ಜಿಲ್ಲೆ

ಯತ್ನಾಳ ವಿರುದ್ಧ ಕ್ರಮ ಜರುಗಿಸಿ

Kopala - Raveendra V K

ಕೊಪ್ಪಳ: ಟಿಪು$್ಪ ಸುಲ್ತಾನ ವಿರುದ್ಧ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ ಅವಹೇಳನಕಾರಿಯಾಗಿ ಮಾತನಾಡಿದನ್ನು ಖಂಡಿಸಿ ಶಹೀದ್​ ಅಸ್ಫಕ್​ ವುಲ್ಲಾ ಕಮಿಟಿ ಮತ್ತು ನವ ಜವಾನ್​ ಕಮಿಟಿಯ ನೇತೃತ್ವದಲ್ಲಿ ಮುಸ್ಲಿಮರು ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಮುಖಂಡ ನಾಸೀರ್​ ಹುಸೇನಿ ಮಾತನಾಡಿ, ಶಾಸಕ ಯತ್ನಾಳ ಮುಸಲ್ಮಾನರ ವಿರುದ್ಧ ಅವಹೇಳನವಾಗಿ ಮಾತನಾಡುತ್ತಾರೆ. ಕಳೆದೊಂದು ದಶಕದಿಂದ ನಮ್ಮನ್ನೇ ಟಾರ್ಗೇಟ್​ ಮಾಡಿ ಹೇಳಿಕೆ ನೀಡುತ್ತಿರುವುದು ಖಂಡನೀಯ. ನಿಂದನಾತ್ಮಕವಾಗಿ ಮಾತನಾಡುತ್ತಿರುವುದು ಖಂಡನೀಯ. ಅವರೊಬ್ಬ ನಾಲಾಯಕ್​ ಶಾಸಕ ಎಂದು ಟೀಕಿಸಿದರು.

ಸಲೀಂ ಖಾದ್ರಿ ಮಾತನಾಡಿ, ಬಿಜೆಪಿಗರು ಕೋಮು ಪ್ರಚೋದನಾ ಹೇಳಿಕೆ ನೀಡುವುದು ಮುಂದುವರೆಸಿದ್ದಾರೆ. ಒಂದು ಸಮುದಾಯ ಗುರಿಯಾಗಿಸಿ ಟೀಕಿಸುವುದು ಸಂವಿಧಾನ ವಿರೋಧಿ ನಡೆ. ಕೋಮು ಗಲಭೆ ಹೆಚ್ಚಲು ಕಾರಣವಾಗುತ್ತಿದೆ. ತಕ್ಷಣ ಯತ್ನಾಳರನ್ನ ಶಾಸಕ ಸ್ಥಾನದಿಂದ ವಜಾಗೊಳಿಸಿ ಕಾನೂನು ಕ್ರಮ ಕೈಗೊಳ್ಳಿ. ಇಲ್ಲದಿದ್ದರೆ ವಿಜಯಪುರ ಮುತ್ತಿಗೆ ಹಾಕಲಾಗುವುದೆಂದು ಎಚ್ಚರಿಸಿದರು.

ಪ್ರತಿಭಟನೆ ಬಳಿಕ ತಹಸೀಲ್ದಾರ್​ ವಿಠ್ಠಲ ಚೌಗಲಾ ಮೂಲಕ ರಾಜ್ಯ ಸಕಾರಕ್ಕೆ ಮನವಿ ಸಲ್ಲಿಸಲಾಯಿತು. ಪ್ರಮುಖರಾದ ಮೊಹಮದ್​ ಅಜರುದ್ದೀನ್​, ಫಾರೂಕ್​ ಅತ್ತಾರ, ತೌಸೀಫ್​ ಮೊಳೆಕೊಪ್ಪ, ಅರ್ಷದ ಷೇಕ್​, ಖಲೀಲ್​ ಡಿ.ಕೆ., ಇಮ್ರಾನ್​ ಅಧೋನಿ, ರಿಯಾಜ್​ ಮನಿಯರ್​ ಸೇರಿ ಇತರರಿದ್ದರು.