ಮೈಸೂರು: ಟಿಪ್ಪು ಸುಲ್ತಾನ್ ತಾಯ್ನಡಿಗೋಸ್ಕರ ತನ್ನ ಮಕ್ಕಳನ್ನೇ ಒತ್ತೆ ಇಟ್ಟ ತ್ಯಾಗಮಯಿ, ಟಿಪ್ಪು ಹೆಸರನ್ನು ಎಂದಿಗೂ ಇತಿಹಾಸದ ಪುಟಗಳಿಂದ ಅಳಿಸಲು ಹಾಕಲು ಸಾಧ್ಯವಿಲ್ಲ, ಸೂರ್ಯ ಚಂದ್ರ ಇರುವವರೆಗೆ ಟಿಪ್ಪು ಹೆಸರು ಅಜರಾಮರ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದರು.
ಟಿಪ್ಪು ಕನ್ನಡ ರಾಜ್ಯೋತ್ಸವ ವೇದಿಕೆ ವತಿಯಿಂದ ನಗರದ ಬನ್ನಿಮಂಟಪದ ಮಿಲನ್ ಫಂಕ್ಷನ್ ಹಾಲ್‌ನಲ್ಲಿ ಶುಕ್ರವಾರ ಟಿಪ್ಪು ಉತ್ಸವ ಹಾಗೂ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಬ್ರಿಟೀಷರಿಗೆ ಶರಣಾಗದೆ ಯುದ್ಧಭೂಮಿಯಲ್ಲಿಯೇ ವೀರ ಮರಣ ಹೊಂದಿದ ಹುತಾತ್ಮ. ಟಿಪ್ಪು ಜಾತಿ, ಧರ್ಮಕ್ಕೆ ಸೀಮಿತವಾಗಿ ಆಡಳಿತ ನಡೆಸಲಿಲ್ಲ. ಎಲ್ಲ ಧರ್ಮದವರನ್ನು ಸಮಾನವಾಗಿ ಕಂಡರು. ಅಂತಹ ಟಿಪ್ಪು ಕುರಿತು ಕೆಲವರು ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ ಎಂದರು.
ಕಾರ್ಯಕ್ರಮದ ಅಂಗವಾಗಿ ಪ್ರಮುಖ ಬೀದಿಗಳಲ್ಲಿ ಆಕರ್ಷಕ ಮೆರವಣಿಗೆ ನಡೆಯತು. ಟಿಪ್ಪುವಿನ ವೇಷ ತೊಟ್ಟ ಮಕ್ಕಳು ಕುದುರೆ ಸವಾರಿ ಮೂಲಕ ಆಗಮಿಸಿ ಗಮನ ಸೆಳೆದರು. ಕಾರ್ಯಕ್ರಮದಲ್ಲಿ ವಿವಿಧ ಕನ್ನಡದ ಹಾಡುಗಳಿಗೆ ವಿದ್ಯಾರ್ಥಿಗಳು ನೃತ್ಯ ಮಾಡಿ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ಶಾಸಕ ತನ್ವೀರ್‌ಸೇಠ್, ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ಕನ್ನಡ ಜಾಗೃತ ವೇದಿಕೆಯ ಡಾ. ಎಚ್.ವಿ. ವಾಸು, ನಗರಪಾಲಿಕೆ ಸದಸ್ಯ ಶೌಕತ್ ಪಾಷಾ, ವೇದಿಕೆ ಸಂಚಾಲಕ ಖಲೀಂ ಅಹಮದ್, ಕಾರ್ಯದರ್ಶಿ ಅಬ್ದುಲ್ ಖಾದರ್ ಶಾಹಿದ್ ಹಾಗೂ ಇತರರು ಇದ್ದರು.