ಬೆಂಗಳೂರು: ವಿದ್ಯಾರಣ್ಯಪುರದ ತಿಂಡ್ಲು ಶ್ರೀಸತ್ಯಮೂರ್ತಿ ಶನೈಶ್ಚರಸ್ವಾಮಿ ದೇವಾಲಯದ 50ನೇ ವಾರ್ಷಿಕೋತ್ಸವ ಹಾಗೂ ಕಾರ್ತೀಕ ದೀಪೋತ್ಸವ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ದೊರೆಯಿತು.
ಗುರುವಾರದಿಂದಲೇ ಆರಂಭವಾಗಿರುವ ವಾರ್ಷಿಕ ಜಾತ್ರಾ ಮಹೋತ್ಸವವು ಸೋಮವಾರದವರೆಗೆ 5 ದಿನಗಳ ಕಾಲ ನಡೆಯಲಿದೆ. ನೂತನ ಅನ್ನದಾಸೋಹ ಪ್ರಸಾದ ನಿಲಯದ ಶುದ್ಧೀಕರಣಕ್ಕಾಗಿ ಅನ್ನಪೂರ್ಣೇಶ್ವರಿ ಹೋಮ ಮತ್ತು ಮಹಾಪೂಜೆ ನೆರವೇರಿತು. ಶುಕ್ರವಾರ ಚಾಮುಂಡೇಶ್ವರಿ ಅಮ್ಮನವರಿಗೆ ವಿಶೇಷ ಪಂಚಾಮೃತ ಅಭಿಷೇಕ ಹಾಗೂ ಮಹಾಪೂಜೆ ಮತ್ತು ದೀಪೋತ್ಸವ ನಡೆಯಲಿದೆ.
ಕಡೇ ಕಾರ್ತೀಕ ಶನಿವಾರದಂದು ಬೆಳಗ್ಗೆ ಶನೈಶ್ಚರ ಸ್ವಾಮಿಗೆ 108 ಲೀಟರ್ ಹಾಲು, 108 ಎಳನೀರು ಹಾಗೂ ಗಂಧ, ಕುಂಕುಮ, ಅರಿಶಿಣ ಸೇರಿ ವಿವಿಧ ಸುಗಂಧದ್ರವ್ಯಗಳಿಂದ ವಿಶೇಷ ಅಭಿಷೇಕ ನಡೆಯಲಿದೆ. ನಂತರ ಗಣಪತಿ ಹೋಮ, ನವಗ್ರಹ ಹೋಮ, ಸುದರ್ಶನ ಹೋಮ, ಮೃತ್ಯುಂಜಯ ಹೋಮ ನಡೆಸಲಾಗುತ್ತದೆ. ಹೋಮದ ಪೂರ್ಣಾಹುತಿ ನಂತರ ನೂತನವಾಗಿ ನಿರ್ಮಿಸಿರುವ ಅನ್ನದಾನ ಪ್ರಸಾದ ನಿಲಯದ ಉದ್ಘಾಟನೆ ನೆರವೇರಲಿದ್ದು, ಪ್ರಮುಖ ಬೀದಿಗಳಲ್ಲಿ ಶನೈಶ್ಚರ ಸ್ವಾಮಿಯ ಉತ್ಸವ, ಭಕ್ತಾದಿಗಳಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ. ಸಂಜೆ ಸಹಸ್ರ ದೀಪೋತ್ಸವ ನಡೆಯಲಿದೆ.
ಭಾನುವಾರ ಆದಿತ್ಯಾದಿ ನವಗ್ರಹಗಳಿಗೆ ಮತ್ತು ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ನಡೆಯಲಿದ್ದು, ಕೊನೇ ಕಾರ್ತೀಕ ಸೋಮವಾರದಂದು ಭೋಗನಂದೀಶ್ವರ ಸ್ವಾಮಿಗೆ ವಿಭೂತಿ ಅಭಿಷೇಕ, 12 ಸಾವಿರ ರುದ್ರಾಕ್ಷಿ ಅಲಂಕಾರದೊಂದಿಗೆ ಮಹಾಪೂಜೆ, ಸಂಜೆ ದೀಪೋತ್ಸವ ನಡೆಯಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ದೇವಾಲಯದ ಧರ್ಮದರ್ಶಿಗಳಾದ ಡಾ.ಕೆಂಪಣ್ಣ ಅಪ್ಪಾಜಿ ವಿನಂತಿಸಿದ್ದಾರೆ.