮರೆತು ಸಾವಿರಾರು ಜನ ಹೆಗಲ ಮೇಲೆ ಧ್ವಜ ಹೊತ್ತು ಯಾತ್ರೆಯಲ್ಲಿ ಪಾಲ್ಗೊಂಡರು.

ನಗರದ ಮಾಲಾದೇವಿ ಮೈದಾನದಿಂದ ಪ್ರಾರಂಭವಾದ ಯಾತ್ರೆಯು ಸವಿತಾ ಸರ್ಕಲ್, ಸುಭಾಷ್ ಸರ್ಕಲ್, ಗ್ರೀನ್ ಸ್ಟ್ರೀಟ್‌ ಮೂಲಕ ಸಾಗಿ ಅಂಬೇಡ್ಕರ್ ಸರ್ಕಲ್‌ನಲ್ಲಿ ಕೊನೆಗೊಂಡಿತು. ಅರ್ಧ ಕಿಮೀ ಉದ್ದದ ಬೃಹತ್ ಧ್ವಜವು ಮೆರವಣಿಗೆಯಲ್ಲಿ ವಿಶೇಷ ಗಮನ ಸೆಳೆಯಿತು. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಶಾಸಕ ರೂಪಾಲಿ ನಾಯ್ಕ ಸೇರಿ ಹಲವರು ಯಾತ್ರೆಯಲ್ಲಿ ಕಾಲ್ನಡಿಗೆಯಲ್ಲಿ ಸಾಗಿದರು.

ಮೆರವಣಿಯಲ್ಲಿ ವಾಹನದ ಮೇಲೆ ಮಾಜಿ ಸೈನಿಕರನ್ನು ಕರೆದೊಯ್ಯಲಾಯಿತು. ಯಾತ್ರೆಯ ಬಳಿಕ ಅಂಬೇಡ್ಕರ್ ಸರ್ಕಲ್‌ನಲ್ಲಿ ಸೈನಿಕರನ್ನು ಸನ್ಮಾನಿಸಲಾಯಿತು. ನಂತರ ಮಾತನಾಡಿದ ವಾಗ್ಮಿ ಆದರ್ಶ ಗೋಖಲೆ, ಹಿಂದೆ ನಡೆದ ಯುದ್ಧಗಳಲ್ಲಿ ಭಾರತದ ಸರ್ಕಾರ ಸೋತಿದ್ದರೂ ಸೈನ್ಯಗಳು ಗೆಲುವು ಸಾಽಸಿದ್ದವು. ಆಪರೇಶನ್ ಸಿಂಧೂರ ಕಾರ್ಯಾಚರಣೆಯ ಬಳಿಕ ಭಾರತದ ಶಕ್ತಿ ವಿಶ್ವಕ್ಕೇ ಗೊತ್ತಾಗಿದೆ. ದಯಮಾಡಿ ಯುದ್ಧ ನಿಲ್ಲಿಸಿ ಎಂದು ವಿಶ್ವದ ದೊಡ್ಡಣ್ಣ ಅಮೆರಿಕ ಭಾರತವನ್ನು ಕೇಳುವ ಪರಿಸ್ಥಿತಿ ಬಂದಿದೆ. ನಾವು ಸ್ನೇಹಕ್ಕೆ ಬದ್ಧ ಕೆಣಕಿದರೆ ಸಮರಕ್ಕೂ ಸಿದ್ಧ ಎಂಬುದನ್ನು ಭಾರತ ಸಾರಿದೆ. ನಮ್ಮ ಯುವ ಜನರಿಗೆ ಸಿನೆಮಾದಲ್ಲಿ ಪಾತ್ರ ವಹಿಸುವವರು, ಐಪಿಎಲ್ ಕ್ರಿಕೆಟ್ ಆಡುವವರು ಹಿರೋಗಳಲ್ಲ. ಭಾರತೀಯ ಸೈನಿಕರು, ಭಾರತೀಯ ವಿಜ್ಞಾನಿಗಳು ನಮ್ಮ ಹಿರೋಗಳು ಎಂದು ಹೇಳಿಕೊಡುವ ಕಾಲ ಬಂದಿದೆ ಎಂದರು.

ರೂಪಾಲಿ ನಾಯ್ಕ ಮಾತನಾಡಿ, ನಮ್ಮ ಮಹಿಳೆಯರ ಸಿಂಧೂರ ಹರಣ ಮಾಡಿದ ಪಾಕಿಸ್ತಾನದ ಪಾಪಿಗಳಿಗೆ ಆಪರೇಶನ್ ಸಿಂಧೂರ ಮೂಲಕ ತಕ್ಕ ಶಾಸ್ತಿ ಮಾಡಿದ ಸೈನಿಕರಿಗೆ ಅಭಿನಂದನೆ ಹೇಳುವ ಸಲುವಾಗಿ ತಿರಂಗಾ ಯಾತ್ರೆ ಕೈಗೊಳ್ಳಲಾಗಿತ್ತು. ಇದರಲ್ಲಿ ಎಲ್ಲ ಧರ್ಮ ಗುರುಗಳು, ಎಲ್ಲ ಪಕ್ಷ ಹಾಗೂ ಧರ್ಮದವರೂ ಪಾಲ್ಗೊಂಡಿರುವುದು ಸಂತಸದ ಸಂಗತಿ. ಸಂಕಷ್ಟದ ಕಾಲದಲ್ಲಿ ನಾವೆಲ್ಲ ಭಾರತೀಯರೂ ಒಂದೇ ಎಂಬ ಸಂದೇಶವನ್ನು ನಾವು ಸಾರಿದ್ದೇವೆ ಎಂದರು.