ಜಿಲ್ಲೆ

ಅತಿ ವೇಗದಲ್ಲಿ ಟಿಪ್ಪರ್​ ಚಾಲನೆ: ದ್ವಿಚಕ್ರ ವಾಹನ ಸವಾರರು, ಜನರಿಗೆ ಆತಂಕ

Avinash R

ಮೂಲ್ಕಿ: ನಿಡ್ಡೋಡಿ ಮುಚ್ಚೂರು ಕಡೆಯಿಂದ ಮೂಲ್ಕಿಗೆ ಟಿಪ್ಪರ್​ಗಳಲ್ಲಿ ಎಗ್ಗಿಲ್ಲದೆ ಕೆಂಪು ಹಾಗೂ ಕಪು$್ಪಕಲ್ಲುಗಳ ಹಾಗೂ ಜಲ್ಲಿ ಮತ್ತು ಮರಳು ಸಾಗಾಟ ನಡೆಯುತ್ತಿದ್ದು, ವೇಗವಾಗಿ ಸಾಗುವ ಗಾಡಿಗಳಿಂದ ರಸ್ತೆ ಸಂಚಾರ ಜನ ಸಾಮಾನ್ಯರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.

ನಿಡ್ಡೋಡಿ ಮುಚ್ಚೂರಿನಿಂದ ಕಿನ್ನಿಗೋಳಿ & ಮೂಲ್ಕಿ ರಾಜ್ಯ ಹೆದ್ದಾರಿ ಮೂಲಕ ಉಡುಪಿ ಜಿಲ್ಲೆಗೆ ನಿಯಮಗಳನ್ನು ಗಾಳಿಗೆ ತೂರಿ ರ್ಟಪಾಲುಗಳನ್ನು ಹಾಕದೆ ಕಲ್ಲುಸಾಗಾಟ ಅವ್ಯಾಹತವಾಗಿ ನಡೆಯುತ್ತಿದ್ದು, ಅತಿ ವೇಗದಿಂದ ಸಾಗುವ ಟಿಪ್ಪರ್​ಗಳಿಂದ ಹಾರುವ ಮಣ್ಣು ಧೂಳು ಹಾಗೂ ಚಿಕ್ಕ ಕಲ್ಲುಗಳಿಂದ ದ್ವಿಚಕ್ರ ವಾಹನಗಳು ಹಾಗೂ ಪಾದಚಾರಿಗಳು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಸಬೇಕಾದ ಪರಿಸ್ಥಿತಿ ಉಂಟಾಗಿದೆ.
ಅದರಲ್ಲೂ ಬೆಳಗಿನ ಹೊತ್ತು ಅತಿ ವೇಗದಿಂದ ಚಲಿಸುವ ಟಿಪ್ಪರ್​ ವಾಹನದಿಂದ ದ್ವಿಚಕ್ರ ವಾಹನ ಚಾಲಕರು ಹಾಗೂ ಮುಂಜಾನೆ ವಾಕಿಂಗ್​ ಹೋಗುವವರು ಭಯಭೀತರಾಗಿದ್ದಾರೆ

ಈ ಬಗ್ಗೆ ಟ್ರಾಫಿಕ್​ ಪೊಲೀಸ್​ ಇಲಾಖೆಗೆ ಅನೇಕ ಬಾರಿ ದೂರು ನೀಡಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಅತಿ ವೇಗದಿಂದ ಸಾಗುವ ಟಿಪ್ಪರ್​ಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.