ಮಡಿಕೇರಿ:
ಇತಿಹಾಸದ ವಾಸ್ತವಗಳನ್ನು ಮರೆಯಬಾರದೆಂಬ ದೃಷ್ಟಿಯಲ್ಲಿ ಪಠ್ಯ ಪುಸ್ತಕಗಳಲ್ಲಿ ಇತಿಹಾಸದಲ್ಲಿ ಸಂಭವಿಸಿದ ನೈಜ ವಿಷಯಗಳನ್ನು ತಿಳಿಸುವುದು ಸೂಕ್ತ ಎಂದು ಖ್ಯಾತ ಲೇಖಕ ಡಾ. ವಿಕ್ರಂ ಸಂಪತ್ ಹೇಳಿದರು. ಗೋಣಿಕೊಪ್ಪಲುವಿನಲ್ಲಿ ಸೋಮವಾರ ನಡೆದ ಕಲಿಕೆ ಫೌಂಡೇಷನ್ ಪ್ರಕಟಿಸಿತ ತಮ್ಮ ರಚನೆಯ 'ಟಿಪ್ಪು ಸುಲ್ತಾನ್: ದಿ ಸಾಗಾ ಆಫ್ ಮೈಸೂರು ಇಂಟರಿಗ್ನಮ್' ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಇತಿಹಾಸದಲ್ಲಿ ಸಂಭವಿಸಿದ್ದ ಕರಾಳ ಘಟನೆಗಳು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಛಾಪೊತ್ತಬೇಕು. ಇತಿಹಾಸ ಪಠ್ಯ ಪುಸ್ತಕಗಳಲ್ಲಿ ವಾಸ್ತವತೆಯ ನೆಲೆಗಟ್ಟಿನಲ್ಲಿ ದಾಖಲಾಗಬೇಕು. ಯಾರದ್ದೋ ಅಣತಿ ಪಾಲಿಸಲು, ಯಾರನ್ನೋ ಸಂತೋಷಪಡಿಸಲು ಇತಿಹಾಸದ ವಿಚಾರಗಳು ಕೃತಿ ಅಥವಾ ಪಠ್ಯದಲ್ಲಿ ಪ್ರಕಟವಾಗಬಾರದು. ಇತಿಹಾಸದ ನೈಜಾಂಶಗಳನ್ನು ಗ್ರಹಿಸಿಕೊಂಡು ಮುಂದೆ ಸಾಗಿದರೆ ಭಾರತದ ಕನಸಾದ ವಿಕಸಿತ ಭಾರತದ ಗುರಿ ತಲುಪಲು ಸಾಧ್ಯ ಎಂದರು.
ಮೈಸೂರು ರಾಜಮನೆತನದ ಆಶ್ರಯ ಬಯಸಿ ಶ್ರೀರಂಗಪಟ್ಟಣಕ್ಕೆ ಬಂದು ನಂತರದ ದಿನಗಳಲ್ಲಿ ರಾಜರ ಸೈನ್ಯದ ನಾಯಕನಾಗಿದ್ದ ಹೈದರಾಲಿಗೆ ಕನಿಷ್ಠಪಕ್ಷ ಧರ್ಮ ಸಂರಕ್ಷಣೆಯ ಅರಿವಾದರೂ ಇತ್ತು. ಮೈಸೂರಿನಲ್ಲಿ ದಸರಾದಂಥ ನಾಡಹಬ್ಬವನ್ನು ಹೈದರಾಲಿ ಆಚರಿಸುತ್ತಿದ್ದ. ಆದರೆ ಇದೇ ಹೈದರಾಲಿಯ ಮಗ ಟಿಪ್ಪು ಸುಲ್ತಾನ್ ಕ್ರೂರತೆಗೆ ಉದಾಹರಣೆಯಂತಾದ ಎಂದು ತನ್ನ ಕೃತಿಯಲ್ಲಿ ಸಂಶೋಧನೆ ಸಹಿತ ದಾಖಲಿಸಲಾದ ಅಂಶಗಳ ಬಗ್ಗೆ ಮಾಹಿತಿ ನೀಡಿದರು. ಬ್ರಿಟಿಷರ ವಿರುದ್ಧ ಹೋರಾಡಲು ಟಿಪ್ಪು ಫ್ರಾನ್ಸ್ ನೆರವು ಪಡೆದಿದ್ದ. ಹೀಗಾಗಿ ಬ್ರಿಟಿಷರ ವಿರುದ್ದ ಭಾರತದ ಪರವಾಗಿ ಟಿಪ್ಪು ತಾನೋರ್ವನೇ ಹೋರಾಟ ಮಾಡಿದ ಎನ್ನಲಾಗದು ಎಂದು ಅಭಿಪ್ರಾಯಪಟ್ಟರು. ತನ್ನ ವಿರುದ್ಧ ಇರುವವರನ್ನು ಮತ್ತು ತನ್ನ ವಿರುದ್ಧ ಇದ್ದಾರೆ ಎಂದು ತನಗೆ ಯಾರಾದರೂ ಹೇಳಿದರೆ ಸಾಕು ಅಂಥ ವಿರೋಧಿಗಳನ್ನು ಸಂಹಾರ ಮಾಡುವುದೇ ಟಿಪ್ಪುವಿನ ಗುರಿಯಾಗಿತ್ತು. ಟಿಪ್ಪು ನಿಜಕ್ಕೂ ವೀರನಾಗಿದ್ದ. ಆದರೆ, ಆತನ ವೀರತನ ಒಳಿತಿಗಿಂತ ಕೆಡುಕಿಗೆ ಹೆಚ್ಚು ಬಳಕೆಯಾಗಿ ಟಿಪ್ಪುವನ್ನು ಕುಖ್ಯಾತನನ್ನಾಗಿಸಿತು.
ಕೊಡವರನ್ನು ದೇವಟ್ ಪರಂಬುವಿನಲ್ಲಿ ಮಾರಣ ಹೋಮ ಮಾಡಲಾದ ಘಟನೆಯ ಬಗ್ಗೆ ಉಲ್ಲೇಖಿಸಿದ ಡಾ. ವಿಕ್ರಂಸAಪತ್, 5 ರುಪಾಯಿ ಕೊಡುತ್ತೇನೆ, ಕೊಡವರ ತಲೆ ಬೇಕು ಎಂಬ ಟಿಪ್ಪುವಿನ ಆದೇಶದಂತೆ 700 ಕೊಡವರ ತಲೆಗಳನ್ನು ಕಡಿದುತರಲಾಗಿತ್ತು. ದೇವಟ್ ಪರಂಬುವಿನಲ್ಲಿ ವಾಸ್ತವವಾಗಿ ಎಷ್ಟು ಸಂಖ್ಯೆಯಲ್ಲಿ ಕೊಡವರನ್ನು ಹತ್ಯೆ ಮಾಡಲಾಯಿತು ಎಂಬ ಬಗ್ಗೆ ನಿಖರ ಸಂಖ್ಯೆ ದೊರಕುವುದು ಕಷ್ಟಸಾಧ್ಯ. ಈ ಘಟನೆಯ ಬಗ್ಗೆ ಉಲ್ಲೇಖಿಸಿರುವ ಪ್ರತೀಯೋರ್ವ ಇತಿಹಾಸಕಾರನೂ ಒಂದೊAದು ಸಂಖ್ಯೆಯನ್ನು ದಾಖಲಿಸಿದ್ದಾರೆ. ಇದು 40 ಸಾವಿರದಿಂದ 75 ಸಾವಿರದವರೆಗೂ ಇದೆ. ಆದರೆ ಘಟನೆ ನಡೆದ 1785 ರಲ್ಲಿ ಕೊಡಗಿನಲ್ಲಿ ಇದ್ದದ್ದೇ 1.15 ಲಕ್ಷ ಜನಸಂಖ್ಯೆ ಎಂಬ ಆಧಾರದಲ್ಲಿ ದೇವಟ್ ಪರಂಬುವಿನಲ್ಲಿ ಹತರಾದ ಕೊಡವರ ಸಂಖ್ಯೆ 45 ಸಾವಿರಗಳಷ್ಟಿದ್ದಿರಬಹುದು. ಆದರೆ ಸುಮಾರು 85 ಸಾವಿರ ಕೊಡವರು ದುಷ್ಪರಿಣಾಮಗಳನ್ನು ಎದುರಿಸಿರಬಹುದು.
