ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದಲ್ಲಿ ಸುರಿದ ಮಳೆಯಿಂದ ಸಾಕಷ್ಟು ರಸ್ತೆಗಳು ಹಾಳಾಗಿವೆ. ಕೆಲ ಕಡೆಗಳಲ್ಲಿ ರಸ್ತೆಯಲ್ಲಿ ಗುಂಡಿ ಇವೆಯೋ? ಅಥವಾ ಗುಂಡಿಯಲ್ಲೇ ರಸ್ತೆ ಇದೆಯೇ ಎಂಬುದೇ ತಿಳಿಯದಂತಾಗಿದೆ. ಆದಾಗ್ಯೂ ಪಾಲಿಕೆ ಮಾತ್ರ ತ್ವರಿತಗತಿಯಲ್ಲಿ ರಸ್ತೆಗಳ ದುರಸ್ತಿ ಕಾರ್ಯ ನಡೆಸುವಲ್ಲಿ ಹಿಂದೇಟು ಹಾಕುತ್ತಿದೆ.
ನಗರದ ಬಹುತೇಕ ಬಡಾವಣೆಗಳ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ಇನ್ನು ಕೆಲವೆಡೆ ರಸ್ತೆಗಳೇ ಇಲ್ಲದೆ ಮಣ್ಣಿನ ದಾರಿಯಲ್ಲೇ ಜನರು ಓಡಾಡುವಂತಹ ಸ್ಥಿತಿ ಇದೆ. ಕೆಲ ದಿನಗಳಿಂದ ಮಳೆ ಬಿಡುವು ನೀಡಿದ್ದಲ್ಲದೆ, ಮಳೆಗಾಲವು ಮುಗಿಯುತ್ತಿದೆ. ಆದರೂ ಪಾಲಿಕೆ ಅಧಿಕಾರಿಗಳು ಮಾತ್ರ ಗುಂಡಿ ಮುಚ್ಚುವ ಕಾರ್ಯ ಆರಂಭಿಸಿಲ್ಲ.
ರಸ್ತೆಗಳ ದುರಸ್ತಿ ಕಾರ್ಯಕ್ಕೆ ಮೊದಲ ಹಂತವಾಗಿ ಸುಮಾರು 1.5 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಅಧಿಕಾರಿಗಳು ಹೇಳುತ್ತಲೇ ಇದ್ದಾರೆ. ಆದರೆ ದುರಸ್ತಿ ಕಾರ್ಯ ಮಾತ್ರ ಆರಂಭವಾಗಿಲ್ಲ. ಇನ್ನೂ ಕೆಲ ದಿನಗಳಾದರೆ ರಸ್ತೆಗಳು ಇನ್ನಷ್ಟು ಹಾಳಾಗಿ ಸಂಪೂರ್ಣ ಹೊಸ ರಸ್ತೆ ಮಾಡುವಂತಹ ಸ್ಥಿತಿ ಬರಲಿದೆ. ಆಗ ಸಾಕಷ್ಟು ಹಣವಿಲ್ಲ ಎಂದು ಹೇಳಿ ಕಾಲ ಹರಣ ಮಾಡುವ ಅಧಿಕಾರಿಗಳು, ಹದಗೆಟ್ಟ ರಸ್ತೆಯಲ್ಲೇ ಜನ ಸಂಚಾರ ಮಾಡುವ ಭಾಗ್ಯ ಕಲ್ಪಿಸುವುದು ನಿಶ್ವಿತ ಎಂಬ ಲಕ್ಷಣಗಳು ಕಾಣುತ್ತಿವೆ.
ತಪೋವನ, ಹಾಶ್ಮಿನಗರ, ಮೆಹಬೂಬನಗರ, ಗೌಸಿಯಾ ಟೌನ್, ಬನಶಂಕರಿ ಬಡಾವಣೆ ಸೇರಿ ಇನ್ನೂ ಕೆಲಕಡೆಗಳಲ್ಲಿ ರಸ್ತೆಗಳೇ ಇಲ್ಲ. ಅಲ್ಲಿನ ಮಣ್ಣಿನ ರಸ್ತೆಗಳು ಮಳೆಗೆ ಕೆಸರು ಗದ್ದೆಯಂತಾಗಿವೆ. ಬಡಾವಣೆಗಳ ಜನರು ವಾಹನದಲ್ಲಿ ಓಡಾಡುವುದು ಇರಲಿ, ನಡೆದುಕೊಂಡು ಹೋಗಲು ಸಹ ಹರಸಾಹ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಇನ್ನೂ ಕೆಲ ಕಡೆಗಳಲ್ಲಿ ಸರಿಯಾಗಿ ಇದ್ದ ರಸ್ತೆಗಳನ್ನು ನಾನಾ ಕಾರಣಗಳಿಗೆ ಅಗೆದು ಹಾಳು ಮಾಡಿದ್ದಾರೆ. ಇಂತಹ ಕಡೆಗಳಲ್ಲಿ ಸಹ ವಾಹನ ಸಂಚಾರ, ಜನರ ಓಡಾಟಕ್ಕೆ ಸಮಸ್ಯೆ ಉಂಟಾಗಿದೆ. ಕಾಮಗಾರಿ ನಡೆಸುವ ಸಮಯದಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ನಡುವಿನ ಸಮನ್ವಯದ ಕೊರತೆಯಿಂದ ಜನರು ಸಂಕಷ್ಟಕ್ಕೆ ಸಿಲುಕಿವಂತಾಗಿದೆ.
ಬಡಾವಣೆಗಳ ನಿವಾಸಿಗಳು ಡಾಂಬರ್ ಅಥವಾ ಕಾಂಕ್ರೀಟ್ ರಸ್ತೆಗಳ ನಿರ್ಮಾಣಕ್ಕೆ ಪಾಲಿಕೆ ಸದಸ್ಯರಿಗೆ ಅಧಿಕಾರಿಗಳವರೆಗೆ ಮನವಿ ಸಲ್ಲಿಸುತ್ತಲೇ ಇದ್ದಾರೆ. ಆದರೆ ಯಾರೊಬ್ಬರೂ ಸ್ಪಂದನೆ ಮಾಡುತ್ತಿಲ್ಲ. ಇದೀಗ ಮಳೆರಾಯ ಕೊಂಚ ಬಿಡುವ ನೀಡಿದ್ದಾನೆ. ಈಗಲಾದರೂ ಮಹಾನಗರ ಪಾಲಿಕೆ ಅಧಿಕಾರಿಗಳು ಗುಂಡಿ ಮುಚ್ಚುವ ಕಾರ್ಯ ನಡೆಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬುದು ನಿವಾಸಿಗಳ ಆಗ್ರಹ.