ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಕೊಳ್ಳೇಗಾಲ ತಾಲೂಕು ಘಟಕಕ್ಕೆ ನೂತನ ಅಧ್ಯಕ್ಷರಾಗಿ ತಿಮ್ಮರಾಜಿಪುರ ಪುಟ್ಟಣ್ಣ ಅವಿರೋಧ ವಾಗಿ ಸೋಮವಾರ ಆಯ್ಕೆಯಾದರು. ಆಲಹಳ್ಳಿ ಮಹದೇವಪ್ರಸಾದ್, ಮಧುವನಹಳ್ಳಿ ನಂಜುಂಡಸ್ವಾಮಿ, ಬಿ.ತೋಟೇಶ್, ಬಸವರಾಜು, ಬಸಪ್ಪನದೊಡ್ಡಿ ಬಸವರಾಜು ಇದ್ದರು. 
ಜಿಲ್ಲೆ

ಅಧ್ಯಕ್ಷರಾಗಿ ತಿಮ್ಮರಾಜಿಪುರ ಪುಟ್ಟಣ್ಣ ಅವಿರೋಧ ಆಯ್ಕೆ

ಕೊಳ್ಳೇಗಾಲ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಕೊಳ್ಳೇಗಾಲ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ತಿಮ್ಮರಾಜಿಪುರ ಪುಟ್ಟಣ್ಣ ಅವಿರೋಧ ವಾಗಿ ಸೋಮವಾರ ಆಯ್ಕೆಯಾಗಿದ್ದಾರೆ.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯಲ್ಲಿರುವ ಶ್ರೀ ಗುರುಮಲ್ಲೇಶ್ವರ ಕಾಂಪ್ಲೆಕ್ಸ್‌ನಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಪುಟ್ಟಣ್ಣ ಅವರ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಶಿವಮಲ್ಲಪ್ಪ ಘೋಷಿಸಿದರು.

ನಿರ್ಗಮಿತ ಅಧ್ಯಕ್ಷ ಆಲಹಳ್ಳಿ ಮಹದೇವಪ್ರಸಾದ್, ಚಾಮುಲ್ ನಿರ್ದೇಶಕ ಮಧುವನಹಳ್ಳಿ ನಂಜುಂಡಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್, ನಿರ್ಗಮಿತ ಕಾರ್ಯದರ್ಶಿ ಬಸವರಾಜು, ಮುಖಂಡರಾದ ಬಸಪ್ಪನದೊಡ್ಡಿ ಬಸವರಾಜು, ಮುಳ್ಳೂರು ಇಂದ್ರೇಶ್, ಬೂದಿತಿಟ್ಟು ಗುರುಸ್ವಾಮಿ, ತೋಟದ ಗಿರೀಶ್, ಮಲ್ಲೇಶಪ್ಪ, ಗುಂಡೇಗಾಲ ಬಸಪ್ಪ, ಮಂಜುನಾಥ್, ಬಿ.ವೈ.ವಿಜಯೇಂದ್ರ ಅಭಿಮಾನಿ ಬಳಗದ ತಾಲೂಕು ಅಧ್ಯಕ್ಷ ಬೃಂಗೇಶ್ ಕಟ್ಟೆ, ಇನ್ನಿತರರ ಸಮ್ಮುಖದಲ್ಲಿ ಪುಟ್ಟಣ್ಣ ಆಯ್ಕೆಗೆ ಒಮ್ಮತ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರ ಹೆಸರು ಘೋಷಿಸಲಾಯಿತು.

ಈ ವೇಳೆ ಸಂಘದ ಮುಖಂಡರು ನೂತನ ಅಧ್ಯಕ್ಷರಿಗೆ ಹಾರ, ಶಾಲು ಹೊದಿಸಿ ಗೌರವಿಸಿ ಸಿಹಿ ತಿನ್ನಿಸುವ ಮೂಲಕ ಸಂಭ್ರಮಾಚರಣೆ ಮಾಡಿದರು.

ನೂತನ ಅಧ್ಯಕ್ಷ ತಿಮ್ಮರಾಜೀಪುರ ಪುಟ್ಟಣ್ಣ ಮಾತನಾಡಿ, 50 ವರ್ಷದಿಂದ ರಾಜಕೀಯ ಜೀವನದಲ್ಲಿ ತೊಡಗಿಸಿಕೊಂಡು ಜನಸಾಮಾನ್ಯರ ಸೇವೆ ಮಾಡಿದ್ದೇವೆ. ಇಂದು ನಮ್ಮ ಸಮಾಜದಲ್ಲಿ ಹಿರಿಯನಾದ ನನ್ನನ್ನು ಸಮಾಜದ ಮುಖಂಡರೆಲ್ಲರೂ ಒಟ್ಟಾಗಿ ಆಯ್ಕೆ ಮಾಡಿರುವುದು ಸಂತಸ ತಂದಿದೆ. ಈ ಅವಕಾಶ ನೀಡಿದ್ದಕ್ಕೆ ನನ್ನ ಸಂಘದ ನಿರ್ಗಮಿತ ಅಧ್ಯಕ್ಷರು ಕಾರ್ಯದರ್ಶಿ ಹಾಗೂ ನಿರ್ದೇ ಶಕರುಗಳಿಗೆ ಹೃದಯ ಪೂರ್ವಕ ಧನ್ಯವಾದ ತಿಳಿಸುತ್ತೇನೆ ಎಂದರು.

ಸಮುದಾಯ ಸಂಘಟನೆ, ಅಭಿವೃದ್ಧಿ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ಕೊಳ್ಳೇಗಾಲ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾ ಸಭಾದ ಕೊಳ್ಳೇಗಾಲ ತಾಲೂಕು ಘಟಕ ಕಚೇರಿಯಲ್ಲಿ ಇಲ್ಲ. ಇದರ ನಿರ್ಮಾಣಕ್ಕೆ ಆದ್ಯತೆ ನೀಡುತ್ತೇನೆ. ಹಾಗೇ ಸಮಾಜದ ಮಕ್ಕಳಿಗೆ ವಿದ್ಯಾರ್ಥಿನಿಲಯವನ್ನು ನಿರ್ಮಿಸಲು ಸಮುದಾಯದ ಮುಖಂಡರ ಸಹಕಾರ ಪಡೆದು ಶ್ರಮಿಸುತ್ತೇನೆ ಎಂದರು. ನಗರಸಭೆ ಸದಸ್ಯ ಜಿ.ಪಿ.ಶಿವಕುಮಾರ್, ಅಚ್ಗಾಲ್ ಮಹದೇವಸ್ವಾಮಿ, ಬಸವರಾಜು ಇನ್ನಿತರಿದ್ದರು.