ಹೈದರಾಲಿ 2 ಬಾರಿ ಮೈಸೂರು ಯುದ್ದದಲ್ಲಿ ಬ್ರಿಟಿಷರ ವಿರುದ್ಧ ಗೆಲವು ಸಾಧಿಸಿದ್ದರೆ ಟಿಪ್ಪುಸುಲ್ತಾನ್ ಎರಡು ಬಾರಿಯೂ ಮೈಸೂರು ಯುದ್ದದಲ್ಲಿ ಸೋಲನ್ನಪ್ಪಿದ್ದ. ಹೀಗಾಗಿ ಸ್ವಾತಂತ್ರ‍್ಯ ಹೋರಾಟದಲ್ಲಿ ಟಿಪ್ಪುವಿನ ಮಹತ್ವದ ಪಾತ್ರ ಯಾವುದೂ ಇಲ್ಲ.
ಇತಿಹಾಸಕಾರನಲ್ಲಿ ಸದಾ ಕಲಿಯುವ ಗುಣ ಇರಬೇಕೇ ವಿನಾ ತನ್ನಲ್ಲಿ ಎಲ್ಲಾ ದಾಖಲೆ ಇದೆ ಎಂಬ ಅಹಂಭಾವ ಸಲ್ಲದು. ಭಾರತದಲ್ಲಿ ಇತಿಹಾಸ ದಾಖಲಿಸಬೇಕೆಂದರೆ ಸಾಕಷ್ಟು ತಾಳ್ಮೆ ಇರಲೇಬೇಕು. ಯಾಕೆಂದರೆ, ಇತಿಹಾಸದಲ್ಲಿನ ಸತ್ಯದ ಅಂಶಗಳು ತನ್ನನ್ನು ಬಂಧಿಸಿರುವ ಸರಪಳಿಗಳಿಂದ ಬಿಡಿಸಿಕೊಂಡು ಬರುವಷ್ಟರಲ್ಲಿಯೇ ಸುಳ್ಳು ಎಂಬುದು ಲೋಕಕ್ಕೆ ಮೂರುಸುತ್ತು ಬಂದಿರುತ್ತದೆ ಎಂದರು.
ಕೊಡಗು ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ ಕೊಡಗಿನ ಸಂಸ್ಕೃತಿ, ಸಾಂಸ್ಕೃತಿಕ ಶ್ರೀಮಂತಿಕೆಯೇ ಕೊಡಗಿನ ಪರಿಚಯ ಮಾಡಿಕೊಡುತ್ತದೆ. ಟಿಪ್ಪು ಕಾಲದ ಕರಾಳತೆಯನ್ನು ಈ ಕೃತಿಯಲ್ಲಿ ಹೇಳಲಾಗಿದೆ. ಕೊಡಗಿನ ಸಮಗ್ರ ಇತಿಹಾಸ ಬಿಂಬಿಸುವ ದಾಖಲೆಯ ಆಧಾರದ ಕೃತಿಯೂ ಅಗತ್ಯವಾಗಿದೆ ಎಂದರಲ್ಲದೇ, ವಿಕಸಿತ ಭಾರತದ ಪರಿಕಲ್ಪನೆಯಲ್ಲಿ ಕೊಡಗನ್ನು ಅಭಿವೃದ್ಧಿಪಡಿಸಲು ಎಲ್ಲರೂ ಕೈಜೋಡಿಸಬೇಕು ಎಂದರು.
ತ್ರಿಭಾಷಾ ಸಾಹಿತಿ ಬಾಚರಣಿಯಂಡ ಅಪ್ಪಣ್ಣ, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಸೇರಿದಂತೆ ಕೊಡಗಿನ ಅನೇಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಮದ್ರಿರ ಕಿಶೋರ್ ಖಂಖನಾದ ಮೊಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಗ್ರಂಥ ಕಾರ್ಯಪ್ಪ ಪ್ರಾರ್ಥಿಸಿದರು. ಮೂಕೊಂಡ ನಿತಿನ್ ಕುಶಾಲಪ್ಪ ಲೇಖಕರೊಂದಿಗೆ ಸಂವಾದ ನಡೆಸಿದ ಕಾರ್ಯಕ್ರಮದಲ್ಲಿ ಉದ್ಯಮಿ, ಲಘು ಉದ್ಯೋಗ ಭಾರತಿ ಮೈಸೂರು ವಿಭಾಗದ ಪ್ರಮುಖರೂ ಆದಛಾಯಾ ನಂಜಪ್ಪ ವಂದಿಸಿದರು. ಕಳ್ಳಿಚಂಡ ರೇಷ್ಮಾ ಚಂಗಪ್ಪ ನಿರೂಪಿಸಿದರು.