ವಿಟ್ಲ: ಅಹಿತಕರ ಘಟನೆಗಳು ಹೆಚ್ಚಾಗುತ್ತಿರುವುದನ್ನು ಮನಗಂಡ ಪೊಲೀಸ್ ಇಲಾಖೆ ನಿಯಂತ್ರಣಕ್ಕೆ ಮುಂದಾಗಿದ್ದು, ಚೆಕ್‌ಪೋಸ್ಟ್‌ಗಳನ್ನು ಬಳಪಡಿಸುವ ಕಾರ್ಯಕ್ಕೆ ಮುಂದಾಗಿದೆ. ವಾಹನ ತಪಾಸಣೆ ಸಂದರ್ಭ ಟಿಂಟ್ ಅಳವಡಿಕೆ ಕಂಡುಬಂದಲ್ಲಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಗಡಿಭಾಗದಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದ್ದರೂ ಕೆಲವು ಸಮಯದಿಂದ ಕೆಲವು ಪೊಲೀಸರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಈಗ ಜಿಲ್ಲೆಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳ ಮುಂಜಾಗ್ರತೆ ದೃಷ್ಟಿಯಿಂದ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಸಾರಡ್ಕ, ಸಾಲೆತ್ತೂರು, ಕನ್ಯಾನ ಸೇರಿ ವಿವಿಧ ಚೆಕ್‌ಪೋಸ್ಟ್‌ಗಳಲ್ಲಿ ವಾಹನಗಳ ತಪಾಸಣೆ ಪ್ರಾರಂಭವಾಗಿದೆ.
ವಾಹನಗಳಲ್ಲಿ ಅನುಮಾನಾಸ್ಪದವಾಗಿ ಓಡಾಡುವ ವ್ಯಕ್ತಿಗಳು ಕಂಡುಬಂದಲ್ಲಿ ಅವರ ಚಲನವಲನಗಳ ಮೇಲೆ ನಿಗಾ ಇಡುವ ನಿಟ್ಟಿನಲ್ಲೂ ಕ್ರಮ ಕೈಗೊಳ್ಳಲಾಗಿದೆ. ನಂಬರ್ ಪ್ಲೇಟ್ ಮರೆಮಾಚಿ ಹೋಗುವ ವಾಹನ ಹಾಗೂ ಅಕ್ರಮವಾಗಿ ಬಳಸುತ್ತಿರುವ ಕೆಂಪು ನೀಲಿ ದೀಪದ ಬಗ್ಗೆ ಕಾರ್ಯಾಚರಣೆ ನಡೆಯಬೇಕೆಂಬ ಆಗ್ರಹ ಕೇಳಿಬರುತ್ತಿದೆ.
ನಿರಂತರ ತಪಾಸಣೆ ನಡೆಯಲಿ!
ಕೋಮು ಸೂಕ್ಷ್ಮ ಜಿಲ್ಲೆಯಲ್ಲಿ ದುರ್ಘಟನೆಗಳು ನಡೆದ ಬಳಿಕ ಇಲಾಖೆಗಳು ವಿವಿಧ ಕಾರ್ಯಾಚರಣೆಗೆ ಮುಂದಾಗುತ್ತದೆ. ಇದರ ಬದಲು ಕರ್ತವ್ಯಕ್ಕೆ ನಿಯೋಜನೆಯಾದ ಅಽಕಾರಿಗಳು ನಿರಂತರ ತಪಾಸಣೆ ನಡೆಸಿದರೆ ಹಾಗೂ ವಾಹನಗಳ ಓಡಾಟದ ಮಾಹಿತಿ ದಾಖಲಿಸಿಕೊಳ್ಳುವ ಕಾರ್ಯ ಮಾಡಿದರೆ ಘಟನೆಗಳನ್ನು ನಡೆಯದಂತೆ ಮಾಡಬಹುದು ಎನ್ನುತ್ತಾರೆ ಸಾರ್ವಜನಿಕರು.