ಚಿಕ್ಕಬಳ್ಳಾಪುರ: ಚಿಂತಾಮಣಿ ನಗರದಲ್ಲಿ ಜಲ್ಲಿ ತುಂಬಿದ್ದ ಟಿಪ್ಪರ್ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಹೋಟೆಲ್ಗೆ ನುಗ್ಗಿದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಒಬ್ಬರು ಗಾಯಗೊಂಡಿದ್ದಾರೆ. ಹೋಟೆಲ್ನಲ್ಲಿದ್ದ ಗ್ರಾಹಕರು ಹಾಗೂ ಇತರ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ.
ಹೋಟೆಲ್ ಮಾಲೀಕ ಚಿಂತಾಮಣಿ ತಾಲೂಕಿನ ಮಾಡಿಕೆರೆ ಗ್ರಾಮದ ಶಿವಾನಂದ (60) ಮತ್ತು ಅಡುಗೆಭಟ್ಟ ಕುಮಾರ್ (50) ಮೃತಪಟ್ಟವರು.
ಚಿಂತಾಮಣಿಯಿಂದ ಕೋಲಾರಕ್ಕೆ ಹೋಗುವ ಮಾರ್ಗದಲ್ಲಿ ಬೆಳಗ್ಗೆ 9 ಗಂಟೆ ಸುಮಾರಿಗೆ ಜಲ್ಲಿ ತುಂಬಿದ್ದ ಟಿಪ್ಪರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿರುವ ಶ್ರೀ ದರ್ಶಿನಿ ಫಾಸ್ಟ್ಪುಡ್ ಹೋಟೆಲ್ಗೆ ನುಗ್ಗಿದೆ. ಕ್ಯಾಷ್ ಕೌಂಟರ್ನಲ್ಲಿ ಕುಳಿತಿದ್ದ ಮಾಲೀಕ ಮತ್ತು ಅವರ ಸಮೀಪದಲ್ಲಿಯೇ ತರಕಾರಿ ಕತ್ತರಿಸುತ್ತಿದ್ದ ಅಡುಗೆ ಭಟ್ಟರಿಗೆ ಗುದ್ದಿ ಮಗುಚಿ ಬಿದ್ದಿದೆ. ಶಿವಾನಂದ ಸ್ಥಳದಲ್ಲೇ ಮೃತಪಟ್ಟರೆ, ಹಣೆಗೆ ತೀವ್ರ ಪೆಟ್ಟು ಬಿದ್ದಿದ್ದ ಕುಮಾರ್ ಕೋಲಾರ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ವಿನಾಯಕ ನಗರದ ಶ್ರೀನಿವಾಸಬಾಬು ಎಂಬುವರ ಕಾಲಿಗೆ ಪೆಟ್ಟು ಬಿದ್ದಿದ್ದು, ಸ್ಥಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ ಲಾರಿ ಚಾಲಕ ಪರಾರಿಯಾಗಿದ್ದಾನೆ. ಕ್ರೇನ್ ತರಿಸಿ ಟಿಪ್ಪರ್ ಲಾರಿಯನ್ನು ತೆರವುಗೊಳಿಸಲಾಯಿತು.
ಹೋಟೆಲ್ಗೆ ಜಿಲ್ಲಾ ರಕ್ಷಣಾಧಿಕಾರಿ ಕುಶಾಲ್ ಚೌಕ್ಸೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಟಿಪ್ಪರ್ ವಾಹನ ಶ್ರೀನಿವಾಸಪುರದವರಿಗೆ ಸೇರಿದ್ದು, ಚಾಲಕ ಶ್ರೀನಿವಾಸಪುರದ ತಿರುಪತಿ ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ ಎಂದು ತಿಳಿಸಿದರು.