ಶ್ರೀರಂಗಪಟ್ಟಣ : ಟಿಪ್ಪು ಸುಲ್ತಾನ್ ಅವರ 232ನೇ ಉರುಸ್-ಎ-ಷರೀಫ್(ಹುತಾತ್ಮ) ದಿನಾಚರಣೆ ಗುರುವಾರ ಸಂಭ್ರಮ ಸಡಗರದಿಂದ ನಡೆಯಿತು.
ಪಟ್ಟಣದ ಜಾಮಿಯಾ (ಮಸ್ಜಿದ್-ಎ-ಆಲಾ) ಮಸೀದಿಯಲ್ಲಿ ಗಂಜಾಂ, ಮೈಸೂರು, ಚಿತ್ರದುರ್ಗ ಹಾಗೂ ರಾಜ್ಯದ 30 ಕಡೆಗಳ ಮಸೀದಿಯಿಂದ ತಂದಿದ್ದ ಪವಿತ್ರ ಗಂಧವನ್ನು ಮೌಲ್ವಿಗಳಾದ ಚಿತ್ರದುರ್ಗದ ಖಾಸಿಂಅಲಿ ಹಾಗೂ ಮೈಸೂರಿನ ಇನಾಯತ್ ಸೇರಿದಂತೆ ಹಲವರ ನೇತೃತ್ವದಲ್ಲಿ ವಿವಿಧ ಪೂರ್ಣಕುಂಭದಲ್ಲಿರಿಸಿ ಪ್ರಾರ್ಥಿಸಿ ಸಲಾಂ ಅರ್ಪಿಸಲಾಯಿತು. ಬಳಿಕ ವಿಶೇಷ ಹೂವು ಮತ್ತು ವಸ್ತ್ರಗಳ ಅಲಂಕಾರದೊಂದಿಗೆ ಕುಂಭಕಳಸಗಳನ್ನು ತಲೆಯ ಹೊತ್ತು 5 ಕಿ.ಮೀ. ದೂರದ ಗಂಜಾಂನ ಗುಂಬಸ್‌ವರೆಗೆ ಧಾರ್ಮಿಕ ಇಮಾಮ್‌ಗಳು ಮೆರವಣಿಗೆಯಲ್ಲಿ ಸಾಗಿದರು.
ಪವಿತ್ರ ಗಂಧ ತೆರಳುವ ಮಾರ್ಗದುದ್ದಕ್ಕೂ ಮದರಸಾಗಳ ವಿದ್ಯಾರ್ಥಿಗಳು ಹಾಗೂ ಟಿಪ್ಪು ಅಭಿಮಾನಿಗಳು ಜಯಘೋಷ ಮೊಳಗಿಸಿ ಬ್ಯಾಂಡ್‌ಸೆಟ್ ಮತ್ತು ನಗಾರಿ ವಾದ್ಯಗಳಿಗೆ ಕುಣಿದು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ವಿವಿಧ ಜಾನಪದ ಕಲಾತಂಡಗಳು ಸರ್ವಾಲಂಕೃತಗೊಂಡಿದ್ದ ಕುದುರೆಗಳ ಸವಾರಿಯೂ ಈ ವೇಳೆ ಸಾಗಿತು.
ಟಿಪ್ಪು ವಕ್ಫ್ ಎಸ್ಟೇಟ್ ಅಧ್ಯಕ್ಷ ತನ್ವೀರ್ ಸೇಠ್ ಹಾಗೂ ಮಂಡ್ಯ ಜಿಲ್ಲಾಧ್ಯಕ್ಷ ಉಬೇದ್ ನೇತೃತ್ವದಲ್ಲಿ ಟಿಪ್ಪು ಸಮಾಧಿಗೆ ಹೂವಿನ ಚಾದರ ಹೊದಿಸಿ ಗಂಧೋತ್ಸವ ನಡೆಸಿದರು. ಹುತಾತ್ಮ ಟಿಪ್ಪು ಸುಲ್ತಾನರಿಗೆ ಖವ್ವಾಲಿ ಗೀತೆಗಳ ಮೂಲಕ ಪ್ರಾರ್ಥನೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ, ತುಮಕೂರು, ಚಿತ್ರದುರ್ಗ ಸೇರಿದಂತೆ ವಿವಿಧೆಡೆಯಿಂದ ಸಾವಿರಾರು ಜನರು ಆಗಮಿಸಿದ್ದರು. ಜನರಿಗೆ ಉದ್ಯಾನವನದಲ್ಲಿ ಅನ್ನಸಂರ್ತಪಣೆ ನಡೆಯಿತು.
ಪಟ್ಟಣದಲ್ಲಿ ಉರುಸ್ ಆಚರಣೆ ಹಿನ್ನೆಲೆ ಮಂಡ್ಯ ಜಿಲ್ಲಾ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ ನೇತೃತ್ವದಲ್ಲಿ ಇಬ್ಬರು ಡಿವೈಎಸ್ಪಿ, ನಾಲ್ವರು ಸಿಪಿಐ, 20 ಪಿಎಸ್‌ಐ ಹಾಗೂ 200 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿತ್ತು.
ವಿಡಿಯೋ ಚಿತ್ರೀಕರಣ ಸಹಿತ ಭದ್ರತೆಗೆ ಜತೆಗೆ ಸ್ಥಳದಲ್ಲಿ 2 ಡಿಆರ್ ಹಾಗೂ 1 ಕೆಎಸ್‌ಆರ್‌ಪಿ ವಾಹನಗಳನ್ನು ಹೊಂದಿದ್ದು, ಮೆರವಣಿಗೆ ಸಾಗುವ ಮಾರ್ಗ ಸೇರಿದಂತೆ ಪ್ರಮುಖ ವೃತ್ತಗಳು ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಎಚ್ಚರ ವಹಿಸಲಾಗಿತ್ತು.
ಟಿಪ್ಪು ಎಸ್ಟೇಟ್ ಅಧಿಕಾರಿ ಅಯೂಬ್, ಕಾರ್ಯದರ್ಶಿ ಇರ್ಫಾನ್ ಸೇರಿದಂತೆ ಶ್ರೀರಂಗಪಟ್ಟಣ ಹಾಗೂ ಗಂಜಾಂನ ಮುಸ್ಲಿಂ ಮುಖಂಡರು ಹಾಗೂ ಪುರಜನರು ಭಾಗವಹಿಸಿದ್ದರು.