ಮಡಿಕೇರಿ:
ವೀರ ಸೇನಾನಿ, ಪದ್ಮಭೂಷಣ ಜನರಲ್ ಕೆ.ಎಸ್.ತಿಮ್ಮಯ್ಯ ಅವರ ೧೧೭ನೇ ಹುಟ್ಟು ಹಬ್ಬವನ್ನು ಜಿಲ್ಲಾಡಳಿತ ವತಿಯಿಂದ ಸರಳವಾಗಿ ಶುಕ್ರವಾರ ಆಚರಿಸಲಾಯಿತು. ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೋರಂನ ಸಂಚಾಲಕ ಮೇಜರ್(ನಿವೃತ್ತ) ಬಿದ್ದಂಡ ನಂಜಪ್ಪ, ಮಡಿಕೇರಿ ತಾಲ್ಲೂಕು ಜಾನಪದ ಪರಿಷತ್ತು ಅಧ್ಯಕ್ಷ ಅನಿಲ್ ಎಚ್.ಟಿ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ, ಗೌಡಂಡ ಸುಬೇದಾರ್ ತಿಮ್ಮಯ್ಯ, ಇತರರು ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಗೌರವ ನಮನ ಸಲ್ಲಿಸಿದರು.
ಬಳಿಕ ಮಾತನಾಡಿದ ಬಿದ್ದಂಡ ನಂಜಪ್ಪ ಅಮರ ಸೇನಾನಿ ಜನರಲ್ ತಿಮ್ಮಯ್ಯ ಹುಟ್ಟಿದ ಮನೆ ಸನ್ನಿಸೈಡ್ ’ದೇವರ ಮನೆ’ ಇದ್ದಂತೆ, ದೇವಸ್ಥಾನವೆಂದು ಭಾವಿಸುತ್ತೇವೆ.
ಜನರಲ್ ತಿಮ್ಮಯ್ಯ ಅವರು ಭಾರತೀಯ ಸೇನೆಯಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಭಾರತೀಯ ಸೇನೆಯನ್ನು ಬಲಿಷ್ಠಗೊಳಿಸುವಲ್ಲಿ ಶ್ರಮಿಸಿದ್ದರು ಎಂದು ಅವರು ಸ್ಮರಿಸಿದರು.
ಜನರಲ್ ತಿಮ್ಮಯ್ಯ ಅವರ ಗೌರವರಾರ್ಥ ಸೈಪ್ರಸ್ ದೇಶವು ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದೆ. ಹಾಗೆಯೇ ಇತ್ತೀಚೆಗೆ ಕೊಲ್ಕತ್ತದಲ್ಲೂ ಸಹ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿರುವುದು ವಿಶೇಷವಾಗಿದೆ ಎಂದರು. ಜನರಲ್ ತಿಮ್ಮಯ್ಯ ಸ್ಮಾರಕ ಭವನವನ್ನು ’ಜೈಸಲ್ಮೇರ್‌ನ ರಕ್ಷಣಾ ಸಂಗ್ರಹಾಲಯ’ ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕಿದೆ ಎಂದು ಬಿದ್ದಂಡ ನಂಜಪ್ಪ ಕೋರಿದರು.
ವಿದ್ಯಾರ್ಥಿನಿ ಶ್ರೀಶಾ ಮಾತನಾಡಿ ಜ. ತಿಮ್ಮಯ್ಯ ಅವರು ಸ್ವಾತಂತ್ರ್ಯ ಭಾರತದ ಸೇನಾ ದಂಡನಾಯಕರಾಗಿ ಸೈನಿಕರ ನೆಚ್ಚಿನ ಸೇನಾನಿಯಾಗಿದ್ದರು.
ಜನರಲ್ ಕೆ.ಎಸ್.ತಿಮ್ಮಯ್ಯ ಅವರು ೧೯೦೬ ರ ಮಾರ್ಚ್, ೩೧ ರಂದು ಕೊಡಂದೇರ ಕುಟುಂಬದ ತಿಮ್ಮಯ್ಯ ಮತ್ತು ಸೀತಮ್ಮ ದಂಪತಿಗೆ ಜನಿಸಿದರು. ಜನರಲ್ ತಿಮ್ಮಯ್ಯ ಅವರ ಮೂಲ ಹೆಸರು ಸುಬ್ಬಯ್ಯ ಆಗಿದೆ. ಬೆಂಗಳೂರಿನ ಬಿಷಪ್ ಕಾಟನ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ತಿಮ್ಮಯ್ಯ ಅವರು ಕ್ರೀಡಾಕೂಟದಲ್ಲಿ ಕ್ರಿಯಾಶೀಲರಾಗಿದ್ದರು. ಸೈನಿಕರ ನಾಡು ಎಂಬ ಕೀರ್ತಿ ಹೊಂದಿರುವ ಕೊಡಗಿನ ನೆಲದಲ್ಲಿ ತಿಮ್ಮಯ್ಯ ಮ್ಯೂಸಿಯಂ ರೂಪುಗೊಂಡಿರುವುದು ಭಾರತಕ್ಕೆ ಹೆಮ್ಮೆ ಎಂದು ಹೇಳಿದರು.
ಪೊಲೀಸ್ ವೃತ್ತ ನಿರೀಕ್ಷಕ ಶಿವಶಂಕರ, ಪೊಲೀಸ್ ಉಪ ನಿರೀಕ್ಷಕ ಶ್ರೀನಿವಾಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಣಜೂರು ಮಂಜುನಾಥ್ ಇತರರು ಇದ್ದರು.
ಸೇನಾ ಸ್ಮರಣಿಕೆ ಹಸ್ತಾಂತರ: ಭಾರತೀಯ ಸೇನಾ ದಕ್ಷಿಣ ವಲಯದ ಮುಖ್ಯಸ್ಥ ಲೆಪ್ಟಿನೆಂಟ್ ಜನರಲ್ ಎ.ಕೆ.ಸಿಂಗ್ ಅವರು ಇತ್ತೀಚೆಗೆ ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗೌರವ ಪೂರ್ವಕವಾಗಿ ನೀಡಲಾಗಿದ್ದ ’ಸೇನಾ ಸ್ಮರಣಿಕೆ’ಯನ್ನು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೋರಂ ಸಂಚಾಲಕರಾದ ಮೇಜರ್(ನಿವೃತ್ತ) ಬಿದ್ದಂಡ ನಂಜಪ್ಪ ಅವರು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರಿಗೆ ಹಸ್ತಾಂತರಿಸಿದರು.