ಜಿಲ್ಲೆ

ಸಮಯ ಎಲ್ಲರಿಗೂ ಸಮಾನವಾಗಿ ದೊರೆತ ಶಕ್ತಿ; ಸ್ವಾಮಿ ವೀರೇಶಾನಂದ ಸರಸ್ವತಿ ಸ್ವಾಮೀಜಿ ಅಭಿಮತ

ಬೆಂಗಳೂರು: ಸಮಯವು ಎಲ್ಲರಿಗೂ ಸಮಾನವಾಗಿ ದೊರೆತಿರುವ ಒಂದು ಅಮೂಲ್ಯ ಶಕ್ತಿ. ಇದನ್ನು ಎಚ್ಚರಿಕೆಯಿಂದ ಉಪಯೋಗಿಸಬೇಕು. ಇಲ್ಲದಿದ್ದರೆ ಮನುಷ್ಯ ದಾರಿ ತಪ್ಪುತ್ತಾನೆ ಎಂದು ತುಮಕೂರಿನ ರಾಮಕೃಷ್ಣಾಶ್ರಮದ ಶ್ರೀ ಸ್ವಾಮಿ ವೀರೇಶಾನಂದ ಸರಸ್ವತಿಗಳು ಹೇಳಿದರು.

ಪಿಇಎಸ್ ಪಿಯು ಕಾಲೇಜ್ನಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ‘ವಿದ್ಯಾರ್ಥಿಗಳ ಮುಂದಿರುವ ಸವಾಲುಗಳು ಹಾಗೂ ಸರಿಯುತ್ತರ ’ ಎಂಬ ವಿಷಯದ ಕುರಿತು ಮಾತನಾಡಿದರು.

ಜೀವನ ಎಂದರೆ ಜೀವಂತಿಕೆ. ಜೀವನಕ್ಕೆ ತಯಾರಾಗುವಾಗ ಉತ್ತಮವಾದ ಮಾದರಿಯನ್ನು ವಿದ್ಯಾರ್ಥಿ ದಿಸೆಯಲ್ಲಿಯೇ ಅನುಸರಿಸಬೇಕು. ಸಾಮಾನ್ಯ ಮತ್ತು ಅಸಾಮಾನ್ಯರ ಮಧ್ಯೆ ಒಂದೇ ವ್ಯತ್ಯಾಸ. ಅದು ’ಅ’ ಎನ್ನುವ ಅಕ್ಷರ ಮಾತ್ರ. ಈ ಅಕ್ಷರದ ಮಹತ್ವವು ಅವರವರ ಹೋರಾಟದ ಹಾದಿಯನ್ನು ಮತ್ತು ಪರಿಶ್ರಮವನ್ನು ಸೂಚಿಸುತ್ತದೆ. ನಮ್ಮ ಜೀವನವೆಂಬ ಪ್ರಯಾಣದಲ್ಲಿ ವಿದ್ಯಾರ್ಥಿಜೀವನವು ಇಂಜಿನ್ ಇದ್ದಂತೆ.

ಪ್ರಪಂಚದಲ್ಲಿ ಎರಡು ರೀತಿಯ ಜನರಿರುತ್ತಾರೆ. ಆಸೆಗಳನ್ನು ಮಾತ್ರ ಇಟ್ಟುಕೊಂಡವರು ಹಾಗೂ ಆ ಅಸೆಕನಸುಗಳನ್ನು ನನಸು ಮಾಡಲು ಪ್ರಯತ್ನಿಸುವವರು. ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ಸೋಲಿಗೆ ಹೆದರಬಾರದು ಅಲ್ಲದೆ ಗೆಲುವಿಗೆ ತಲೆ ತಿರುಗಿ ಬೀಳಬಾರದು ಎಂದು ಸ್ವಾಮೀಜಿ ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಎಂ.ಆರ್. ದೊರೆಸ್ವಾಮಿ ಮಾತನಾಡಿ, ಸ್ವಾಮಿ ವಿವೇಕಾನಂದರಿಂದ ಸ್ವತಃ ಪ್ರಭಾವಿತರಾಗಿದ್ದಾಗಿದ್ದು, ಭಗವಂತನ ಸೃಷ್ಟಿಯಲ್ಲಿ ಮನುಷ್ಯ ಜನ್ಮವೇ ಸರ್ವಶ್ರೇಷ್ಠ. ಅದನ್ನು ಸಾರ್ಥಕ ಮಾಡಿಕೊಳ್ಳಬೇಕಾದರೆ ಬುದ್ಧಿವಂತಿಕೆ ಹಾಗೂ ಸಾಮರ್ಥ್ಯಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಯಾವುದೇ ಕಾರ್ಯರಂಗದಲ್ಲಿ ಮುಂದೆ ಕೆಲಸ ಮಾಡಿದರೂ ಅದರಲ್ಲಿ ಉತ್ಕೃಷ್ಟ ಸ್ಥಾನಕ್ಕೇರಲು ಆಕಾಂಕ್ಷೆ ಹೊಂದಿರಬೇಕು. ಶಿಕ್ಷಣವೆಂದರೆ ರಾಷ್ಟ್ರವನ್ನು ಕಟ್ಟುವ ಕೆಲಸ. ಅದರಲ್ಲಿ ಯಾವುದೇ ರೀತಿಯ ರಾಜಿಯ ಅವಶ್ಯಕತೆ ಇಲ್ಲ. ಅತ್ಯುತ್ತಮ ಸಾಧನೆಗೆ ಗುರಿ ಹಾಗೂ ಪರಿಶ್ರಮಗಳೇ ಸಾಧನಗಳಾಗಿರಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪಿಇಎಸ್ ವಿಶ್ವವಿದ್ಯಾನಿಲಯದ ಹೆಚ್.ಎನ್ ಕ್ಯಾಂಪಸ್ ಅಧ್ಯಕ್ಷ ಪೊ.ಎಂ.ವಿ.ಸತ್ಯನಾರಾಯಣ ಹಾಗೂ ಪ್ರಾಂಶುಪಾಲ ಡಾ.ಸಿ.ನಾರಾಯಣ ರೆಡ್ಡಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.